ಸಾಮಾಜಿಕ ಸಮಾನತೆ ಅವಶ್ಯ

7

ಸಾಮಾಜಿಕ ಸಮಾನತೆ ಅವಶ್ಯ

Published:
Updated:

ಹಾವೇರಿ: ‘ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ತಂದುಕೊಟ್ಟ ಸಮಾನತೆ ರಾಜಕೀಯವಾಗಿ ದೊರೆತಿದೆ. ಆದರೆ, ಸಾಮಾಜಿಕವಾಗಿ ಈವರೆಗೆ ದೊರೆಯದಿರುವುದು ದುರ್ದೈವದ ಸಂಗತಿ’ ಎಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.ನಗರದ ಹೊಸಮಠದ ಎಸ್‌ಜೆಎಂ ಕಾಲೇಜು ಆವರಣದಲ್ಲಿ ಗುರುವಾರ ರಾತ್ರಿ ನಡೆದ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬುದ್ಧ, ಬಸವ, ಕ್ರೈಸ್ತ, ಅಲ್ಲಮ, ಗುರುನಾನಕ್, ಮಹ್ಮದ್ ಪೈಗಂಬರರಂತಹ ಮಹಾನ್ ಚೇತನಗಳು ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಅವರೆಲ್ಲರ ಆದರ್ಶ, ತತ್ವ ಚಿಂತನೆಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.‘ನಮ್ಮಲ್ಲಿನ ಆತಂಕ ಹಾಗೂ ಹಿಂಸೆಗೆ ನಾವೇ ಕಾರಣರಾಗಿದ್ದೇವೆ. ಪ್ರತಿಯೊಬ್ಬ ವ್ಯಕ್ತಿ ತಮ್ಮ ಜೀವನದಲ್ಲಿ ಆಧ್ಯಾತ್ಮ ಚಿಂತನೆ ಅಳವಡಿಸಿಕೊಳ್ಳಬೇಕು, ಇದರಿಂದ ನಮ್ಮಲ್ಲಿರುವ ಆತಂಕ ದೂರವಾಗಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯತಿ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, 12 ನೇ ಶತಮಾನದಲ್ಲಿ ಬಸವಾದಿ ಶರಣರು ಕಲ್ಪಿಸಿದ ಸಮಾನತೆಯಿಂದ ಇಂದು ಹಿಂದೂಳಿದ ವರ್ಗದ ಜನರು ಉನ್ನತ ಸ್ಥಾನಕ್ಕೆ ಹೋಗಲು ಕಾರಣವಾಗಿದೆ. ಕಾನೂನು ಕಟ್ಟಳೆಗಳಿಂದ ಸಾಧ್ಯವಾಗದ ಮನಸ್ಸಿನ ಪರಿವರ್ತನೆಯನ್ನು ಶರಣರ ಅನುಭವಗಳಿದ ಮಾಡಲು ಸಾಧ್ಯವಿದೆ ಎಂದರು.ಪ್ರತಿಯೊಬ್ಬ ವ್ಯಕ್ತಿ ತಮ್ಮ ಜವಾಬ್ದಾರಿ ಅರಿತುಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಹೀಗಾದರೆ, ಮಾತ್ರ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಎಂದು ಅವರು ಹೇಳಿದರು.ಉಪನ್ಯಾಸ ನೀಡಿದ ಡಾ.ಮಲಿಕ್ಲಾರ್ಜುನ ಕಲಮರಹಳ್ಳಿ, ಧರ್ಮ, ದೇವರ ಹೆಸರಿನಲ್ಲಿ ದೌರ್ಜನ್ಯ, ಪ್ರತಿಕಾರ, ಹಿಂಸೆ, ಮೌಢ್ಯ ಮತಾಂತರ ನಡೆಯುತ್ತಿದೆ. ಇದರ ಫಲವಾಗಿ ಮಾನವೀಯ ಮೌಲ್ಯಗಳು ಮಾಯವಾಗುತ್ತಿವೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಪ್ರತಿಯೊಬ್ಬರ ಬದುಕಿನಲ್ಲಿ ಆತಂಕಗಳು ಅನಿರೀಕ್ಷಿತವಾಗಿ ಬರುತ್ತವೆ. ಎಲ್ಲ ರೀತಿಯ ಆತಂಕಗಳನ್ನು ಎದುರಿಸುವ ಮನೋಧೈರ್ಯವನ್ನು ಬೆಳೆಸಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.ಶರಣರು, ಸಂತರು, ದಾರ್ಶನಿಕರು, ಸಮಾಜ ಸುಧಾರಕರು ತಮಗೆ ಎದುರಾಗಿ ಸಮಸ್ಯೆಗಳನ್ನು ನಿವಾರಿಸಿಕೊಂಡು ಸಮಾಜ ಸುಧಾರಣೆಗೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು ಎಂದು ಹೇಳಿದರು.ಈ ಸಂದರ್ಭದಲ್ಲಿ ಪಿಡಬ್ಲುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶೇಖರಪ್ಪ, ಪ್ರಗತಿಪರ ರೈತ ಚನ್ನಬಸಪ್ಪ ಸಂದಿಮನಿ, ಜಿ.ಪಂ. ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ಸಂಜೀವ ನೀರಲಗಿ, ಸಾನು ಮತ್ತಿತರರನ್ನು ಸನ್ಮಾನಿಸಲಾಯಿತು.ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಹೊಸಮಠದ ಬಸವ ಶಾಂತಲಿಂಗ ಶ್ರೀಗಳು ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು. ಪರಿಸರ ಹೋರಾಟಗಾರ್ತಿ, ರಾಜೀವ ಗಾಂಧಿ ಪ್ರಶಸ್ತಿ ಪುರಸ್ಕೃತ ಡಾ.ಪೂರ್ಣಿಮಾ ಅಶೋಕ ಗೌರೋಜಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ರಾಜೇಂದ್ರ ಸಜ್ಜನರ, ಜಿ.ಪಂ. ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಬಸವ ಕೇಂದ್ರದ ಅಧ್ಯಕ್ಷೆ ಶೋಭಾತಾಯಿ ಮಾಗಾವಿ, ಮೊದಲಾದವರು ಹಾಜರಿದ್ದರು.ವೀರಭದ್ರಪ್ಪಗೌಡ್ರ ಕುರಕುಂದಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry