ಸಾಮಾನ್ಯರಲ್ಲಿ ಇತಿಹಾಸ ಆಸಕ್ತಿ ಮೂಡಿಸಿದ ದೀಕ್ಷಿತ್

7

ಸಾಮಾನ್ಯರಲ್ಲಿ ಇತಿಹಾಸ ಆಸಕ್ತಿ ಮೂಡಿಸಿದ ದೀಕ್ಷಿತ್

Published:
Updated:

ಬೆಂಗಳೂರು: `ಅತಿಮುಖ್ಯವೆನಿಸುವ ಐತಿಹಾಸಿಕ ಸತ್ಯಗಳನ್ನು ತಮ್ಮ ಪ್ರಖರ ಸಂಶೋಧನಾ ದೃಷ್ಟಿಯಿಂದ ವಿಶ್ಲೇಷಿಸಿ ಸಾಮಾನ್ಯ ಜನರಲ್ಲಿ ಇತಿಹಾಸದ ಬಗ್ಗೆ ಆಸಕ್ತಿ ಮೂಡಿಸಿ, ಅವರನ್ನು ಇತಿಹಾಸ ಶೋಧದಲ್ಲಿ ತೊಡಗಿಸಿದ ಕೀರ್ತಿ ಜಿ.ಎಸ್. ದೀಕ್ಷಿತರದು~ ಎಂದು ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ನುಡಿದರು.ಪ್ರಗತಿ ಗ್ರಾಫಿಕ್ಸ್ ನಗರದ ಮಿಥಿಕ್ ಸೊಸೈಟಿಯಲ್ಲಿ ಇತಿಹಾಸ ತಜ್ಞ ಡಾ.ಜಿ.ಎಸ್. ದೀಕ್ಷಿತರ ನೂರನೇ ವರ್ಷಾಚರಣೆ ಸಂದರ್ಭದಲ್ಲಿ ನಡೆದ `ಶತ ಸ್ಮರಣಾಂಜಲಿ~ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಜಿ.ಎಸ್. ದೀಕ್ಷಿತ್ ಅವರದು ಅಭಿಜಾತ ಪ್ರತಿಭೆ. ಇತಿಹಾಸ ನಿಂತ ನೀರಲ್ಲ, ಸದಾ ಹರಿಯುವ ನದಿಯಂತೆ ಅಂದಿನ ಸತ್ಯ ಘಟನೆಗಳನ್ನು ಜನರಿಗೆ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ಅಂತ ಕಷ್ಟಕರವಾದ ಕಾರ್ಯ ನಿಭಾಯಿಸುವಲ್ಲಿ ದೀಕ್ಷಿತರು  ಪ್ರಮುಖ ಪಾತ್ರವಹಿಸಿದ್ದವರು. ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಅವರು ಮಾಡಿದ ಮಾರ್ಗದರ್ಶನ ಅಮೂಲ್ಯವಾದುದು. ಅವರಿಂದ ಹಲವು ಉತ್ತಮ ಇತಿಹಾಸ ತಜ್ಞರು ರೂಪುಗೊಂಡರು~ ಎಂದರು.ಪ್ರಗತಿ ಗ್ರಾಫಿಕ್ಸ್ ಹೊರತಂದಿರುವ ದೀಕ್ಷಿತರ ಸಮಗ್ರ ಇತಿಹಾಸ ಸಂಬಂಧಿದ ಇಂಗ್ಲಿಷ್ ಲೇಖನಗಳ ಸಂಕಲನ `ಸೌತ್ ಇಂಡಿಯಾ ಅನ್ ಎಕ್ಷ್‌ಪೆಡಿಷನ್ ಇನ್‌ಟು ದ ಪಾಸ್ಟ್~ ಕೃತಿಯ ಬಗ್ಗೆ ಶಾಸನ ತಜ್ಞ ಡಾ. ಶ್ರೀನಿವಾಸ ರಿತ್ತಿ ಮಾತನಾಡಿ, `ಕೃತಿಯಲ್ಲಿರುವ ಎರಡು ಮೂರು ಪುಟಗಳ ಐತಿಹಾಸಿಕ ಮಾಹಿತಿಗಳು ಅಖಂಡ ಕರ್ನಾಟಕದ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ~ ಎಂದರು.ಇತಿಹಾಸಕಾರ ಸೂರ್ಯನಾಥ ಕಾಮತ್ ಮಾತನಾಡಿ, `ದೀಕ್ಷಿತರು ಸರಳ ಮತ್ತು ಗಂಭಿರವಾದ ಜೀವನವನ್ನು ನಡೆಸಿದವರು. ದಕ್ಷಿಣ ಭಾರತದ ಇತಿಹಾಸದ ಪೂರ್ಣ ಚಿತ್ರಣ ತಿಳಿಯಬೇಕಾದರೆ ದೀಕ್ಷಿತರ ಲೇಖನಗಳನ್ನು ಓದುವುದು ಅಗತ್ಯ. ಕರ್ನಾಟಕದಲ್ಲಿ ಮಾತ್ರವಲ್ಲದೆ ಅವರು ಉತ್ತರ ಭಾರತದಲ್ಲಿಯೂ ತಮ್ಮ ಪ್ರಭಾವವನ್ನು ಬೆಳೆಸಿಕೊಂಡಿದರು~ ಎಂದು ತಿಳಿಸಿದರು.ಆಕಾಶವಾಣಿ ನಿವೃತ್ತ ನಿರ್ದೇಶಕಿ ಡಾ. ಜ್ಯೋತ್ಸ್ನಾ ಕಾಮತ್, ಶಾಸನ ತಜ್ಞ ಡಾ. ಶ್ರೀನಿವಾಸ ರಿತ್ತಿ, ಲೇಖಕ ಡಾ.ಎಂ. ಬೈರೇಗೌಡ  ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry