ಮಂಗಳವಾರ, ಅಕ್ಟೋಬರ್ 15, 2019
29 °C

ಸಾಮಾನ್ಯನಲ್ಲೂ ಅಗಾಧ ಸಾಮರ್ಥ್ಯ

Published:
Updated:

ಗುಲ್ಬರ್ಗ: ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯಲ್ಲೂ ಅಗಾಧ ಸಾಮರ್ಥ್ಯವಿದ್ದು, ಆ ಶಕ್ತಿಯ ಕುರಿತು ಆತನಲ್ಲಿ ಅರಿವು ಮೂಡಿಸಬೇಕಿದೆ ಎಂದು ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದ ಮಹಾರಾಜ್ ಕರೆ ನೀಡಿದರು.ಸ್ವಾಮಿ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಮಂಗಳವಾರ ಇಲ್ಲಿ ನಡೆದ ~ಸ್ವಾಮಿ ವಿವೇಕಾನಂದ ಜ್ಯೋತಿ ಯಾತ್ರೆ~ಯಲ್ಲಿ ಅವರು ಮಾತನಾಡಿದರು. `ಮನುಷ್ಯನಿಗೆ ಸ್ವಾಭಿಮಾನ, ಆತ್ಮವಿಶ್ವಾಸ, ಶ್ರದ್ಧೆ ಹಾಗೂ ಪ್ರಾಮಾಣಿಕತೆ ಅತಿ ಮುಖ್ಯ. ಈ ಗುಣ ಬೆಳೆಸಿಕೊಳ್ಳಲು ಶ್ರೇಷ್ಠ ವ್ಯಕ್ತಿಗಳ ಜೀವನ- ಸಾಧನೆ ಓದಬೇಕು. ಮಹಾತ್ಮರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು` ಎಂದು ಅವರು ಸಲಹೆ ಮಾಡಿದರು.ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಬಸವರಾಜ ಪಾಟೀಲ ಸೇಡಂ, ಭಾರತದ ಹಿರಿಮೆ- ಗರಿಮೆಯನ್ನು ವಿದೇಶದಲ್ಲಿ ಎತ್ತಿಹಿಡಿದ ಸ್ವಾಮಿ ವಿವೇಕಾನಂದರು, ~ರಾಷ್ಟ್ರಾಭಿಮಾನಕ್ಕೆ ಇನ್ನೊಂದು ಹೆಸರೇ ವಿವೇಕಾನಂದ~ ಎಂಬುದನ್ನು ನಿರೂಪಿಸಿದ್ದಾರೆ.ಮುಂದಿನ ದಿನಗಳಲ್ಲಿ ಭಾರತ ಅಗ್ರಮಾನ್ಯ ದೇಶವಾಗಲು ವಿವೇಕಾನಂದರಂತೆಯೇ ತಮ್ಮ ಜೀವನವನ್ನು ಅರ್ಪಿಸಿಕೊಳ್ಳುವ ಯುವಪಡೆ ಅಗತ್ಯವಿದೆ ಎಂದು ಹೇಳಿದರು.ರಾಮಕೃಷ್ಣ ಮಠದ ತ್ಯಾಗೀಶ್ವರಾನಂದ ಮಹಾರಾಜ್, ಜಿತಕಾಮಾನಂದ ಮಹಾರಾಜ್, ಸದಕ್ಯಾನಂದ ಮಹಾರಾಜ್, ವಿಶೇಷಾನಂದ ಮಹಾರಾಜ್, ಸ್ವದೇಶಿ ಆಂದೋಲನದ ವಕ್ತಾರ ಚಕ್ರವರ್ತಿ ಸೂಲಿಬೆಲೆ, ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ, ಎನ್.ವಿ. ಸಂಸ್ಥೆ ಕಾರ್ಯದರ್ಶಿ ಶಾಮರಾವ ಖಣಗೆ ಮತ್ತಿತರರು ವೇದಿಕೆಯಲ್ಲಿದ್ದರು. ನೂರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ ಸದಕ್ಯಾನಂದ ಮಹಾರಾಜ ಭಜನೆ ಪ್ರಸ್ತುತಪಡಿಸಿದರು. ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಶನ್ ಸಂಯುಕ್ತವಾಗಿ ಹಮ್ಮಿಕೊಂಡಿರುವ ಈ ಜ್ಯೋತಿಯಾತ್ರೆಯು ಬೀದರ್‌ನಿಂದ ಆರಂಭವಾಗಿದ್ದು, ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಲಿದೆ.

 

Post Comments (+)