ಶುಕ್ರವಾರ, ಆಗಸ್ಟ್ 23, 2019
22 °C

`ಸಾಮಾಜಿಕ ಮಾಧ್ಯಮಗಳಿಗೆ ಇಲ್ಲದ ನಿಬಂಧನೆ'

Published:
Updated:

ಉಡುಪಿ: `ಜನರು ನೋಡಲೇಬೇಕಾದ ಸುದ್ದಿಯನ್ನು ನೀಡುವುದರ ಬದಲಿಗೆ, ಜನರು ಇಷ್ಟಪಡುವ ಸುದ್ದಿ- ಕಾರ್ಯಕ್ರಮಗಳನ್ನು ಮಾಧ್ಯಮಗಳು ನೀಡುತ್ತಿವೆ' ಎಂದು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಅಭಿಪ್ರಾಯಪಟ್ಟರು.ಮಣಿಪಾಲ್ ಸಂವಹನ ಸಂಸ್ಥೆ (ಎಂಎಸ್‌ಸಿ) ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ವ ನಿಯಂತ್ರಣ ಹೇರಿಕೊಳ್ಳಿ ಎಂದು ಯಾವುದೇ ವ್ಯಕ್ತಿಗೆ ಸೂಚಿಸಿವುದು ಸರಿಯಲ್ಲ. ಸಂಹಿತೆ ಮತ್ತು ನಿಯಮಗಳು ಎಲ್ಲರಿಗೂ ಅನ್ವಯಿಸುವಂತೆ ಇರಬೇಕು. ಈಗ ಮಾಧ್ಯಮಗಳ ಮೇಲೆ ನಿಯಮ ಹೇರಬೇಕು ಎಂದು ಹೇಳುತ್ತಾರೆ. ಆದರೆ ಸಾಮಾಜಿಕ ಮಾಧ್ಯಮಗಳಿಗೆ (ಸೋಶಿಯಲ್ ಮೀಡಿಯಾ) ಯಾವುದೇ ನಿಬಂಧನೆ ಇಲ್ಲದಾಗಿದೆ. ಪ್ರಭಾವಿ ಮಾಧ್ಯಮ ಆಗಿರುವ ಸಾಮಾಜಿಕ ಮಾಧ್ಯಮಕ್ಕೆ ಇಲ್ಲದೆ ಇರುವ ಮಿತಿ- ನಿಬಂಧನೆಯನ್ನು ಟಿ.ವಿ. ಅಥವಾ ಪತ್ರಿಕಾ ಮಾಧ್ಯಮಕ್ಕೆ ಹೇರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.ಜಾಹೀರಾತು ಪ್ರಸಾರದ ಅವಧಿಗೆ `ಟ್ರಾಯ್' ಮಿತಿ ಹೇರಿರುವುದು ಸರಿಯಲ್ಲ. ನಿವೃತ್ತ ಅಧಿಕಾರಿಗಳನ್ನು ಟ್ರಾಯ್ ಅಂತಹ ಸಂಸ್ಥೆಗಳಿಗೆ ನೇಮಿಸಿರುವುದರಿಂದಲೇ ಇಂತಹ ತರ್ಕ ಇಲ್ಲದ ನಿಯಮವನ್ನು ಜಾರಿಗೆ ಬರುತ್ತಿವೆ. ಮಾಧ್ಯಮ ಕ್ಷೇತ್ರದಲ್ಲೇ ಇರುವ ಅಥವ ಬೇರೆ ಯಾವುದೇ ಕ್ಷೇತ್ರದ ಯೋಗ್ಯ ವ್ಯಕ್ತಿಗಳನ್ನು ಜವಾಬ್ದಾರಿಯುತ ಸಂಸ್ಥೆಗಳಿಗೆ ನೇಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.ನಾನು ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಇಪ್ಪತ್ತು ವರ್ಷಗಳಾಗಿವೆ. ಈ ಅವಧಿಯಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮವಾಗಿ ಸಾಕಷ್ಟು ಬದಲಾವಣೆ ಈ ಕ್ಷೇತ್ರದಲ್ಲಿ ಆಗಿದೆ. ಮಾಧ್ಯಮ ಸಂಸ್ಥೆಗಳ ಆದ್ಯತೆಗಳು ಬದಲಾಗಿದ್ದು