ಭಾನುವಾರ, ಸೆಪ್ಟೆಂಬರ್ 27, 2020
26 °C

ಸಾಮಾಜಿಕ ಮಾಧ್ಯಮ:ಆ್ಯಪಲ್ ಸರದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ಮಾಧ್ಯಮ:ಆ್ಯಪಲ್ ಸರದಿ!

ಗ್ರಾಹಕರ ವಿಶ್ವಾಸಾರ್ಹತೆ ಮತ್ತು ಮಾರುಕಟ್ಟೆ ಮೌಲ್ಯದಲ್ಲಿ ಅಗ್ರ ಸ್ಥಾನದಲ್ಲಿರುವ `ಆ್ಯಪಲ್~ ಕಂಪೆನಿ ಸಾಮಾಜಿಕ ಮಾಧ್ಯಮ ಕ್ಷೇತ್ರ (social media)  ಪ್ರವೇಶಿಸಲಿದೆ ಎಂಬ ಸುದ್ದಿಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ.ಆ್ಯಪಲ್ ಈಗಾಗಲೇ ಕಿರು ಬ್ಲಾಗಿಂಗ್ ತಾಣ `ಟ್ವಿಟರ್~ ಜತೆ ಮಾತುಕತೆ ನಡೆಸಿದ್ದು, ಭಾರಿ ಹೂಡಿಕೆ  ಮಾಡಲಿದೆ ಎನ್ನುವ ಅಂದಾಜೂ ಇದೆ. ಆದರೆ, ಎರಡೂ ಕಂಪೆನಿಗಳು ಈವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ.ಐಫೋನ್ ಮತ್ತು ಟ್ಯಾಬ್ಲೆಟ್ ಮಾರಾಟ ಮೂಲಕ ಮನೆಮಾತಾಗಿರುವ `ಆ್ಯಪಲ್~ ಇದೇ ವೇದಿಕೆ ಬಳಸಿಕೊಂಡು ಸಾಮಾಜಿಕ ಮಾಧ್ಯಮಕ್ಕೆ ಲಗ್ಗೆ ಇಡುವ ಲೆಕ್ಕಾಚಾರದಲ್ಲಿದೆ. ವೆಬ್ ಆಧಾರಿತ ಸೇವೆಗಳು ಮತ್ತು ಮೊಬೈಲ್ ಕಂಪ್ಯೂಟಿಂಗ್ ಮಾರುಕಟ್ಟೆಗೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ರಂಗಪ್ರವೇಶ ಅನಿವಾರ್ಯ ಎನ್ನುವುದನ್ನೂ ಕಂಪೆನಿ ಕಂಡುಕೊಂಡಿದೆ.

 

ದೊಡ್ಡ ಜನಸಮೂಹ ತಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ಹೇಗೆ ಸಾಮಾಜಿಕ ತಾಣಗಳಲ್ಲಿ ವಿನಿಯೋಗಿಸುತ್ತಿದೆ ಎನ್ನುವುದೇ `ಆ್ಯಪಲ್~ ಅನ್ನು ಚಿಂತೆಗೆ ನೂಕಿದೆ ಎಂದು `ನ್ಯೂಯಾರ್ಕ್ ಟೈಮ್ಸ~ ವರದಿ ಮಾಡಿದೆ. ಆ್ಯಪಲ್ ಆನ್‌ಲೈನ್ ಮೂಲಕ ಅಪ್ಲಿಕೇಷನ್, ಗೇಮ್ಸ, ಮ್ಯೂಸಿಕ್ ಮತ್ತು ಸಿನಿಮಾಗಳನ್ನು ಮಾರುತ್ತಿರುವುದರಿಂದ `ಸಾಮಾಜಿಕ ಮಾಧ್ಯಮ~ ಮಾರ್ಗ ಇನ್ನಷ್ಟು ಸರಳವಾಗಲಿದೆ ಎಂದೂ ಹೇಳಿದೆ.`ಟ್ವಿಟರ್~ ಜತೆ ಆ್ಯಪಲ್ ಮಾಡಿಕೊಂಡಿರುವ ಹೂಡಿಕೆ ಒಪ್ಪಂದ ನೂರಾರು ಕೋಟಿ ಡಾಲರ್‌ಗಳಲ್ಲಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಒಬ್ಬ ಅಧಿಕಾರಿ. ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ. ಆದರೆ, ಎರಡೂ ಸಂಸ್ಥೆಗಳಿಗೆ ತೀವ್ರ ಪ್ರತಿಸ್ಪರ್ಧಿಗಳಾದ `ಗೂಗಲ್~ ಮತ್ತು `ಫೇಸ್‌ಬುಕ್~ ಆಧಿಪತ್ಯ ತಡೆಯುವ ನಿಟ್ಟಿನಲ್ಲಿ ಈ ಮಹತ್ವದ ಒಪ್ಪಂದ ನಡೆದಿದೆ ಎನ್ನುತ್ತಾರೆ ಅವರು.ಸದ್ಯ ಟ್ವಿಟರ್‌ನ ಮಾರುಕಟ್ಟೆ ಮೌಲ್ಯ 10 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿದೆ. ಆದರೆ, ಆ್ಯಪಲ್ ಈವರೆಗೆ ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಯಾವುದೇ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿಲ್ಲ.

 

`ಫೇಸ್‌ಬುಕ್~ ವಿಚಾರಕ್ಕೆ ಬಂದರೆ, ಐಫೋನ್‌ನಲ್ಲಿ ಫೇಸ್‌ಬುಕ್ ಸೇವೆ ನೀಡಲು ಎರಡೂ ಕಂಪೆನಿಗಳು ವರ್ಷದ ಹಿಂದೆ ಒಪ್ಪಂದಕ್ಕೆ ಬಂದಿದ್ದವು. ಆದರೆ, ಇದು ಕೆಲವೇ ದಿನಗಳಲ್ಲಿ ಮುರಿದು ಬಿದ್ದಿತು. ಮೈಕ್ರೊಸಾಫ್ಟ್‌ನಲ್ಲಿ `ಫೇಸ್‌ಬುಕ್~ ಅಲ್ಪ ಪ್ರಮಾಣದ ಪಾಲು ಹೊಂದಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ವಿಶ್ಲೇಷಕರು.ಗೂಗಲ್‌ನ ವಿಷಯಕ್ಕೆ ಬಂದರೆ, ಆಪಲ್‌ಗೆ ಗೂಗಲ್ ಕಡು ಶತ್ರು. ಯಾವುದೇ ಕಾರಣಕ್ಕೂ ಸಂಸ್ಥೆ ಗೂಗಲ್ ಜತೆ ಪಾಲುದಾರಿಕೆಗೆ ಸಿದ್ಧವಾಗದು. ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆ ಮತ್ತು `ಗೂಗಲ್ ಪ್ಲಸ್~ ಸಾಮಾಜಿಕ ತಾಣದ ಮೂಲಕವೂ ಆ್ಯಪಲ್‌ಗೆ ಗೂಗಲ್ ಸ್ಪರ್ಧೆ ನೀಡುತ್ತಿದೆ.`ಆ್ಯಪಲ್ ಸಾಮಾಜಿಕ ಮಾಧ್ಯಮ ರಂಗದಲ್ಲಿಲ್ಲ. ಆದರೆ, ಇಂಥದೊಂದು ಅನಿವಾರ್ಯತೆ ಕಂಪೆನಿಗೆ ಇದೆಯೇ? ಎಂದರೆ, ಸದ್ಯದ ಪರಿಸ್ಥಿತಿಯಲ್ಲಿ ಹೌದು ಎಂದೇ ಉತ್ತರಿಸಬೇಕಾಗುತ್ತದೆ ಎಂದಿದ್ದರು `ಆ್ಯಪಲ್~ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮ್ ಕುಕ್. ಇತ್ತೀಚೆಗೆ ತಂತ್ರಜ್ಞಾನ ಮೇಳವೊಂದರಲ್ಲಿ ಹೀಗೆ ಹೇಳುವ ಮೂಲಕ ಕುಕ್ ಸಾಮಾಜಿಕ ಮಾಧ್ಯಮ ಪ್ರವೇಶದ ಸೂಚನೆ ನೀಡಿದ್ದರು.ಐಫೋನ್ ಮತ್ತು ಟ್ಯಾಬ್ಲೆಟ್‌ನಲ್ಲಿ ಟ್ವಿಟರ್ ಬಳಸುವುದಕ್ಕೆ ಸಂಬಂಧಿಸಿ ಆ್ಯಪಲ್ ಅಪ್ಲಿಕೇಷನ್ಸ್ ಅಭಿವೃದ್ಧಿಪಡಿಸುತ್ತಿದೆ. ಟ್ವಿಟರ್ ಕೂಡ ಆ್ಯಪಲ್ ಜತೆಗಿನ ಬಾಂಧವ್ಯ ಬಲಪಡಿಸಿಕೊಳ್ಳಲು ಯತ್ನಿಸುತ್ತಿದೆ. ಈ ಹೂಡಿಕೆ 117 ಶತಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದೆ.ವಿಶೇಷವೆಂದರೆ ಕಳೆದ ವಾರವಷ್ಟೇ ಆ್ಯಪಲ್ 356 ದಶಲಕ್ಷ ಡಾಲರ್‌ಗೆ ಮೊಬೈಲ್ ಸೆಕ್ಯುರಿಟಿ ಸಂಸ್ಥೆ ಅಥೆಂಟೆಕ್     (AuthenTec Inc)   ಸ್ವಾಧೀನಪಡಿಸಿಕೊಂಡಿದೆ. `ಸಿಇಒ~ ಆಗಿ ನೇಮಕಗೊಂಡ ನಂತರ `ಟಿಮ್ ಕುಕ್~ರ ದೊಡ್ಡ ಕಾರ್ಯಾಚರಣೆ ಇದು. ಸಾಮಾಜಿಕ ಮಾಧ್ಯಮ ಪ್ರವೇಶಕ್ಕೆ ಪೂರ್ವಸಿದ್ಧತೆಯಾಗಿ ಈ ಸ್ವಾಧೀನ ಪ್ರಕ್ರಿಯೆ ನಡೆದಿದೆ ಎನ್ನಲಾಗುತ್ತಿದೆ.ಸದ್ಯ ಮಾಸಿಕ 140 ದಶಲಕ್ಷ ಕ್ರಿಯಾಶೀಲ ಬಳಕೆದಾರರಿರುವ ಟ್ವಿಟರ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ತಾಣ. ಅಸಲಿಗೆ ಟ್ವಿಟರ್‌ಗೆ ಆ್ಯಪಲ್‌ನ ಹೂಡಿಕೆಗೆ ಬೇಕಿಲ್ಲ. ಕಂಪೆನಿಗೆ ಸೇರಿದ ಮೂಟೆಗಟ್ಟಲೆ ಹಣ ಬ್ಯಾಂಕ್‌ನಲ್ಲಿದೆ ಎಂದು ಕಂಪೆನಿ `ಸಿಇಒ~ ಡಿಕ್ ಕೊಸ್ಟೊಲೊ ಕೆಲವು ತಿಂಗಳ ಹಿಂದೆ ಹೇಳಿದ್ದರು. ಒಂದು ಅಂದಾಜಿನಂತೆ ಟ್ವಿಟರ್ ಬಳಿ 600 ದಶಲಕ್ಷ ಡಾಲರ್ ನಗದು ಬಂಡವಾಳ ಇದೆ.ಇತ್ತೀಚೆಗೆ ಜಾಹೀರಾತಿನಿಂದ ಬರುವ ವರಮಾನವೂ ಹೆಚ್ಚಿರುವುದು ಮತ್ತು ಮಾರುಕಟ್ಟೆಯಿಂದ 1 ಶತಕೋಟಿ ಡಾಲರ್ ಬಂಡವಾಳ ಸಂಗ್ರಹಿಹವಾಗಿರುವುದು ನಗದು ಲಭ್ಯತೆ ಹೆಚ್ಚುವಂತೆ ಮಾಡಿದೆ. ಅಲ್ಲದೆ ಮುಂದಿನ 2 ವರ್ಷಗಳಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಇನ್ನಷ್ಟು ಬಂಡವಾಳ ಸಂಗ್ರಹಿಸುವ ಕುರಿತೂ ಕಂಪೆನಿ ಚಿಂತನೆ ನಡೆಸುತ್ತಿದೆ.ಗಮನಿಸಬೇಕಾದ ವಿಷಯವೆಂದರೆ, ಟ್ವಿಟರ್ ಯಾವುದೇ ರೀತಿಯಲ್ಲೂ ಆ್ಯಪಲ್‌ಗೆ ಸ್ಪರ್ಧೆ ಒಡ್ಡುವ ಕಂಪೆನಿ ಅಲ್ಲ. ಈ ನಿಟ್ಟಿನಲ್ಲಿ ಆ್ಯಪಲ್‌ನೊಂದಿಗಿನ ಪಾಲುದಾರಿಕೆಗೆ ಮುಂದಾಗಬಹುದು. `ಆ್ಯಪಲ್ ಸಖ್ಯ ಅತ್ಯಂತ ಮಹತ್ವದದ್ದು ಎಂದು ಕೊಸ್ಟೊಲೊ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.ಅಲ್ಲದೆ, ಟ್ವಿಟರ್‌ನ ಮುಖ್ಯ ಹಣಕಾಸು ಅಧಿಕಾರಿ ಆಲಿ ರೊವಾಗ್ನಿ  ಈ ಹೂಡಿಕೆ ಇತ್ಯರ್ಥದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಹಿಂದೆ ಇದೇ ರೋವಾಗ್ನಿ `ಪಿಕ್ಸರ್ ಅನಿಮೇಷನ್ ಸ್ಟುಡಿಯೊ~ ಎಂಬ ಸಂಸ್ಥೆಯಲ್ಲಿದ್ದರು. ಈ ಸಂಸ್ಥೆ `ಆ್ಯಪಲ್~ಜತೆ ಪಾಲುದಾರಿಕೆ ಹೊಂದಿತ್ತು.

 

ಹಾಗೂ ರೂವಾಗ್ನಿ ಸ್ಟೀವ್ ಜಾಬ್ಸ್‌ಗೆ ಹತ್ತಿರದವರಾಗಿದ್ದರು. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನೆರಡು ತಿಂಗಳಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಟ್ವಿಟರ್ ಮತ್ತು ಆ್ಯಪಲ್‌ನ ಮೈತ್ರಿ ಪರ್ಯಾಯ ವೇದಿಕೆಯೊಂದನ್ನು ಸೃಷ್ಟಿಸಲಿದೆ ಎನ್ನುವುದು ಸತ್ಯ.

ಫೇಸ್‌ಬುಕ್ ಫೋನ್

ಮೊಬೈಲ್ ಕಂಪ್ಯೂಟಿಂಗ್ ಮತ್ತು ಕಿಸೆ ಗಣಕಗಳ (ಜೇಬಿನಲ್ಲಿ ಇಟ್ಟುಕೊಳ್ಳಬಹುದಾದ ಡಿವೈಸ್‌ಗಳು) ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಸ್ವಂತ ಬ್ರಾಂಡ್‌ನ ಹ್ಯಾಂಡ್‌ಸೆಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡುವುದಾಗಿ ಫೇಸ್‌ಬುಕ್ ಹೇಳಿದೆ. ಈಗಾಗಲೇ ಫೇಸ್‌ಬುಕ್ `ಆ್ಯಪ್ ಸೆಂಟರ್~ ಜನಪ್ರಿಯಗೊಂಡಿದೆ.ಗೂಗಲ್ ಕಳೆದ ವರ್ಷ ಮೊಟರೊಲ ಮೊಬಿಟಿಲಿ ಸಂಸ್ಥೆ ಸ್ವಾಧೀನಪಡಿಸಿಕೊಂಡಿದ್ದು, ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಹ್ಯಾಂಡ್‌ಸೆಟ್ ಬಿಡುಗಡೆ ಮಾಡಿದೆ. ಮೊಬೈಲ್ ಮಾರುಕಟ್ಟೆ ಗೆಲ್ಲಲು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಎರಡರಲ್ಲೂ ಮೇಲುಗೈ ಸಾಧಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ರೀತಿಯ ಕಸರತ್ತು ಅನಿವಾರ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.