ಭಾನುವಾರ, ಡಿಸೆಂಬರ್ 15, 2019
17 °C

ಸಾಮಾಜಿಕ ತಾಣ: ಕಡಿಮೆ ಗೀಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ತಾಣ: ಕಡಿಮೆ ಗೀಳು

ದೇಶದ ನಗರ ಪ್ರದೇಶಗಳ ಯುವ ಜನರು ಸಾಮಾಜಿಕ ಜಾಲ ತಾಣಗಳ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆಯೇ. ಹೌದು ಎನ್ನುತ್ತದೆ ಸಮೀಕ್ಷೆಯೊಂದು.ಫೇಸ್‌ಬುಕ್,ಗೂಗಲ್‌ಪ್ಲಸ್, ಟ್ವಿಟರ್, ಆರ್ಕುಟ್, ಲಿಂಕ್ಡ್‌ಇನ್, ಮೈಸ್ಪೇಸ್, ಫ್ರೆಂಡ್‌ಸ್ಟರ್, ಹೈ5, ಬಿಗ್‌ಅಡ್ಡಾ ಮುಂತಾದ ಸಾಮಾಜಿಕ ಜಾಲ ತಾಣಗಳಿಂದ ಯುವಜನತೆ ನಿಧಾನವಾಗಿ ದೂರ ಸರಿಯುತ್ತಿದೆ.  ಈ ಜಾಲ ತಾಣಗಳಿಗೆ ಲಾಗಿನ್ ಆಗಲು ಯುವಕ/ಯುವತಿಯರು ಈಗ ನಿರಾಸಕ್ತಿ ತೋರುತ್ತಿದ್ದಾರೆ ಎಂಬುದೂ ಸಮೀಕ್ಷೆಯಿಂದ ತಿಳಿದುಬಂದಿದೆ.ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘವು (ಅಸೊಚಾಂ) ತನ್ನ ಸಾಮಾಜಿಕ ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸಾಮಾಜಿಕ ತಾಲ ತಾಣಗಳ ಬಗೆಗೆ ಯುವಜನತೆ ತನ್ನ ಅಭಿಪ್ರಾಯ ದಾಖಲಿಸಿದೆ. ದೇಶದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಕೋಲ್ಕತ್ತ, ಅಹಮದಾಬಾದ್, ಚಂಡೀಗಡ, ಲಖನೌ ಮತ್ತು ಪುಣೆಯಲ್ಲಿ 2011ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಈ ಸಮೀಕ್ಷೆ ನಡೆಸಲಾಗಿದೆ.`ಅಸೊಚಾಂ~ನ ಪ್ರತಿನಿಧಿಗಳು ಈ ನಗರಗಳಲ್ಲಿ 12 ವರ್ಷದಿಂದ 25 ವರ್ಷ ವಯಸ್ಸಿನ ಒಳಗಿನ 2,000 ಜನರನ್ನು ಈ ಕಾರ್ಯಕ್ಕಾಗಿ ಸಂಪರ್ಕಿಸಿ ಮಾಹಿತಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಸಾಮಾಜಿಕ ಸಂಪರ್ಕ ಜಾಲವು ಅತ್ಯಂತ ಹೆಚ್ಚು ಕ್ರಿಯಾಶೀಲವಾದ ಆನ್‌ಲೈನ್ ಚಟುವಟಿಕೆಯಾದರೂ ಸಾಮಾಜಿಕ ಜಾಲ ತಾಣಗಳನ್ನು ಬಳಸುವುದಕ್ಕೆ ಯುವ ಜನತೆ ಉದಾಸೀನತೆ ತೋರುತ್ತಿದೆ.

