ಸಾಮಾಜಿಕ ನ್ಯಾಯಕ್ಕೆ ಒಳಮೀಸಲಾತಿ ಅನಿವಾರ್ಯ

7

ಸಾಮಾಜಿಕ ನ್ಯಾಯಕ್ಕೆ ಒಳಮೀಸಲಾತಿ ಅನಿವಾರ್ಯ

Published:
Updated:

ಜಾತಿವಾರು ಜನಗಣತಿಯಾಗಬೇಕು. ಶೇ 15 ಪ್ರಮಾಣದ ಮೀಸಲಾತಿ ಎರಡು ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಬೇಕು ಮಾತ್ರವಲ್ಲದೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ನೂರೊಂದು ಜಾತಿಗಳಿಗೂ ಸಮಪಾಲು ಸಿಗಬೇಕೆಂದು ಕಳೆದ ಎರಡು-ಮೂರು ದಶಕಗಳಿಂದಲೂ ಮಾದಿಗ ಜಾತಿ ಸಂಘಟನೆಗಳು ಕರ್ನಾಟಕದಲ್ಲಿ ನಡೆಸಿದ ಚಳವಳಿಯ ಫಲ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ.1976ರ ಎಲ್.ಜಿ. ಹಾವನೂರ್ ವರದಿಯಲ್ಲಿ ಉಲ್ಲೇಖವಾಗಿರುವಂತೆ  ಕರ್ನಾಟಕದ ಅಸ್ಪೃಶ್ಯ ಜಾತಿಗಳಲ್ಲಿ ಒಂದಾದ ಮಾದಿಗ ಜಾತಿ ಜನಸಂಖ್ಯೆ ಶೇ 57.3 ರಷ್ಟಿತ್ತು. ಶೇ 15ರಲ್ಲಿ ಇವರಿಗೆ ಸಿಗಬೇಕಾದ ಪಾಲು ಶೇ 8. ಆದರೆ ಸಿಕ್ಕಿರುವುದು ಶೇ 2ರಷ್ಟು ಮಾತ್ರ.ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ  ಶೇ 33.47ರಷ್ಟು ಜನಸಂಖ್ಯೆಯುಳ್ಳ ಮಾದಿಗ ಸಹಸಂಬಂಧಿತ ಜಾತಿಗಳಿಗೆ ಶೇ 6, ಶೇ 32ರಷ್ಟು ಜನಸಂಖ್ಯೆಯುಳ್ಳ ಹೊಲೆಯ ಸಹಸಂಬಂಧಿತ ಜಾತಿಗಳಿಗೆ ಶೇ 5. 1976ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಯಾದ ಶೇ 23.64ರಷ್ಟು ಜನಸಂಖ್ಯೆ ಇರುವ (ಲಂಬಾಣಿ, ಬೋವಿ, ಕೊರಚ, ಕೊರಮ) ಜಾತಿಗಳಿಗೆ ಶೇ 3, ಶೇ 10.96ರಷ್ಟಿರುವ 16 ಜಾತಿಗಳನ್ನೊಳಗೊಂಡಂತೆ ಅಲೆಮಾರಿ ಅಸ್ಪೃಶ್ಯರು ಮತ್ತು ಇತರೆ ಶೇ 1ರಂತೆ ಮಿಸಲಾತಿ ನಿಗದಿಪಡಿಸುವಂತೆ ಸದಾಶಿವ ಆಯೋಗ ಸರ್ಕಾರಕ್ಕೆ ಸಲಹೆ ಮಾಡಿದೆ ಎಂಬುದು ವರದಿಯ ಮುಖ್ಯಾಂಶ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ಕಾರಿ ಹುದ್ದೆಗಳು, ಕೃಷಿ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಾದಿಗ ಜಾತಿ ಯಾವ ರೀತಿ ಅವಕಾಶ ವಂಚಿತವಾಗಿದೆ ಎಂಬ ಮಾಹಿತಿಯನ್ನು ಗಮನಿಸಬಹುದು. ಒಟ್ಟು ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ ಲಭ್ಯವಿರುವ ಮೀಸಲಾತಿಯಲ್ಲಿನ ಅವಕಾಶ ಪಡೆದು ಸೇವೆ ಸಲ್ಲಿಸುತ್ತಿರುವ ನೌಕರರು ಕೇಂದ್ರ ರಾಜ್ಯಗಳಲ್ಲಿ 1,38,000. ಶೇ 6ರಂತೆ ಮಾದಿಗ ಜಾತಿಗೆ ಸಿಗಬೇಕಾದ ಒಟ್ಟು ಹುದ್ದೆಗಳ ಸಂಖ್ಯೆ 55,200. ಪ್ರಸ್ತುತ ಸಿಕ್ಕಿರುವ ಹುದ್ದೆಗಳು (ಆರ್.