ಸಾಮಾಜಿಕ ಮಾಧ್ಯಮ ನಿಯಂತ್ರಣ

7

ಸಾಮಾಜಿಕ ಮಾಧ್ಯಮ ನಿಯಂತ್ರಣ

Published:
Updated:

ರಾಜಕೀಯ ಮುಖಂಡರು ವೈಯಕ್ತಿಕ ಮತ್ತು ಪಕ್ಷದ ಲಾಭಕ್ಕಾಗಿ ಕೋಮು ಗಲಭೆಗಳನ್ನು ಬೆಂಬಲಿಸುತ್ತಿರುವ ಪ್ರವೃತ್ತಿಯ ಬಗ್ಗೆ ದೆಹಲಿಯಲ್ಲಿ ನಡೆದ \ರಾಷ್ಟ್ರೀಯ ಭಾವೈಕ್ಯ ಮಂಡಳಿಯ ಸಭೆಯಲ್ಲಿ ತೀವ್ರ ಆತಂಕ ವ್ಯಕ್ತವಾಗಿದೆ.ಉತ್ತರ ಪ್ರದೇಶದ ಮುಜಫ್ಫರ್‌ನಗರದ ಕೋಮು ಗಲಭೆಗಳು ಇಂತಹದೊಂದು ಆತಂಕ ಮೂಡಿಸಿರುವುದು ಸಹಜವೇ ಆಗಿದೆ.  ಕೋಮು ಸೌಹಾರ್ದ ಕದಡಲು ಸಾಮಾಜಿಕ ಜಾಲ ತಾಣಗಳು ದುರ್ಬಳಕೆ ಆಗುತ್ತಿರುವ ಬಗ್ಗೆ ಪ್ರಧಾನಿಯವರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳೂ ಇದಕ್ಕೆ ದನಿಗೂಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಹಾಗೂ ಆಕ್ಷೇಪಾರ್ಹ ಸಂದೇಶಗಳಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯವನ್ನು ಇದು ಸೂಚಿಸುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು  ಮೊಬೈಲ್ ಮೂಲಕ ದೊಡ್ಡ ಸಂಖ್ಯೆಯಲ್ಲಿ ಉದ್ರೇಕಕಾರಿ ಎಸ್‌ಎಂಎಸ್‌ಗಳನ್ನು ರವಾನಿಸಿ ಕೋಮು ಗಲಭೆಗಳನ್ನು ಪ್ರಚೋದಿಸುವುದು ಅಕ್ಷಮ್ಯ.  ಅತ್ಯಾಧುನಿಕ ತಂತ್ರಜ್ಞಾನದ ಸಾಧನಗಳನ್ನು ದೇಶವಾಸಿಗಳ ನಡುವೆ ಹೀಗೆ ದ್ವೇಷ ಮೂಡಿಸಲು ಉಪಯೋಗಿಸುತ್ತಿರುವುದು ಕಳವಳಕಾರಿ ವಿದ್ಯಮಾನ.ಸಾಮಾಜಿಕ ಜಾಲತಾಣಗಳು ಮುಖ್ಯವಾಗಿ ಯುವಜನರ ನಡುವೆ ಅತ್ಯಂತ ಜನಪ್ರಿಯವಾಗಿದ್ದು, ವಿಡಿಯೊಗಳು, ಸಂದೇಶಗಳು ಕ್ಷಣಮಾತ್ರದಲ್ಲಿ ಲಕ್ಷಾಂತರ ಜನರಿಗೆ ತಲುಪುತ್ತವೆ. ಯುವಜನರಲ್ಲಿ ವಿವೇಚನಾ ಶಕ್ತಿ ಹಿರಿಯರಿಗಿಂತ ಕಡಿಮೆ ಇದ್ದು, ಬಹುಬೇಗ ಪ್ರಚೋದನೆಗೂ ಒಳಗಾಗುತ್ತಾರೆ. ಒಂದು ಕೋಮಿನ ಯುವಕರನ್ನು ಇನ್ನೊಂದು ಕೋಮಿನವರು ಚಚ್ಚಿಹಾಕುವ ನಕಲಿ ವಿಡಿಯೊವೊಂದು ಯುಟ್ಯೂಬ್‌ನಲ್ಲಿ ಲಕ್ಷಾಂತರ ಜನರಿಗೆ ಹರಿದಾಡಿದ್ದೇ ಮುಜಫ್ಫರ್‌ನಗರದಲ್ಲಿ ಘರ್ಷಣೆ ವ್ಯಾಪಕವಾಗಲು ಕಾರಣವಾಯಿತು ಎನ್ನುವುದು ಇದಕ್ಕೊಂದು ಜ್ವಲಂತ ಉದಾಹರಣೆ.