ಸಾಮಾಜಿಕ ಪರಿವರ್ತನೆಗೆ ಶ್ರಮಿಸಿ

7

ಸಾಮಾಜಿಕ ಪರಿವರ್ತನೆಗೆ ಶ್ರಮಿಸಿ

Published:
Updated:

ಹರಪನಹಳ್ಳಿ: ಮೌಲ್ಯಗಳ ಕುಸಿತದಿಂದ ಸಮಾಜ ಅಧಃಪತನದ ಅಂಚಿಗೆ ತಲುಪಿದೆ. ಅನೈತಿಕತೆ ತುಂಬಿ ತುಳುಕುತ್ತಿರುವ ಸಮಾಜದಲ್ಲಿ ಬದಲಾವಣೆ ವಿದ್ಯಾರ್ಥಿ ಯುವಜನರಿಂದ ಮಾತ್ರ ಸಾಧ್ಯ. ಆದರೆ, ಆ ಗುಂಪಿನಲ್ಲಿಯೂ ಆಸಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಪತಿ ಡಾ.ಮಂಜಪ್ಪ ಕೆ. ಹೊಸಮನಿ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಎಡಿಬಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಬಳ್ಳಾರಿ ವಿವಿ ಸಂಘದ ಶಿಕ್ಷಣಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ‘ವೀರಶೈವ ವಿದ್ಯಾವರ್ಧಕ ಯುವ ಜನೋತ್ಸವ-2011’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಾಗತೀಕರಣ, ಆಧುನೀಕರಣದ ಬಲವಾದ ಬಿರುಗಾಳಿಯಲಿ ತೇಲಿ ಹೋಗಿರುವ ಯುವ ಜನಾಂಗ ದಿಕ್ಕು ತಪ್ಪುತ್ತಿದೆ. ವಿದ್ಯಾರ್ಥಿ ಯುವ ಸಮುದಾಯದಲ್ಲಿ ಮೊದಲು ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸಮಾಜದಲ್ಲಿ ತಲೆದೋರಿರುವ ಮೌಲ್ಯಗಳ ದಿವಾಳಿತನವನ್ನು ಸರಿದಾರಿಗೆ ತರಬಹುದು ಹಾಗೂ ಜನರ ಮನಪರಿವರ್ತಿಸುವ ಕಾಯಕವೂ ತಂತಾನೆ ನಡೆಯುತ್ತದೆ. ಅಂತಹ ಗುರುತರ ಜವಾಬ್ದಾರಿ ಯುವಜನರ ಮೇಲಿದೆ ಎಂದರು.ದೇಶದಲ್ಲಿ ಈಗಿರುವ ಪರಿಸ್ಥಿತಿ ಮುಂದುವರಿದರೆ ಸಾಮಾಜಿಕ ಹಾಗೂ ಆರ್ಥಿಕ ಕ್ಷೋಭೆ ಉಂಟಾಗುತ್ತದೆ. ಯುವಜನತೆ ತಮ್ಮಲ್ಲಿರುವ ಹುದುಗಿರುವ ಪ್ರತಿಭೆ, ಜ್ಞಾನ, ಕ್ರಿಯಾಶೀಲತೆ ಸದ್ಬಳಕೆ ಮಾಡಿಕೊಂಡು ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಕೈಜೋಡಿಸುವಂತೆ ಕಿವಿಮಾತು ಹೇಳಿದರು.ಬಳ್ಳಾರಿ ವಿವಿ ಸಂಘದ ಸಹ ಕಾರ್ಯದರ್ಶಿ ಎಸ್.ಎಂ. ಷಡಾಕ್ಷರಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ಕೆ. ಶ್ರೀನಿವಾಸ್, ಡಿವೈಎಸ್‌ಪಿ ಅನಿತಾ ಬಿ. ಹದ್ದಣ್ಣವರ್, ತಹಶೀಲ್ದಾರ್ ಟಿ.ವಿ. ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ನಿರ್ದೇಶಕ ಕಣ್ಣಿ ರಾಜಶೇಖರ್, ಸಂಗನಕಲ್ಲು ಹೇಮಂತ್‌ರಾಜ್, ಪ್ರಾಂಶುಪಾಲರಾದ ಎಸ್. ನಾಗೇಂದ್ರಪ್ಪ, ಎಂ. ಕರುವತ್ತೆಪ್ಪ, ಅಂಬ್ಲಿ ಯೋಗೀಶ್, ಟಿ.ಎಂ. ಮಂಜುನಾಥ, ಕೆ.ಎಸ್. ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry