ಶನಿವಾರ, ಜೂನ್ 19, 2021
27 °C

ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರವಲು ಸೇವೆ ಮೇಲೆ ಬಿಬಿಎಂಪಿಗೆ ಬರುವ ಅಧಿಕಾರಿಗಳು ನಂತರ ಮಾತೃ ಇಲಾಖೆಗಳಿಗೆ ಮರಳದೆ ಅಲ್ಲೇ ಠಿಕಾಣಿ ಹೂಡುತ್ತಿರುವುದರಿಂದ ಸಂಸ್ಥೆಗೆ ಆರ್ಥಿಕ ಹೊರೆ ಬೀಳುತ್ತಿರುವುದರ ಬಗ್ಗೆ ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಪಿ. ಶಾರದಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಹಿರಿಯ ಸದಸ್ಯ ಎ.ಎಚ್. ಬಸವರಾಜು, ಪೂರ್ವ ವಲಯದ ಉಪ ಆಯುಕ್ತರಾಗಿದ್ದ ಪುರುಷೋತ್ತಮ್ ವರ್ಗಾವಣೆಯಾದ ನಂತರವೂ ಹೆಚ್ಚುವರಿಯಾಗಿ ಒಂದು ತಿಂಗಳು ಪಾಲಿಕೆ ವಸತಿಗೃಹದಲ್ಲಿ ಉಳಿಯುವ ಮೂಲಕ, ಒಂದು ತಿಂಗಳು ಹೆಚ್ಚುವರಿ ಸಂಬಳವನ್ನೂ ಪಡೆದಿದ್ದಾರೆ. ಇದರಿಂದ ಪಾಲಿಕೆಗೆ 1.75 ಲಕ್ಷ ರೂಪಾಯಿ ಹೊರೆ ಬಿದ್ದಿದ್ದು, ಈ ಮೊತ್ತವನ್ನು ವಸೂಲಿ ಮಾಡಲು ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಶ್ನಿಸಿದರು.`ಸಾರ್ವಜನಿಕರು ತೆರಿಗೆ ಬಾಕಿ ಉಳಿಸಿಕೊಂಡರೆ ಅವರ ಮನೆ ಮುಂದೆ ತಮಟೆ ಬಾರಿಸಿ ಬಾರಿಸಿ ಮಾನ ಹರಾಜು ಹಾಕಲಾಗುತ್ತದೆ. ಆದರೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು? ಸಾರ್ವಜನಿಕರ ಕಣ್ಣಿಗೆ ಸುಣ್ಣ, ಅಧಿಕಾರಿಗಳ ಕಣ್ಣಿಗೆ ಬೆಣ್ಣೆ ಏಕೆ?~ ಎಂದು ಅವರು ಕೇಳಿದರು.ಬಸವರಾಜು ಅವರನ್ನು ಬೆಂಬಲಿಸಿ ಮಾತನಾಡಿದ ಬಿಜೆಪಿಯ ಗಂಗಬೈರಯ್ಯ, `ಬಿಬಿಎಂಪಿ ಕೆಲವು ಅಧಿಕಾರಿಗಳಿಗೆ ಮೇಯುವ ಹುಲ್ಲುಗಾವಲು ಎನಿಸಿದೆ. ಎರವಲು ಸೇವೆ ಮೇರೆಗೆ ಪಾಲಿಕೆಗೆ ಬರುವ ಕೆಎಎಸ್ ಅಧಿಕಾರಿಗಳು ಅವಧಿ ಮುಗಿದರೂ ಮಾತೃ ಇಲಾಖೆಗೆ ವಾಪಸಾಗುವುದಿಲ್ಲ. ಇಂತಹ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸು ಕರೆಸಿಕೊಳ್ಳುವಂತೆ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದರೂ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ತೆರಳಿ ತಡೆಯಾಜ್ಞೆ ತರುತ್ತಿದ್ದಾರೆ~ ಎಂದರು.ಇದೇ ರೀತಿ ಎರವಲು ಸೇವೆ ಮೇಲೆ ಪಾಲಿಕೆಗೆ ಬಂದ ಉಪ ಆಯುಕ್ತ ಗೋಪಾಲ್ ಹಾಗೂ ದಾಸರಹಳ್ಳಿ ವಲಯದ ಅಕೌಂಟ್ಸ್ ಸೂಪರಿಂಟೆಂಡೆಂಟ್ ತಾಂಡವಮೂರ್ತಿ ಅವಧಿ ಮುಗಿದ ನಂತರ ಮಾತೃ ಇಲಾಖೆಗೆ ಮರಳದಿರುವ ಬಗ್ಗೆ ಅವರು ಪ್ರಸ್ತಾಪಿಸಿದರು.ಹಾಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಗೌರವ್ ಗುಪ್ತ ಇನ್ನೂ ಪಾಲಿಕೆ ವಸತಿಗೃಹದಲ್ಲಿಯೇ ಉಳಿದಿಕೊಂಡಿರುವ ಬಗ್ಗೆ ಬಸವರಾಜು ಸಭೆಯ ಗಮನಸೆಳೆದರು.ಸಿಎಂ ಕಚೇರಿಯಿಂದಲೇ ಒತ್ತಡ:ಎರವಲು ಸೇವೆ ಮೇಲೆ ಬಂದಂತಹ ಅಧಿಕಾರಿಗಳು ಅವಧಿ ಮುಗಿದ ನಂತರ ಮಾತೃ ಇಲಾಖೆಗೆ ವಾಪಸು ಕಳಿಸಿದರೂ, ಸಿಎಂ ಕಚೇರಿಯಿಂದ ಒತ್ತಡ ತಂದು ಪಾಲಿಕೆಯಲ್ಲಿ ಉಳಿದುಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಆಗ್ರಹಪಡಿಸಿದರೆ, ಮಂಜೂರಾತಿ ಹುದ್ದೆ ಇಲ್ಲದಿದ್ದರೂ ಅವರನ್ನು ಪಾಲಿಕೆಯಲ್ಲಿ ಉಳಿಸಿಕೊಂಡು ವೇತನ ನೀಡುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್ ಗುಂಪಿನ ನಾಯಕ ಪದ್ಮನಾಭರೆಡ್ಡಿ ಆಕ್ಷೇಪಿಸಿದರು.ಬಿಜೆಪಿ ಸದಸ್ಯ ಎ.ಎಲ್. ಶಿವಕುಮಾರ್ ಮಾತನಾಡಿ, ಪಾಲಿಕೆಯಲ್ಲಿ 16,638 ಮಂಜೂರಾತಿ ಹುದ್ದೆಗಳಿವೆ. ಆದರೆ, 19,967 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 3,329 ಮಂದಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂಪಾಯಿ ಹೊರೆ ಬೀಳುತ್ತಿದೆ ಎಂದು ಸಭೆಯ ಗಮನಸೆಳೆದರು.ಸದಸ್ಯರ ಆರೋಪಗಳಿಗೆ ಉತ್ತರಿಸಿದ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, ಪೂರ್ವ ವಲಯದ ಉಪ ಆಯುಕ್ತರಾಗಿದ್ದ ಪುರುಷೋತ್ತಮ್ ಅವರು ಫೆ. 29ರಂದು ವಸತಿಗೃಹ ಖಾಲಿ ಮಾಡಿದ್ದಾರೆ. ಆದರೆ, ಹೆಚ್ಚುವರಿಯಾಗಿ ಒಂದು ತಿಂಗಳು ವೇತನ ಪಡೆದಿರುವುದರ ಜತೆಗೆ, ವಸತಿಗೃಹದಲ್ಲಿ ಉಳಿದಿರುವ ಬಾಡಿಗೆ ಬಾಬ್ತು ಬಾಕಿ ಇದೆ. ಆದರೆ, ಸರ್ಕಾರಿ ಅಧಿಕಾರಿಗಳ ಯಾವುದೇ ಬಾಕಿ ಬಾಬ್ತಿನ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಆಡಿಟರ್ ಜನರಲ್‌ಗೆ ಪತ್ರ ಬರೆದರೆ ಸಂಬಳದಲ್ಲೇ ಕಡಿತ ಮಾಡುತ್ತಾರೆ. ಆದರೂ, ಮಾತೃ ಇಲಾಖೆ ಹಾಗೂ ಎಜಿಗೆ ಈ ಸಂಬಂಧ ಪತ್ರ ಬರೆಯಲಾಗುವುದು ಎಂದರು.ಇನ್ನು ಉಪ ಆಯುಕ್ತ ಗೋಪಾಲ್ ನ್ಯಾಯಾಲಯದಲ್ಲಿ ವರ್ಗಾವಣೆಗೆ ತಡೆಯಾಜ್ಞೆ ತಂದು ಪಾಲಿಕೆಯಲ್ಲೇ ಉಳಿದಿದ್ದಾರೆ. ಅವರಿಗೆ ಯಾವುದೇ ಹುದ್ದೆ ಕೊಟ್ಟಿಲ್ಲ. ನ್ಯಾಯಾಲಯದ ತಡೆಯಾಜ್ಞೆ ತೆರವಾದ ನಂತರ ಮಾತೃ ಇಲಾಖೆಗೆ ವಾಪಸು ಕಳಿಸಲಾಗುವುದು. ರಾಜ್ಯ ಸರ್ಕಾರ ಎರವಲು ಸೇವೆ ಮೇಲೆ ಪಾಲಿಕೆಗೆ ಅಧಿಕಾರಿಗಳನ್ನು ಕಳಿಸುವ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಹುದ್ದೆ ಖಾಲಿ ಇಲ್ಲ ಹಾಗೂ ಹೆಚ್ಚುವರಿ ಸೇವೆ ಅನಗತ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರೆ ಸಾಕು. ಇದರಿಂದ ಆನಂತರ ಈ ರೀತಿಯ ಅನಗತ್ಯ ತೊಂದರೆ ಎದುರಿಸುವುದು ತಪ್ಪಲಿದೆ ಎಂದರು.ಸಿಐಡಿ-ಐಜಿಪಿಗೆ ಪತ್ರ ಬರೆಯಲು ನಿರ್ಧಾರ: ಗಾಂಧಿನಗರ ಹಾಗೂ ಚಿಕ್ಕಪೇಟೆ ಉಪ ವಲಯ ವ್ಯಾಪ್ತಿಯ ನಾಲ್ಕು ವಾರ್ಡ್‌ಗಳಲ್ಲಿ ಶೇ 22.75ರ ಅನುದಾನದಡಿ ಕೈಗೆತ್ತಿಕೊಂಡಿರುವ 500 ಮನೆಗಳ ನಿರ್ಮಾಣ ಕಾರ್ಯವನ್ನು ಫಲಾನುಭವಿಗಳ ಮಾನವೀಯ ದೃಷ್ಟಿಯಿಂದ ಪೂರ್ಣಗೊಳಿಸಲು ಸಿಐಡಿ ಪೊಲೀಸರು ವಶಪಡಿಸಿಕೊಂಡಿರುವ ಮೂಲ ದಾಖಲೆಗಳನ್ನು ವಾಪಸು ನೀಡುವಂತೆ ಐಜಿಪಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.ಇದಕ್ಕೂ ಮುನ್ನ ಮಾತನಾಡಿದ ಶಾಸಕ ದಿನೇಶ್ ಗುಂಡೂರಾವ್, ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಅವ್ಯವಹಾರಕ್ಕೆ ಸಂಬಂಧಿಸಿದ ಕಡತಗಳನ್ನು ಸಿಐಡಿ ಪೊಲೀಸರು ವಶಪಡಿಸಿಕೊಂಡ ಸಂದರ್ಭದಲ್ಲಿ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಾಗದೆ ಮನೆ ನಿರ್ಮಾಣ ಕೆಲಸ ಸ್ಥಗಿತಗೊಂಡಿದೆ.ಈ ಹಿನ್ನೆಲೆಯಲ್ಲಿ ಮೂಲ ದಾಖಲೆಗಳನ್ನು ವಾಪಸು ನೀಡಿ, ನಕಲು ಪ್ರತಿಗಳನ್ನು ಹಾಗೇ ಇರಿಸಿಕೊಂಡು ತನಿಖೆ ಮುಂದುವರಿಸುವಂತೆ ಆಗ್ರಹಿಸಿದರು. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಈಗಾಗಲೇ ಚರ್ಚಿಸಲಾಗಿದೆ. ಸೋಮವಾರವೇ ಸಿಐಡಿ ಡಿಜಿಪಿಗೆ ಪತ್ರ ಬರೆಯಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.