ಶುಕ್ರವಾರ, ನವೆಂಬರ್ 15, 2019
21 °C

ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಮಾತಿನ ಚಕಮಕಿ

Published:
Updated:

ಮೊಳಕಾಲ್ಮುರು: ತಾಲ್ಲೂಕಿನ ರಾಂಪುರ ಗ್ರಾ.ಪಂ. ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆಯಲ್ಲಿ ಸಾರ್ವಜನಿಕರು ಮಾತಿನ ಚಕಮಕಿ ನಡೆಸಿದರು.ಉದ್ಯೋಗಖಾತ್ರಿ ಯೋಜನೆಯಲ್ಲಿ ಎನ್‌ಎಂಆರ್‌ನಲ್ಲಿ ಕಾರ್ಮಿಕರ ಸಹಿ ತಾಳೆಯಾಗುತ್ತಿಲ್ಲ, ಗಣಕಯಂತ್ರ ಎನ್‌ಎಂಆರ್‌ನಲ್ಲಿ ಸಹಿ ಇಲ್ಲದೇ ಕೂಲಿ ಪಾವತಿ ಮಾಡಲಾಗಿದೆ, ಕಾಮಗಾರಿಗಳ ಆರಂಭ ದಿನ, ಕೊನೆಗೊಂಡ ದಿನ, ಕಾಮಗಾರಿ ಹೆಸರು ಸರಿಯಾಗಿ ನಮೂದಿಸುತ್ತಿಲ್ಲ. ಬಹುತೇಕ ಕಡೆ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಜನರು ದೂರಿದರು.ವಡೇರಹಳ್ಳಿ ಬಳಿ ನಿರ್ಮಿಸಿರುವ ಆರು ಕೃಷಿ ಹೊಂಡಗಳು ಒಡೆದು ಹೋಗಿರುವ ಮೂಲಕ ಕಾಮಗಾರಿ ಗುಣಮಟ್ಟ ಪ್ರಶ್ನೆ ಮಾಡುವಂತಾಗಿದೆ. ಆಡಳಿತ ವೆಚ್ಚವನ್ನು ಸಹ ಹೆಚ್ಚುವರಿಯಾಗಿ ಖರ್ಚು ಮಾಡಲಾಗಿದೆ, ಕಾಮಗಾರಿ ಸ್ಥಳದಲ್ಲಿ ನಾಮಫಲಕ ಹಾಕಲಾಗುವುದು ಎಂದು ಹೇಳಿದ್ದು ಎಲ್ಲಿಯೂ ಹಾಕಿಲ್ಲ ಎಂದರು.ಖಾತ್ರಿ ಯೋಜನೆ ಕೂಲಿ ಬಿಡುಗಡೆ ಮಾಡಿಲ್ಲ, ಶೌಚಾಲಯ ಕಟ್ಟಿಸಿಕೊಂಡು ವರ್ಷ ಕಳೆದರೂ ಪ್ರೋತ್ಸಾಹ ಹಣ ನೀಡಿಲ್ಲ, ಖಾತ್ರಿ ಯೋಜನೆ ಕಾಮಗಾರಿ ಆಯ್ಕೆಯನ್ನು ಬೇಕಾಬಿಟ್ಟಿ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಪರಮೇಶ್ವರಪ್ಪ, ಶಿವಕುಮಾರ್, ಪೆನ್ನೋಬಳಿ ಆರೋಪಿಸಿದರು. ನೋಡಲ್ ಅಧಿಕಾರಿ ಆರ್. ವಿರೂಪಾಕ್ಷಪ್ಪ, ಗ್ರಾ.ಪಂ. ಅಧ್ಯಕ್ಷೆ ರಹಮತ್ ಭೀ, ಡಿ.ಸಿ. ನಾಗರಾಜ್. ವೀರಭದ್ರಪ್ಪ, ಮಲ್ಲಪ್ಪ ಇದ್ದರು.

ಪ್ರತಿಕ್ರಿಯಿಸಿ (+)