ಟಿ.ಐ. ಮಾಹಿತಿ ಆಧಾರ) 23,000 (ಶೇ. 2.5), ಅಂದರೆ 32,200 ಹುದ್ದೆಗಳಿಂದ ಮಾದಿಗ ಜಾತಿ ವಂಚಿತವಾಗಿದೆ.ಇದೇ ರೀತಿ ಕೃಷಿ ಕ್ಷೇತ್ರದಲ್ಲಿ ಹೊಲೆಯ ಜಾತಿಯಲ್ಲಿ ಕೃಷಿಭೂಮಿ ಹೊಂದಿರುವವರು 1,84,816. ಸ್ವಂತ ಭೂಮಿ ಹೊಂದಿರುವವರು 1,75,720. ಸರ್ಕಾರಿ ಭೂ ಹಂಚಿಕೆಯಲ್ಲಿ ಭೂಮಿ ಪಡೆದವರು 7846. ಮಾದಿಗ ಜಾತಿಯಲ್ಲಿ ಕೃಷಿಭೂಮಿ ಹೊಂದಿರುವವರು 1,55,915. ಸ್ವಂತಭೂಮಿ ಹೊಂದಿರುವವರು 1,49,080. ಸರ್ಕಾರಿ ಭೂ ಹಂಚಿಕೆಯಲ್ಲಿ ಭೂಮಿ ಪಡೆದವರು 7452. ಭೂ ಹಂಚಿಕೆಯಲ್ಲಿ ಮಾದಿಗಜಾತಿಗೆ `-1942'ರಷ್ಟು ಅನ್ಯಾಯವಾಗಿದೆ. ಹೊಲೆಯರಿಗೆ `-149'ರಷ್ಟಾಗಿದೆ. ಇದೇ ರೀತಿ ಸ್ಪೃಶ್ಯ ಜಾತಿ ಮತ್ತು ಇತರೆ ಜಾತಿಗಳಲ್ಲಿ ಕೃಷಿಭೂಮಿ ಹೊಂದಿರುವವರು 1,49,420. ಸ್ವಂತ ಭೂಮಿ ಹೊಂದಿರುವವರು 1,46,555. ಸರ್ಕಾರಿ ಭೂ ಹಂಚಿಕೆಯಲ್ಲಿ ಪಡೆದ ಭೂಮಿ 8480. ಸ್ಪೃಶ್ಯರಿಗೆ ಆದ ಲಾಭ `+4797'.ರಾಜಕೀಯ ಪ್ರಾತಿನಿಧ್ಯ ಗಮನಿಸಿದರೆ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 36. ಶೇ 6ರಂತೆ ಮಾದಿಗ ಜಾತಿಗೆ ಸಿಗಬೇಕಾದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 14. ಪ್ರಸ್ತುತ ಇರುವ ಸಂಖ್ಯಾಬಲ 5+1,  ಆದ ನಷ್ಟ -8. ಹೊಲೆಯಜಾತಿಗೆ ಶೇ 5ರಂತೆ ಸಿಗಬೇಕಾದ ಒಟ್ಟು ಕ್ಷೇತ್ರಗಳ ಸಂಖ್ಯೆ 12. ಪ್ರಸ್ತುತ ಇರುವ ಸಂಖ್ಯಾಬಲ 8, ಆದ ನಷ್ಟ -4. ಪರಿಶಿಷ್ಟ ಪಟ್ಟಿಯಲ್ಲಿರುವ ಸ್ಪಶ್ಯ ಜಾತಿ ಮತ್ತು ಇತರೆ ಶೇ 3+1ರಂತೆ ಸಿಗಬೇಕಾದ್ದು 10. ಪ್ರಸ್ತುತ ಇರುವ ಸಂಖ್ಯೆ 22 (+12 ಹೆಚ್ಚಾಗಿದೆ).ಮೀಸಲಾತಿ ನೀತಿಗೆ ಮೇಲುಜಾತಿಯ ವಿರೋಧ ಒಂದು ರೀತಿಯಾದರೆ, ಕೆಳಜಾತಿಯವರದು ಮತ್ತೊಂದು ರೀತಿಯದು. ಪರಿಶಿಷ್ಟ ಜಾತಿಯಲ್ಲಿರುವ ಅಸ್ಪೃಶ್ಯ ಜಾತಿಗಳಲ್ಲಿ ಒಂದಾದ ಹೊಲೆಯಜಾತಿ ಮತ್ತು ಸ್ಪೃಶ್ಯ ಜಾತಿಗಳೆಂದು ಗುರುತಿಸಿರುವ ಇತರೇ ಜಾತಿಗಳು ಸದಾಶಿವ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿರುವುದು ಅಲ್ಲಲ್ಲಿ ಕೇಳಿಬರುತ್ತಿದೆ. ಈ ನಿಲುವು ಸಂವಿಧಾನ ವಿರೋಧಿ ನಿಲುವಲ್ಲದೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡುವ ಅಪಚಾರವಾಗಿದೆ. ಒಳಮೀಸಲಾತಿ ವಿರೋಧಿ ನಿಲುವಿನ ಸಾರಾಂಶವನ್ನು ಹೀಗೆ ಹೇಳಬಹುದಾಗಿದೆ:

1) ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕ

2) ಹೊಲೆಮಾದಿಗ ಜಾತಿಗಳ ನಡುವೆ ಒಳಜಗಳಕ್ಕೆ ಕಾರಣವಾಗುತ್ತದೆ

3) ಪರಿಶಿಷ್ಟರ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಿದೆ

4) ಒಳಮೀಸಲಾತಿ ಒತ್ತಾಯ ದಲಿತ ಐಕ್ಯತೆಗೆ ಮಾರಕ

5) ಖಾಸಗೀಕರಣದ ಸಂದರ್ಭದಲ್ಲಿ ಒಳಮೀಸಲಾತಿ/ಮೀಸಲಾತಿ ಅಪ್ರಸ್ತುತ- ಮೇಲಿನ ಎಲ್ಲಾ ಅಭಿಪ್ರಾಯಗಳಿಗೂ ಯಾವುದೇ ತಾತ್ವಿಕ ಆಧಾರ ಮತ್ತು ನೈತಿಕ ಹೊಣೆಗಾರಿಕೆ ಇಲ್ಲ.  ಹೊಲೆಮಾದಿಗ ಜಾತಿಗಳ ನಡುವಿನ ಜಗಳ ಸದಾಶಿವ ಆಯೋಗ ರಚನೆಯಾಗುವುದಕ್ಕಿಂತ ಮೊದಲಿನಿಂದಲೂ ಇದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಟ್ಟುವ ಕಾಲದಲ್ಲೂ ಇತ್ತು.

ದಲಿತ ಚಳವಳಿ ಎಂಬ ಮಹಾ ಆದರ್ಶ ಈ ವಾಸ್ತವತೆಯನ್ನು ಮರೆಮಾಚಿತ್ತು ಅಥವಾ ಮುಕ್ತವಾಗಿ ಚರ್ಚಿಸಿ ಸ್ವ-ವಿಮರ್ಶೆಯ ಮೂಲಕ ಬಗೆಹರಿಸಿಕೊಳ್ಳುವಲ್ಲಿ ಸಂಘಟನೆ ವಿಫಲವಾಗಿತ್ತು, ಎರಡೂ ಸತ್ಯ. ಅಸ್ಪೃಶ್ಯತೆಯ ಅನುಭವದಲ್ಲಿ ಹೊಲೆಮಾದಿಗ ಜಾತಿಗಳು ಸಮಾನ ದುಃಖಿಗಳಾದರೂ, ಬೂದಿಮುಚ್ಚಿದ ಕೆಂಡದಂತೆ ಇದ್ದ ಒಳಜಗಳ ಜ್ವಾಲೆಯಾಗಿದೆ. ಒಳಮೀಸಲಾತಿ ವಿರೋಧ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಈ ರೋಗಕ್ಕೆ ತಕ್ಕ ಮದ್ದು ಕಂಡುಹಿಡಿದು ರೋಗ ನಿರೋಧಿಸುವುದು ಹೊಲೆಮಾದಿಗ ಜಾತಿ ಸಂಘಟನೆಗಳಿಗಿರುವ ಪ್ರಸ್ತುತ ಸವಾಲು. ಸದ್ಯಕ್ಕೆ ಕೈಯಲ್ಲಿರುವ ಮದ್ದು ಸದಾಶಿವ ಆಯೋಗದ ವರದಿ.ಪರಿಶಿಷ್ಟ ಜಾತಿಪಟ್ಟಿಯಲ್ಲಿರುವ ಬೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳಿಗೆ ಸದಾಶಿವ ಆಯೋಗದ ವರದಿಯಲ್ಲಿ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದೆ. ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳು ಸ್ಪೃಶ್ಯ ಜಾತಿಗಳು, ಪರಿಶಿಷ್ಟ ಜಾತಿ ಪಟ್ಟಿಯಿಂದ ಈ ಜಾತಿಗಳನ್ನು ಕೈಬಿಡಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಇದೇ ಸಂದರ್ಭದಲ್ಲಿ ಅಗಸ ಮುಂತಾದ ಜಾತಿಗಳು ಪರಿಶಿಷ್ಟ ಪಟ್ಟಿಗೆ ಸೇರ್ಪಡೆಯಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಲು ಸರತಿ ಸಾಲಿನಲ್ಲಿ ನಿಂತಿವೆ. ಆದ್ದರಿಂದ ಸದಾಶಿವ ವರದಿ ಜಾರಿಯನ್ನು ವಿರೋಧಿಸುವ ಪರಿಶಿಷ್ಟ ಪಟ್ಟಿಯಲ್ಲಿರುವ `ಸ್ಪೃಶ್ಯ  ಜಾತಿಗಳು' 101 ಜಾತಿಗಳ ಪಟ್ಟಿಯಿಂದ ಕೈಬಿಡಬಾರದೆಂದು ಒತ್ತಾಯಿಸಬೇಕು.ಇವರನ್ನು ಪರಿಶಿಷ್ಟ ಪಟ್ಟಿಯಿಂದ ತೆಗೆದುಹಾಕಿದರೆ ಮೀಸಲಾತಿ ಸೌಲಭ್ಯದಿಂದ ದೂರ ಉಳಿಯುತ್ತಾರೆ. ಹಾಗೆ ನೋಡಿದರೆ ತಲೆ ಮೇಲೆ ಮಲ ಹೊರುವ ಅಸ್ಪೃಶ್ಯರಷ್ಟೇ, ಮುಟ್ಟಾದ ಬಟ್ಟೆ ಒಗೆಯುವ ಅಗಸರು ಹೀನಾಯ ಜಾತಿಸಂಕಟ ಅನುಭವಿಸುತ್ತಿದ್ದಾರೆ ಎನ್ನುವ ವಾದವೂ ಇದೆ. ಇದಕ್ಕೆ ಕಾರಣ ಇವರು ಸ್ಪೃಶ್ಯ ಜಾತಿಗೆ ಸೇರಿದ್ದಾರೆ. ವಿಶೇಷವಾಗಿ ಲಂಬಾಣಿ ಸಮುದಾಯ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಗಳು ಭಿನ್ನರೀತಿಯಾದವು.ಉದಾಹರಣೆಗೆ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾರ್ಪಡಿಸುವುದು, ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಲಂಬಾಣಿ ತಾಂಡಗಳಿಂದ ಮಕ್ಕಳು ಮತ್ತು ಸ್ತ್ರೀಯರ ಮಾರಾಟ ನಡೆಯುವುದನ್ನು ತಡೆಯುವಂತಹ ಕಾರ್ಯಕ್ರಮಗಳನ್ನು ರೂಪಿಸುವುದು. ಅಂತಹವರಿಗೆ ವಸತಿ ಶಾಲೆಗಳನ್ನು  ಪ್ರಾರಂಭಿಸುವುದು. ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳನ್ನು ಸಾಂಸ್ಕೃತಿಕ ರಾಜಕಾರಣದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಲ್ಲದೆ, ಸದಾಶಿವ ವರದಿ ಜಾರಿ ವಿರೋಧಿಸುವುದು ಅನಗತ್ಯ ಮತ್ತು ರಾಜಕೀಯ ಪ್ರೇರಿತ.

ಈ ಜಾತಿಗಳನ್ನು ಸಾಂಸ್ಕೃತಿಕ ರಾಜಕಾರಣಕ್ಕೆ ತರುವ ಕೆಲಸ ಈ ನಾಲ್ಕು ಜಾತಿಗಳಗೆ ಮಾತ್ರವಲ್ಲದೆ 101 ಜಾತಿಗಳಲ್ಲಿ ಬಹುಸಂಖ್ಯೆಯಲ್ಲಿರುವ ಹೊಲೆಮಾದಿಗ ಜಾತಿಗಳ ಹೆಗಲ ಮೇಲಿರುವ ಜವಾಬ್ದಾರಿ. ಪರಿಶಿಷ್ಟ ಪಟ್ಟಿಯಲ್ಲಿರುವ 101 ಜಾತಿಗಳಿಗೂ ಸಮಪಾಲು ಸಿಗಬೇಕಾದ್ದು ಸಂವಿಧಾನಾತ್ಮಕವಾದುದು ಮಾತ್ರವಲ್ಲದೆ ಅವಮಾನಿತ ಕೆಳಜಾತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸುವ ಪ್ರಯತ್ನವು ಇದಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry