ಶನಿವಾರ, ನವೆಂಬರ್ 23, 2019
18 °C

ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕು: ಇರ್ಫಾನ್ ಪಠಾಣ್

Published:
Updated:

ಮುಂಬೈ (ಪಿಟಿಐ): `ನಿಜ ಹೇಳಬೇಕೆಂದರೆ ನಾವು ಇದುವರೆಗೆ ನಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಿಲ್ಲ. ಪೂರ್ಣ ಸಾಮರ್ಥ್ಯ ಹಾಕಿ ಆಡಿದರೆ ಯಾವುದೇ ತಂಡವನ್ನು ಸೋಲಿಸಬಹುದು' ಎಂದು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಬೌಲರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.ಈಗಾಗಲೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಎರಡು ಬಾರಿ ಸೋಲು ಕಂಡಿರುವ ಡೇರ್‌ಡೆವಿಲ್ಸ್ ತಂಡದವರು ಮಂಗಳವಾರ ರಾತ್ರಿ ಮುಂಬೈ ಇಂಡಿಯನ್ಸ್ ಸವಾಲು ಎದುರಿಸಲಿದ್ದಾರೆ.`ನಾವು ಹಿಂದಿನ ಪಂದ್ಯಗಳಲ್ಲಿ ತುಂಬಾ ತಪ್ಪು ಎಸಗಿದ್ದೇವೆ. ಅಷ್ಟಾಗಿಯೂ ನಾವು ಗೆಲುವಿನ ಸಮೀಪ ಬಂದು ಎಡವಿದ್ದೇವೆ. ಯೋಜನೆಗಳನ್ನು ಸೂಕ್ತವಾಗಿ ಜಾರಿಗೊಳಿಸಿದರೆ ಯಾವುದೇ ತಂಡವನ್ನು ಮಣಿಸಬಹುದು. ಆ ಸಾಮರ್ಥ್ಯ ನಮ್ಮಲ್ಲಿದೆ' ಎಂದು ಅವರು ನುಡಿದಿದ್ದಾರೆ.`ಮುಂದಿನ ಹಂತ ಪ್ರವೇಶಿಸಲು ಯಾವುದೇ ತಂಡ 9-10 ಪಂದ್ಯಗಳನ್ನು ಗೆಲ್ಲಬೇಕು. ಹಾಗಾಗಿ ನಮಗೆ ಇನ್ನೂ ಅವಕಾಶವಿದೆ. ತಂಡದ ಎಲ್ಲಾ ಆಟಗಾರರು ಸಕಾರಾತ್ಮಕವಾಗಿದ್ದಾರೆ' ಎಂದು ಎಡಗೈ ವೇಗಿ ಹೇಳಿದ್ದಾರೆ.

`ಹೋದ ವರ್ಷ ನಾವು ನಾಲ್ಕರ ಹಂತಕ್ಕೆ ಪ್ರವೇಶ ಪಡೆದಿದ್ದವು. ದೇವರ ದಯೆಯಿಂದ ಈ ಬಾರಿಯೂ ಪ್ರವೇಶಿಸುತ್ತೇವೆ. ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಿಂದಲೇ ನಮ್ಮ ಗೆಲುವಿನ ಯಾನ ಆರಂಭವಾಗಲಿದೆ' ಎಂದರು.ಆದರೆ ಈ ಬಾರಿ ಕೆವಿನ್ ಪೀಟರ್ಸನ್ ಹಾಗೂ ಜೆಸ್ಸಿ ರೈಡರ್ ಅವರ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ ಎಂಬುದನ್ನು ಇರ್ಫಾನ್ ಒಪ್ಪಿಕೊಂಡರು.

ಪ್ರತಿಕ್ರಿಯಿಸಿ (+)