ಗುರುವಾರ , ಮೇ 13, 2021
39 °C

ಸಾಮಾನ್ಯ ಓದುಗರಿಗೂ ಭಜಗೋವಿಂದಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಶಂಕರಾಚಾರ್ಯ ವಿರಚಿತ ಭಜಗೋವಿಂದಂ ಕೃತಿಯ ಸಾಲುಗಳನ್ನು ಸಂಧ್ಯಾ ಪೈ ಅವರು ಉತ್ತಮವಾಗಿ ವ್ಯಾಖ್ಯಾನಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕಾಣಿಕೆ ನೀಡಿದ್ದಾರೆ~ ಎಂದು ಗಾಯಕ ಡಾ.ವಿದ್ಯಾಭೂಷಣ ಶ್ಲಾಘಿಸಿದರು.ಸ್ನೇಹ ಬುಕ್ ಹೌಸ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೇಖಕಿ ಸಂಧ್ಯಾ ಪೈ ಅವರ ಇಪ್ಪತ್ತು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.`ಪಂಥಗಳ ವಿಚಾರವನ್ನು ಬದಿಗಿಟ್ಟು ಅವಲೋಕಿಸಿದರೆ, ಹರಿದಾಸ ಸಾಹಿತ್ಯ ಮತ್ತು ಭಜಗೋವಿಂದಂ ಕೃತಿಗಳಲ್ಲಿ ಬಹು ಸಾಮ್ಯತೆಗಳಿವೆ. ನಿತ್ಯ ಜೀವನ ಹಾಗೂ ಅಧ್ಯಾತ್ಮ ಬದುಕಿಗೆ ಅಗತ್ಯವಿರುವ ಅಂಶಗಳನ್ನು ಒಳಗೊಂಡಿರುವ ಭಜಗೋವಿಂದಂ ಕೃತಿಯನ್ನು ಸಾಮಾನ್ಯ ಓದುಗನಿಗೆ ತಲುಪಿಸಿದ್ದಾರೆ~ ಎಂದು ಸಂತಸ ವ್ಯಕ್ತಪಡಿಸಿದರು.ಮಕ್ಕಳ ಕೃತಿಗಳ ಕುರಿತು ಮಾತನಾಡಿದ ನಟ ಶ್ರೀನಿವಾಸ ಪ್ರಭು, `ಮಕ್ಕಳೆಂದರೆ ಪ್ರಶ್ನೆಗಳ ಸುರಿಮಳೆ. ಅವರ ಪ್ರಶ್ನೆಗಳಿಗೆಲ್ಲ ಕಾಲ್ಪನಿಕ ಉತ್ತರ ನೀಡುವ ಮೂಲಕವೇ ಮಕ್ಕಳ ಕಲ್ಪನಾ ಜಗತನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಪುಸ್ತಕಗಳಿವೆ~ ಎಂದು ಹೇಳಿದರು.` ಸಂಧ್ಯಾ ಅವರ ಕೃತಿಗಳಲ್ಲಿ ವಿಸ್ಮಯ, ವಿವೇಚನೆ, ನೀತಿ ಮತ್ತು ವಿಚಾರ ಮಂಥನಗಳಿಗೆ ಸಾಕಷ್ಟು ಅವಕಾಶವಿದ್ದು, ಓದುಗರ ಕಲ್ಪನಾ ಶಕ್ತಿಯನ್ನು ಮತ್ತಷ್ಟು ಮೊನಚುಗೊಳಿಸುತ್ತದೆ. ಕತೆಯನ್ನು ಒಂದು ದೃಷ್ಟಾಂತದ ಮೂಲಕ ನಿರೂಪಿಸುವ ಅವರ ಕೌಶಲವು ಓದುಗರನ್ನು ಮುದಗೊಳಿಸುತ್ತದೆ~ ಎಂದು ಅಭಿಪ್ರಾಯಪಟ್ಟರು.ಲೇಖಕಿ ಸಂಧ್ಯಾ ಪೈ, `ನನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಹೇಳಿದ ಕತೆಗಳ ಸಂಗ್ರಹ ರೂಪವೇ ಈ ಕೃತಿಗಳು. ವಿಶ್ವದ ನಾನಾ ಭಾಷೆಗಳಲ್ಲಿ ಜನಪದ ಸಾಹಿತ್ಯ ಶ್ರೀಮಂತವಾಗಿದ್ದು, ಅದರ ಎಳೆಯನ್ನು ಕನ್ನಡದ ನೆಲಕ್ಕೆ ತಂದು ಮಕ್ಕಳಿಗೆ ಉಣಬಡಿಸುವುದು ಬಹು ದೊಡ್ಡ ಸವಾಲಿನ ಕೆಲಸ ~ ಎಂದರು.ಇದೇ ಸಂದರ್ಭದಲ್ಲಿ ತುಷಾರ್ ಎಲ್.ಆಚಾರ್ಯ ಅವರಿಂದ ಹರಿಕತೆ ಕಾರ್ಯಕ್ರಮ ನಡೆಯಿತು. ಹಿರಿಯ ಪತ್ರಕರ್ತ ಎಸ್.ವಿ.ಜಯಶೀಲರಾವ್, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಸತೀಶ್ ಯು.ಪೈ, ನಟಿ ನೀತು, ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ಪರಶಿವಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.