ಶುಕ್ರವಾರ, ಫೆಬ್ರವರಿ 26, 2021
22 °C

ಸಾಮಾಜಿಕ ನ್ಯಾಯ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ: ಬಾಲಕೃಷ್ಣನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ನ್ಯಾಯ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ: ಬಾಲಕೃಷ್ಣನ್‌

ಬೆಂಗಳೂರು: ‘ದೇಶದಲ್ಲಿ ಸಾಮಾಜಿಕ ನ್ಯಾಯದ  ಹಂಚಿಕೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜೆ.ಬಾಲಕೃಷ್ಣನ್‌ ಕಳವಳ ವ್ಯಕ್ತಪಡಿಸಿದರು.ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಸಂವಿಧಾನ ಮತ್ತು ಮೀಸಲಾತಿ’ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ  ಅವರು ಮಾತನಾಡಿದರು.‘ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಜೀತ ಪದ್ಧತಿ ಇನ್ನೂ ಜೀವಂತವಾಗಿದೆ. ಮಾನವ ಹಕ್ಕು ಆಯೋಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ್ದೆ. ದೇಶದಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ರಾಜಕೀಯ ಹಿತಾಸಕ್ತಿ ಬಹಳ ಮುಖ್ಯ’ ಎಂದು ಪ್ರತಿಪಾದಿಸಿದರು.‘ಬಹುಜನ ಸೋಷಿಯಲ್‌ ಫೌಂಡೇಷನ್‌’ ಉದ್ಘಾಟಿಸಿದ ಉತ್ತರ ಪ್ರದೇಶದ ಮಾಜಿ ಸಚಿವ ದದ್ದು ಪ್ರಸಾದ್ ಅಹಿರ್‌  ಅವರು ಮಾತನಾಡಿ, ‘ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ ಮತ್ತು ಮೀಸಲಾತಿಯ ಕುರಿತು ಮನುವಾದಿ ಸಂಘಟನೆಗಳು ಅಪಸ್ವರ ಎತ್ತಿವೆ. ಮೀಸಲಾತಿ ರದ್ದುಗೊಳಿಸಬೇಕು ಎಂದು ಮನುವಾದಿ ಸಂಘಟನೆಗಳು ಒತ್ತಾಯ ಮಾಡುತ್ತಿವೆ.

ಈ ಸಂಘಟನೆಗಳ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ನಡೆಸುವ ಉದ್ದೇಶದಿಂದ ಬಹುಜನ ಸೋಷಿಯಲ್ ಫೌಂಡೇಷನ್ (ಬಿಎಸ್‌ಎಫ್)ಆರಂಭಿಸಲಾಗಿದೆ’ ಎಂದು ಹೇಳಿದರು.‘ಜಾತಿ ವ್ಯವಸ್ಥೆಯಲ್ಲಿ ಕೆಳಸ್ತರದಲ್ಲಿರುವ ಶೂದ್ರ ಹಾಗೂ ಅಸ್ಪೃಶ್ಯ ಸಮುದಾಯಗಳು ಅನುಭವಿಸಿರುವ ಅನ್ಯಾಯವನ್ನು ಜಗತ್ತಿನಲ್ಲಿ ಮತ್ತೆ ಯಾರೂ ಅನುಭವಿಸಿಲ್ಲ. ಈ ಘೋರ ಅನ್ಯಾಯದ ವಿರುದ್ಧ ಅನೇಕ ಮಹನೀಯರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಮೀಸಲಾತಿಯ ಆಸರೆಯಿಂದ ಶೋಷಿತ ಸಮುದಾಯ ಸ್ವಲ್ಪ ಪ್ರಗತಿ ಸಾಧಿಸಲು ಸಾಧ್ಯವಾಯಿತು’ ಎಂದರು.ಬಿಎಸ್‌ಎಫ್‌ ರಾಷ್ಟ್ರೀಯ ಮಹಾ ಕಾರ್ಯದರ್ಶಿ ಬಿ.ಗೋಪಾಲ್‌ ಅವರು ಮಾತನಾಡಿ, ‘ಮನುವಾದಿ ಸಂಘಟನೆಯ ಕೆಲವು ರಾಷ್ಟ್ರನಾಯಕರು ಮೀಸಲಾತಿ ರದ್ದುಗೊಳಿಸಲು ಕಾರ್ಯ ತತ್ಪರರಾಗಿದ್ದಾರೆ. ಇದನ್ನು ವಿರೋಧಿಸಿ ಮುಂದಿನ ಪೀಳಿಗೆಗೆ ಮೀಸಲಾತಿಯನ್ನು ಕೊಂಡೊಯ್ಯಬೇಕು ಎಂಬುದು ನಮ್ಮ ಫೌಂಡೇಶನ್‌ ಆಶಯವಾಗಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.