ಸುದ್ದಿಯನ್ನು ವೈಭವೀಕರಿಸುವ ಪ್ರವೃತ್ತಿ ಹೆಚ್ಚಾಗಿದೆ. `ಪೇಜ್ 3' ಸುದ್ದಿಗಳು ಮುಖ ಪುಟದಲ್ಲಿ ಪ್ರಕಟಿಸಲಾಗುತ್ತಿದೆ. ಇವು ಜನರು ನೋಡಲು ಬಯಸುವ ಸುದ್ದಿ ಇರಬಹುದು, ಆದರೆ ಜನರು ನೋಡಲೇಬೇಕಾದ ಸುದ್ದಿಗಳನ್ನು ನೀಡುವುದು ನಮ್ಮ ಆದ್ಯತೆ ಆಗಬೇಕು ಎಂದರು.ಪತ್ರಕರ್ತರಿಗೆ ವೃತ್ತಿ ಧರ್ಮ ಮತ್ತು ಸಂಹಿತೆಯನ್ನು ಯಾರೂ ಕಲಿಸಿಕೊಡುವುದಿಲ್ಲ. ಪ್ರತಿಪತ್ರಕರ್ತನೂ ಅದನ್ನು ರೂಢಿಸಿಕೊಳ್ಳಬೇಕು. ಕೆಲಸ ಮಾಡಿ ಸಂಜೆ ಮನೆಗೆ ಹೋದಾಗ ತೃಪ್ತಿ ಎನಿಸಬೇಕು. ಮಾಡಿದ ಕೆಲಸವನ್ನು ನಮ್ಮ ಮನಸ್ಸು ಸರಿ ಎಂದು ಒಪ್ಪಬೇಕು. ಪತ್ರಕರ್ತ ವಿಶ್ವಾಸಾರ್ಹತೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ಅವರು ಕಿವಿ ಮಾತು ಹೇಳಿದರು.  ಬಿಹಾರದಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಮಕ್ಕಳು ಸಾವನ್ನಪ್ಪಿದ ಸುದ್ದಿಯನ್ನು ವೈಭವೀಕರಿಸಲಾಯಿತು. ಆದರೆ ಬಿಸಿಯೂಟ ಕಾರ್ಯಕ್ರಮ ಜಾರಿಯಲ್ಲಿರುವ ರಾಜ್ಯಗಳಲ್ಲಿ ಮಕ್ಕಳಿಗೆ ಆಗಿರುವ ಅನುಕೂಲ ಏನು ಎಂಬುದನ್ನೂ ನಾವು ನೋಡಬೇಕು. ಅರ್ಧ ನೀರು ತುಂಬಿರುವ ಲೋಟವನ್ನು ನೋಡಿ ಅರ್ಧ ಖಾಲಿ ಇದೆ ಎನ್ನಬಹುದು ಅಥವಾ ಅರ್ಧ ತುಂಬಿದೆ ಎಂದೂ ಹೇಳಬಹುದು. ಕೇವಲ ನಕಾರಾತ್ಮಕ ಧೋರಣೆ ಸಲ್ಲದು. ಸುದ್ದಿಯೊಂದನ್ನು ಎಲ್ಲ ಕೋನಗಳಿಂದ ನೋಡಬೇಕು ಎಂದು ಅವರು ಹೇಳಿದರು.ಅಪರಾಧ ಸುದ್ದಿಯನ್ನು ನೀಡುವ ನಿರೂಪಕ ಸ್ವತಃ ಕ್ರಿಮಿನಲ್ ಹಾಗೆ ವೇಷಭೂಷಣ ಧರಿಸಿಕೊಂಡಿರುತ್ತಾನೆ. ಏಕೆ ಎಂದು ಕೇಳಿದರೆ, `ಜನರು ಇಷ್ಟ ಪಡುತ್ತಾರೆ, ಸುದ್ದಿ ಮಾರಾಟ ಆಗುತ್ತದೆ' ಎಂದು ಹೇಳುತ್ತಾರೆ. ಸುದ್ದಿಯನ್ನು ಮಾರಾಟ ಮಾಡಲು ಅದೇನು ಸಿನಿಮಾ ಅಲ್ಲ.

ಪ್ರಾದೇಶಿಕ ಮಾಧ್ಯಮಗಳಿಗೆ ಉತ್ತಮ ಭವಿಷ್ಯ ಇದೆ ಎಂದು ರಾಜ್‌ದೀಪ್ ಹೇಳಿದರು.ಎಂಎಸ್‌ಸಿಯ ಮುಖ್ಯಸ್ಥ ವರದೇಶ್ ಹಿರೇಗಂಗೆ, ಮಣಿಪಾಲ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಅಲೆಕ್ಸಾಂಡರ್ ಚಾಂಡಿ ಉಪಸ್ಥಿತರಿದ್ದರು.

Post Comments (+)