ಹಾಗೆಯೇ ಕಳೆದ ವರ್ಷ ಈಶಾನ್ಯ ರಾಜ್ಯಗಳ ಜನರು ಬೆಂಗಳೂರಿನಿಂದ ಆ ರಾಜ್ಯಗಳಿಗೆ ಸಾಮೂಹಿಕ ವಲಸೆ ಹೋದ ವಿದ್ಯಮಾನಕ್ಕೂ ಕಾರಣವಾಗಿದ್ದು ಸಾಮಾಜಿಕ ಜಾಲ ತಾಣಗಳ ದುರ್ಬಳಕೆಯೇ. ಇಂತಹವು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆಗಳು ಅಗತ್ಯ. ಸಾಮಾಜಿಕ ಜಾಲತಾಣ ಗಳನ್ನು ಬಳಸುವ ಯಾರೇ ಆದರೂ ಹೆಚ್ಚು ಜವಾಬ್ದಾರಿಯಿಂದ ವರ್ತಿಸ ಬೇಕು. ಅನಾಮಧೇಯತೆ ಕಾಪಾಡಿಕೊಳ್ಳಲು ಇರುವ ಅವಕಾಶವೇ ಇಂತಹ ದೊಡ್ಡ ಅವಾಂತರಗಳಿಗೆ ಕಾರಣವಾಗುತ್ತಿದೆ. ಅನಾಮಧೇಯ ಖಾತೆಗಳ ಮೂಲಕ ನಿಂದನಾತ್ಮಕ ಟೀಕೆಗಳು, ದ್ವೇಷಪೂರಿತ ಅಭಿಪ್ರಾಯಗಳು, ಪ್ರತಿಕ್ರಿಯೆಗಳನ್ನು ಹರಿಯಬಿಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ.ತಮ್ಮ ಹೆಸರನ್ನು ಬಚ್ಚಿಟ್ಟು ಪ್ರತಿಕ್ರಿಯೆ ನೀಡುವುದು ಬೇಜವಾಬ್ದಾರಿತನ ಮತ್ತು ಹೇಡಿತನದ ಲಕ್ಷಣ. ಇಂತಹ ಅನಾಮಧೇಯತೆಗೆ ಅವಕಾಶ ಇಲ್ಲದಂತಹ ವ್ಯವಸ್ಥೆಯನ್ನು  ರೂಪಿಸಬಹುದಾದ ಸಾಧ್ಯತೆಗಳನ್ನು ಹುಡುಕುವುದು ಅವಶ್ಯ. ಮಾಹಿತಿ ತಂತ್ರಜ್ಞಾನ ಸ್ಫೋಟವಾದ ನಂತರ ಸೈಬರ್ ಅಪರಾಧಗಳನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಗಡಿಯೇ ಇಲ್ಲದ ಸೈಬರ್‌ ಅಪರಾಧಗಳ ನಿಯಂತ್ರಣ ಸರ್ಕಾರಕ್ಕೂ ದೊಡ್ಡ ತಲೆನೋವಾಗಿದೆ. ಇದಕ್ಕಾಗಿ ಸೈಬರ್‌ ಅಪರಾಧ ಪತ್ತೆಹಚ್ಚುವ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕಿದೆ.  ಆದರೆ ಇಂತಹ ಕ್ರಮಗಳು  ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಧನವಾಗದಂತೆಯೂ ಜಾಗರೂಕತೆ ವಹಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry