ಸಾಮಾನ್ಯ ವರ್ಗದ ಮೇಲೆ ಎಲ್ಲರ ಕಣ್ಣು

7

ಸಾಮಾನ್ಯ ವರ್ಗದ ಮೇಲೆ ಎಲ್ಲರ ಕಣ್ಣು

Published:
Updated:

ಕೋಲಾರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ಅ.5ರಂದು ನಿಗದಿಯಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನದ ಮೇಲೆ ಎಲ್ಲ ಸದಸ್ಯರ ಕಣ್ಣು ಬಿದ್ದಿದೆ.ಜಿಲ್ಲಾ ಪಂಚಾಯಿತಿಗೆ ಯಾವುದೇ ಜಾತಿ ಸದಸ್ಯರೂ ಸ್ಪರ್ಧಿಸಬಹುದಾದ `ಸಾಮಾನ್ಯ~ ಅವಕಾಶ ಸೃಷ್ಟಿಯಾಗಿರುವುದರಿಂದ ಬಹುತೇಕರಲ್ಲಿ ಆಸೆ ಮೂಡಿದೆ. ಅಂಥವರೆಲ್ಲರನ್ನೂ ಸಂತೈಸುವ ಜವಾಬ್ದಾರಿ ಜೊತೆಗೇ ಅಧ್ಯಕ್ಷ ಸ್ಥಾನವನ್ನು ಪಡೆಯುವ ಸವಾಲು ಮೂರೂ ಪಕ್ಷಗಳಿಗೆ ಮತ್ತು ಪಕ್ಷೇತರ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶರ ಮೇಲೆ ಬಿದ್ದಿದೆ. ಈ ಸವಾಲಿನ ನಿರ್ವಹಣೆ ತಂತ್ರಗಳನ್ನು ಕಳೆದ ವಾರದಿಂದ ಪಕ್ಷಗಳು ಹೆಣೆಯುತ್ತಿವೆ. ಪಕ್ಷದ ಮಾತಿಗೆ ಮಣೆ ಹಾಕುವ ಅನಿವಾರ್ಯತೆಯಲ್ಲಿ ಇದ್ದಂತೆ ಕಂಡುಬಂದರೂ ಸದಸ್ಯರು ಅಧ್ಯಕ್ಷ ಸ್ಥಾನ ಸಿಕ್ಕರೆ ಎಲ್ಲಿಗೆ ಬೇಕಾದರೂ ಜಿಗಿಯುವ ಸಾಧ್ಯತೆಯೂ ಪಕ್ಷಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.2010ರ ಡಿಸೆಂಬರ್‌ನಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಮೊದಲ ಅವಧಿಯ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಾಗಿತ್ತು. ಅಂಥ ಮಹಿಳೆಯರು ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಇರಲಿಲ್ಲ. ಬಿಜೆಪಿ ಸದಸ್ಯೆ ಮಂಜುಳಾ ಮತ್ತು ಪಕ್ಷೇತರ ಸದಸ್ಯೆ ಭಾರತಿ ಇದ್ದರು. ಸಚಿವ ವರ್ತೂರು ಪ್ರಕಾಶರು ಮಂಜುಳಾ ಅವರೇ ಆಯ್ಕೆಯಾಗುವಂತೆ ಮಾಡಿದ್ದರು.ವೇಮಗಲ್ ಕ್ಷೇತ್ರದ ಭಾರತಿ ನಿಧನರಾಗಿದ್ದಾರೆ. ನಂತರದ ಉಪಚುನಾವಣೆಯಲ್ಲಿ ಜೆಡಿಎಸ್‌ನಆಶಾ ಗೆದ್ದಿದ್ದಾರೆ. ಆ ಮೂಲಕ ಜೆಡಿಎಸ್ 11ರಿಂದ 12 ಸದಸ್ಯತ್ವದ ಬಲ ಹೊಂದಿದೆ. ಕಾಂಗ್ರೆಸ್ 5, ಬಿಜೆಪಿ 7 ಮತ್ತು ಪಕ್ಷೇತರರರು ನಾಲ್ವರಿದ್ದಾರೆ. ಯಾವ ಪಕ್ಷಕ್ಕೂ ಬಹುಮತವಿಲ್ಲದ ಅತಂತ್ರ ಸನ್ನಿವೇಶ ಇದು. ಹೀಗಾಗಿ ಒಬ್ಬರು ಇನ್ನೊಬ್ಬರ ಬೆಂಬಲಕ್ಕಾಗಿ ಎದುರು ನೋಡುತ್ತಿದ್ದಾರೆ. 28 ಸದಸ್ಯ ಬಲದ ಪಂಚಾಯಿತಿಯಲ್ಲಿ ಅಧ್ಯಕ್ಷರ ಅಂತಿಮ ಆಯ್ಕೆಗೆ ಅರ್ಧಕ್ಕಿಂತ ಒಂದು ಹೆಚ್ಚು, ಅಂದರೆ 15 ಸದಸ್ಯರ ಬಹುಮತ ಬೇಕೇಬೇಕು.ಇಂಥ ಸನ್ನಿವೇಶದಲ್ಲಿ ಹೆಚ್ಚು ಸದಸ್ಯರ ಬಲವಿರುವ ಜೆಡಿಎಸ್‌ನಲ್ಲೇ ಅಧ್ಯಕ್ಷರು ಆಯ್ಕೆಯಾಗಬಹುದು ಎಂಬ ಊಹೆ ಸಾಮಾನ್ಯ. ಆದರೆ ಬೆಂಬಲ ನೀಡುವವರು ಯಾರು ಎಂಬುದು ಪ್ರಶ್ನೆ. ಈ ಪಕ್ಷಕ್ಕೆ ಬಹುಮತ ಬೇಕಾದರೆ ಮೂವರು ಸದಸ್ಯರ ಬೆಂಬಲ ಬೇಕು. ಅದಕ್ಕಾಗಿ, ಕಾಂಗ್ರೆಸ್ ಜೊತೆಗೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಘೋಷಿಸಿದ್ದಾರೆ.

 

ಆದರೆ ಇವೆರಡೂ ಪಕ್ಷದಲ್ಲಿ ಆಕಾಂಕ್ಷಿಗಳಿದ್ದಾರೆ. ಯಾವ ಪಕ್ಷದವರಿಗೆ ಆದ್ಯತೆ ಎಂಬುದು ಕುತೂಹಲಕರ ವಿಷಯ. ಇದೇ ವೇಳೆ, ಜೆಡಿಎಸ್‌ನ ಎಲ್ಲ ಸದಸ್ಯರನ್ನು ಕ್ಷೇತ್ರದಿಂದ ಬಹುದೂರ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವವರ ಪ್ರಯತ್ನಕ್ಕೆ ತಡೆಯೊಡ್ಡುವ ಪ್ರಯತ್ನ ಇದು.ಬಿಜೆಪಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯನ್ನು ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ನೇತೃತ್ವದಲ್ಲಿ ಶಾಸಕರಾದ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಎಂ.ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖರಿರುವ ಸಮಿತಿಯು ನಡೆಸಲಿದೆ. ಜೆಡಿಎಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.ಜೆಡಿಎಸ್‌ನಿಂದ ಬಿಜೆಪಿ ದೂರವಿರುವುದಾದರೆ, ತನ್ನ ಏಳು ಸದಸ್ಯರಲ್ಲದೆ, ವರ್ತೂರು ಬಣದ ಪಕ್ಷೇತರ ಸದಸ್ಯರಾದ ನಾಲ್ವರನ್ನು ಖಚಿತವಾಗಿ ನೆಚ್ಚಿಕೊಳ್ಳಬಹುದು. ಆಗಲೂ ಬಿಜೆಪಿಗೆ ನಾಲ್ವರು ಸದಸ್ಯರ ಬೆಂಬಲ ಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಬಿಜೆಪಿ, ಕಾಂಗ್ರೆಸ್ ಕಡೆ ನೋಡಬೇಕಾಗುತ್ತದೆ. ಆದರೆ ಅಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೈಕಮಾಂಡ್‌ನಂತಿದ್ದಾರೆ. ಈ ಮೈತ್ರಿ ಏರ್ಪಡುವ ಸಾಧ್ಯತೆ ಅನುಮಾನ.ಇಂಥ ವೇಳೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಾಧ್ಯತೆ ಹೆಚ್ಚು ಹೊಳೆಯುತ್ತದೆ. ಆದರೆ ಮೂರು ಪಕ್ಷದ ಮುಖಂಡರನ್ನು ಮಾತನಾಡಿಸಿದರೆ ಮೈತ್ರಿಗಳ ಬಗ್ಗೆ ಯಾರಲ್ಲೂ ಸ್ಪಷ್ಟತೆ ಕಾಣುತ್ತಿಲ್ಲ. ಎಲ್ಲರದೂ ಕಾದು ನೋಡುವ ತಾಳ್ಮೆಯ ಲೆಕ್ಕಾಚಾರದ ತಂತ್ರ. ಚುನಾವಣೆಗೆ ಎರಡು ದಿನ ಉಳಿದಿದೆ. ಬೆಂಗಳೂರಿನಲ್ಲಿ, ಮುಖಂಡರ ಮನೆಗಳಲ್ಲಿ ಸಭೆ, ಸಮಾಲೋಚನೆಗಳು ನಡೆಯುತ್ತಿವೆ. 2 ದಿನದಲ್ಲಿ ಯಾವ ಬದಲಾವಣೆಯಾದರೂ ಸಂಭವಿಸಬಹುದು ಎಂಬುದು ರಾಜಕೀಯ ಒಳಹೊರಗು ಬಲ್ಲವರ ಅಭಿಪ್ರಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry