ಶುಕ್ರವಾರ, ಜುಲೈ 30, 2021
27 °C

`ಸಾಮಾಜಿಕ ಪಿಡುಗು: ಜಾಗೃತಿ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: `ಜಿಲ್ಲೆಯಲ್ಲಿ ಅನಕ್ಷರತೆ, ಲಿಂಗ ತಾರತಮ್ಯ, ಬಾಲ್ಯವಿವಾಹ, ಬಯಲು ಮಲ ವಿಸರ್ಜನೆಯಂತಹ ಅನೇಕ ಸಾಮಾಜಿಕ ಪಿಡುಗುಗಳಿದ್ದು, ಇವುಗಳ ನಿವಾರಣೆಗೆ ಜಾಗೃತಿ ಅಗತ್ಯವಿದೆ' ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ತಿಳಿಸಿದರು.ನವನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಹಿಳಾ ವಿ.ವಿ ವತಿಯಿಂದ ಏರ್ಪಡಿಸಲಾಗಿದ್ದ ಜಿಲ್ಲೆಯ ಪ್ರಥಮ ಮಾನವ ಅಭಿವೃದ್ಧಿ ವರದಿ ತಯಾರಿಕೆ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.`ಜಿಲ್ಲೆಯ ಜನತೆಯ ವಾರ್ಷಿಕ ತಲಾ ಆದಾಯವು ರೂ.36 ಸಾವಿರ ಇದೆ. ಆದರೆ, ಜನರ ಸಾಮಾಜಿಕ ಬದುಕಿನಲ್ಲಿ ಬದಲಾವಣೆಗಳಾಗಿಲ್ಲ. ಕೇವಲ ಆರ್ಥಿಕ ಬೆಳವಣಿಗೆ ಅಭಿವೃದ್ಧಿಯ ಸೂಚ್ಯಂಕವಾಗದೇ ಜನರ ಬದುಕಿನ ಅಭಿವೃದ್ಧಿಯಾಗಬೇಕಿದೆ' ಎಂದು ತಿಳಿಸಿದರು.`ಜಿಲ್ಲೆಯಲ್ಲಿ ಶೇ 79ರಷ್ಟು ಪುರುಷರು ಹಾಗೂ ಶೇ 58.4 ರಷ್ಟು ಮಹಿಳೆಯರು ಮಾತ್ರ ಸಾಕ್ಷರರಾಗಿದ್ದಾರೆ. ಆರೋಗ್ಯ ಹಾಗೂ ಶುಚಿತ್ವದ ಕಡೆ ಗಮನ ಹರಿಸಬೇಕಿದೆ. ಶೇ 81ರಷ್ಟು ಜನ ಇಂದಿಗೂ ಬಯಲು ಮಲ ವಿಸರ್ಜನೆಗೆ ಹೋಗುತ್ತಿರುವುದು ವಿಷಾದದ ಸಂಗತಿ' ಎಂದರು.`ಮಾನವ ಅಭಿವೃದ್ಧಿ ವರದಿಯು ಜಿಲ್ಲೆಯ ಸಮಸ್ಯೆಗಳನ್ನು ಎತ್ತಿ ತೋರಿಸಿ ಪರಿಹಾರಗಳನ್ನು ಸೂಚಿಸಬೇಕಾದ ಅಗತ್ಯವಿದೆ' ಎಂದರು. ಕಾರ್ಯಾಗಾರಕ್ಕೆ ಜಿಲ್ಲೆಯ ಅನೇಕ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ವರದಿ ತಯಾರಿಕೆಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ಒದಗಿಸಬೇಕೆಂದು ಸೂಚಿಸಿದರು.ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಬಿ.ದಂಡಿನ ಮಾತನಾಡಿ, `ಬಾಗಲಕೋಟೆ ಜಿಲ್ಲೆಯ ಸಮಸ್ಯೆಗಳನ್ನು ಬೇರುಮಟ್ಟದಿಂದ ಅರಿತು ಮಾನವ ಅಭಿವೃದ್ಧಿ ವರದಿ ತಯಾರಿಸಬೇಕು' ಎಂದು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಹಂಪಿ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಆರ್.ಚಂದ್ರಶೇಖರ್, `ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಯ ಸ್ವರೂಪವು ವಿಭಿನ್ನವೂ, ವಿಶಿಷ್ಟವೂ ಮತ್ತು ವಿಚಿತ್ರವೂ ಆಗಿದೆ. ಈ ಜಿಲ್ಲೆಯಲ್ಲಿ ಅಭಿವೃದ್ಧಿ ನಡೆದಿದೆ. ಆದರೆ, ದುಸ್ಥಿತಿಯಿಂದ ಅದು ಪೂರ್ಣವಾಗಿ ಹೊರಬಂದಿಲ್ಲ' ಎಂದರು. ಜಿಲ್ಲಾ ಪಂಚಾಯ್ತಿ ಸಿ.ಇ.ಒ ಎಸ್. ಜಿ. ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ.ರುದ್ರಗೌಡ, ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಂ.ಬಿ. ದಿಲ್‌ಷಾದ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಕೋರಿಶೆಟ್ಟರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.