 

ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದರಿಂದ ಸಮಯ ಪೋಲಾಗುತ್ತದೆ, ಆಶಾಭಂಗವಾಗುತ್ತದೆ, ಮನಸ್ಸು ಗೊಂದಕ್ಕೀಡಾಗುತ್ತದೆ ಎಂಬ ಅಭಿಪ್ರಾಯವೂ ಯುವಕ/ ಯುವತಿಯರಲ್ಲಿದೆ. ಅದರ ಬದಲಿಗೆ ಹೆಚ್ಚು ಮಾಹಿತಿಗಳಿರುವ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದು, ಇ-ಮೇಲ್‌ಗಳನ್ನು ಕಳುಹಿಸುವುದು, ಆನ್‌ಲೈನ್ ಗೇಮ್‌ಗಳತ್ತ ಇವರು ಮುಖ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.ಸಮೀಕ್ಷೆಯ ವಿವರಗಳು 

ಸಾಮಾಜಿಕ ಜಾಲ ತಾಣಗಳು ಆರಂಭವಾದಾಗ ಪ್ರತಿ ತಾಣದಲ್ಲೂ ಖಾತೆಗಳನ್ನು ತೆರೆದಿದ್ದಾಗಿ ಶೇ 75ರಷ್ಟು ಯುವಕ/ಯುವತಿಯರು ಹೇಳಿದ್ದಾರೆ.ಆದರೆ, ಈಗ ಇವರಿಗೆ ಆಗಿನ ಕುತೂಹಲ ಉಳಿದಿಲ್ಲ. ಅಪರೂಪಕ್ಕೊಮ್ಮೆ ಮಾತ್ರ ತಾಣಗಳಿಗೆ ಭೇಟಿ ನೀಡಿ ತಮ್ಮ ಪ್ರೊಫೈಲ್‌ಗಳನ್ನು ವೀಕ್ಷಿಸುತ್ತಾರೆ.ಹಲವು ಜಾಲ ತಾಣಗಳ ಬದಲಿಗೆ ಕೇವಲ ಒಂದೇ ಒಂದು ತಾಣವನ್ನು ಹೆಚ್ಚಿನವರು ನೆಚ್ಚಿಕೊಂಡಿದ್ದಾರೆ. ಆ ತಾಣದ ಮೂಲಕವೇ ಅವರು ತಮ್ಮ ಸ್ನೇಹಿತರು, ಆತ್ಮೀಯರೊಂದಿಗೆ ಸಂಪರ್ಕ ಸಾಧಿಸುತ್ತಾರೆ.ಒಟ್ಟು ಎರಡು ಸಾವಿರ ಜನರಲ್ಲಿ ಶೇ 55ರಷ್ಟು ಮಂದಿ, ಸಾಮಾಜಿಕ ಜಾಲ ತಾಣಗಳಿಗೆ ಭೇಟಿ ನೀಡುವ ಅವಧಿಯನ್ನು ಕಡಿಮೆ ಮಾಡಿರುವುದಾಗಿ ಹೇಳಿದ್ದಾರೆ. ಈ ತಾಣಗಳಿಗೆ ಭೇಟಿ ನೀಡಲು ಆರಂಭದಲ್ಲಿದ್ದ ಕುತೂಹಲ, ಆಸಕ್ತಿ ಈಗ ತಮ್ಮಲ್ಲಿ ಇಲ್ಲ ಎಂಬುದು ಅವರ ಅಂಬೋಣ.

 

ಈ ತಾಣಗಳಿಗೆ ಭೇಟಿ ನೀಡುವ ಗೀಳನ್ನು ತೊರೆದಿರುವುದಾಗಿ ಕೆಲವರು ಹೇಳಿದರೆ, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ತಾಣಗಳಲ್ಲಿನ ಖಾತೆಗಳನ್ನು  ನಿಷ್ಕ್ರಿಯ ಅಥವಾ ರದ್ದುಪಡಿಸಿರುವುದಾಗಿ ಶೇ 30ರಷ್ಟು ಯುವಸಮೂಹ ಪ್ರತಿಕ್ರಿಯಿಸಿದೆ.ಖಾಸಗಿತನಕ್ಕೆ ಧಕ್ಕೆ ಬರುವ ಸಾಧ್ಯತೆ ಇರುವುದರಿಂದ ತಮ್ಮ ಖಾತೆಗಳಲ್ಲಿ ದಾಖಲಿಸಿದ್ದ ವೈಯಕ್ತಿಕ ಮಾಹಿತಿಗಳನ್ನು ತೆಗೆದು ಹಾಕಿರುವುದಾಗಿಯೂ ಕೆಲವು ಬಳಕೆದಾರರು ಹೇಳಿದ್ದಾರೆ.ತಮ್ಮ ಸ್ನೇಹಿತರೊಂದಿಗೆ ಸದಾ ಸಂಪರ್ಕದಿಂದಿರಲು ಸಾಮಾಜಿಕ ತಾಣಗಳ ಬದಲಾಗಿ ತಮ್ಮ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಗೂಗಲ್ ಟಾಕ್, ಯಾಹೂ ಮೆಸೆಂಜರ್, ಬ್ಲ್ಯಾಕ್‌ಬೆರಿ ಮೆಸೆಂಜರ್, ನಿಂಬಜ್, ವಾಟ್ಸಾಪ್, ಮಿಗ್33 ಸೇರಿದಂತೆ ಇತರ ಅಪ್ಲಿಕೇಷನ್‌ಗಳನ್ನು ಬಳಸುತ್ತಿರುವುದಾಗಿ ಶೇ 20ರಷ್ಟು ಯುವಕರು ಅಭಿಪ್ರಾಯ ಪಟ್ಟಿದ್ದಾರೆ.ಮಹಿಳೆಯರು ಹೆಚ್ಚು ಸಕ್ರಿಯ...

ಕುತೂಹಲಕರವಾದ ಸಂಗತಿಯೊಂದು ಈ ಸಮೀಕ್ಷೆಯಿಂದ ಬಹಿರಂಗವಾಗಿದೆ. ಯುವಕರಿಗಿಂತ ಯುವತಿಯರು ಹೆಚ್ಚಾಗಿ ಸಾಮಾಜಿಕ ತಾಣಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆಸಕ್ತಿದಾಯಕ ಮಾಹಿತಿಯನ್ನೂ ಸಮೀಕ್ಷೆ ಹೊರಗೆಡಹಿದೆ.

 

2000 ಮಂದಿಯಲ್ಲಿ 500 ಜನರು,  ಸಾಮಾಜಿಕ ತಾಣಗಳಿಗೆ ಭೇಟಿ ನೀಡಿ ಗಂಟೆಗೂ ಅಧಿಕ ಸಮಯವನ್ನು ಕಳೆಯುತ್ತಿರುವುದಾಗಿ ಹೇಳಿದ್ದಾರೆ. ಸ್ನೇಹಿತರೊಂದಿಗೆ ಸಂಪರ್ಕದಿಂದಿರಲು ಹಲವು ತಾಣಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿರುವುದಾಗಿ ಅವರು ವಿವರಿಸಿದ್ದಾರೆ. ಇವರಲ್ಲಿ ಶೇ 65ರಷ್ಟು ಮಂದಿ ಮಹಿಳೆಯರು.ಸಮೀಕ್ಷೆಯ ಅಂಗವಾಗಿ 200 ಜನರನ್ನು ಬೆಂಗಳೂರಿನಲ್ಲೇ ಸಂದರ್ಶಿಸಲಾಗಿದೆ. ಈ ತಾಣಗಳ ಕುರಿತಾಗಿ ಆರಂಭದಲ್ಲಿ ಇದ್ದ ಮೋಹ ಈಗ ತಮ್ಮಲ್ಲಿ ಇಲ್ಲ ಎಂದು ಅರ್ಧಕ್ಕೂ ಅಧಿಕ ಬೆಂಗಳೂರಿಗರು ಸಹ ಅಭಿಪ್ರಾಯ ಪಟ್ಟಿದ್ದಾರೆ. ಯಾವುದೇ ಅರ್ಥವಿಲ್ಲದ, ಪುನರಾವರ್ತನೆಯಾಗುವ ವಿವರಗಳು, ಸ್ಥಾನಮಾನಗಳು ಬೇಸರ ತರಿಸುತ್ತವೆ ಎಂಬುದು ತಮ್ಮ ನಿರಾಸಕ್ತಿಗೆ ಅವರು ನೀಡಿರುವ ಕಾರಣ.ಇವರಲ್ಲಿ ಶೇ 40ರಷ್ಟು ಜನರು ಮಾತ್ರ ತಮ್ಮ ಗೆಳೆಯರು, ಆತ್ಮೀಯರೊಂದಿಗೆ ಸಂಪರ್ಕದಲ್ಲಿರಲು ಈ ತಾಣಗಳನ್ನು ಬಳಸುತ್ತಿದ್ದಾರೆ. ಇವರೆಲ್ಲಾ ಸಾಮಾಜಿಕ ತಾಣಗಳಿಗೆ ಭೇಟಿ ಹೆಚ್ಚಾಗಿ ಭೇಟಿ ನೀಡುವುದು ಮನೆ, ಶಾಲೆ, ಕಾಲೇಜುಗಳಲ್ಲಿ. ವೃತ್ತಿಯಲ್ಲಿರುವಾಗ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಈ ಕೆಲಸಕ್ಕೆ ಬಳಸುತ್ತಾರೆ. ಅತಿಯಾಗಿ ಈ ತಾಣಗಳಲ್ಲಿ ತೊಡಗುವುದರಿಂದ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಮಾತ್ರವಲ್ಲದೇ ವೃತ್ತಿ ಹಾಗೂ ಖಾಸಗಿ ಜೀವನದ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವೂ ಅವರಲ್ಲಿದೆ.ಆರೋಗ್ಯದ ಕಾರಣಗಳೂ ಇವೆ...

ಸಾಮಾಜಿಕ ತಾಣಗಳಿಂದ ಯುವ ಸಮೂಹ ದೂರ ಸರಿಯುತ್ತಿರುವುದಕ್ಕೆ ಕೆಲವು ಆರೋಗ್ಯದ ಕಾರಣಗಳೂ ಇವೆ ಎಂಬುದನ್ನು ಸಮೀಕ್ಷೆ ಕಂಡು ಕೊಂಡಿದೆ.ಸಾಮಾಜಿಕ ಸಂಪರ್ಕ ಜಾಲದಲ್ಲಿ ಕಾಯಂ ಆಗಿ ತೊಡಗಿಕೊಂಡಿರುವುದರಿಂದ ನಿದ್ರಾ ಹೀನತೆ, ಖಿನ್ನತೆ, ಹೆಚ್ಚಿನ ಮಾನಸಿಕ ಒತ್ತಡ, ಏಕಾಗ್ರತೆ ಕೊರತೆ ಉಂಟಾಗಿದೆ ಎಂದು ಹೆಚ್ಚಿನವರು ಅಭಿಪ್ರಾಯ ಪಟ್ಟಿದ್ದಾರೆ.ವೈಯಕ್ತಿಕ ಬಾಂಧವ್ಯದ ವಿಶ್ವಾಸವನ್ನೂ ಈ ತಾಣಗಳು ಕುಗ್ಗಿಸುತ್ತವೆ. ಅಲ್ಲದೇ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ನಿಜ ಜೀವನದ ಸಾಮಾಜಿಕ ಸಂವಹನವನ್ನು ಅಳವಡಿಸಿಕೊಳ್ಳಲು ಯತ್ನಿಸಿದಾಗ ವರ್ತನೆಯಲ್ಲಿ ಒರಟುತನವೂ ಕಂಡು ಬರುತ್ತದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನ ಯುವಕ/ಯುವತಿಯರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)