ಸಾಮೂಹಿಕ ಅತ್ಯಾಚಾರ: ಸದನದಲ್ಲಿ ಕಣ್ಣೀರಿಟ್ಟ ಜಯಾ ಬಚ್ಚನ್

7

ಸಾಮೂಹಿಕ ಅತ್ಯಾಚಾರ: ಸದನದಲ್ಲಿ ಕಣ್ಣೀರಿಟ್ಟ ಜಯಾ ಬಚ್ಚನ್

Published:
Updated:
ಸಾಮೂಹಿಕ ಅತ್ಯಾಚಾರ: ಸದನದಲ್ಲಿ ಕಣ್ಣೀರಿಟ್ಟ ಜಯಾ ಬಚ್ಚನ್

ನವದೆಹಲಿ (ಐಎಎನ್ಎಸ್): ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸುತ್ತಿದ್ದ ಹಲವಾರು ಮಂದಿ ರಾಜ್ಯಸಭಾ ಸದಸ್ಯರು ಗದ್ಗದಿತರಾದರೆ, ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಅವರು ಸದನದಲ್ಲಿ ಕಣ್ಣೀರಿಟ್ಟ ಘಟನೆ ಮಂಗಳವಾರ ನಡೆಯಿತು.



ಉಪಸಭಾಪತಿ ಪಿ.ಜೆ. ಕುರಿಯನ್ ಅವರು ಎರಡನೇ ಬಾರಿ ಮಾತನಾಡಲು ಅವಕಾಶ ನೀಡಿದಾಗ ಮಾತನಾಡಿದ ಜಯಾ ಬಚ್ಚನ್ 'ಸಂತ್ರಸ್ತಳ ಕುಟುಂಬದ ಮುಂದೆ ಸರ್ಕಾರವು ಬಹಿರಂಗ ಕ್ಷಮಾಯಾಚನೆ ಮಾಡಿದೆಯೇ?' ಎಂದು ಪ್ರಶ್ನಿಸಿದರು.



'ಮೊತ್ತ ಮೊದಲಿಗೆ, ಏನಾಗಿದೆಯೋ ಅದಕ್ಕಾಗಿ ಸರ್ಕಾರವು ಕುಟುಂಬಕ್ಕೆ ಶೋಕಸಂದೇಶವನ್ನೇನಾದರೂ ಕಳುಹಿಸಿದೆಯೇ? ನಮ್ಮ ರಾಷ್ಟ್ರದಲ್ಲಿ ನಾಚಿಕೆಗೇಡಿನ ಕೃತ್ಯವೊಂದು ನಡೆದುಬಿಟ್ಟಿರುವುದಕ್ಕಾಗಿ ನಾವು ವಿಷಾದಿಸುತ್ತೇವೆ ಎಂಬುದಾಗಿ ನೀವು ಬಹಿರಂಗ ಹೇಳಿಕೆ ನೀಡಿದ್ದೀರಾ?' ಎಂದು ಖ್ಯಾತ ಚಿತ್ರರಾರೆಯೂ ಆಗಿರುವ ಬಚ್ಚನ್ ಮೇಲ್ಮನೆಯಲ್ಲಿ ಪ್ರಶ್ನಿಸಿದರು.



'ಸ್ವಾಮೀ ನಾನು ಮೂಲತಃ ಒಬ್ಬ ಕಲಾವಿದೆ. ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದೇನೆ. ಆಕೆಯ ಗತಿ ಏನು? ಎಲ್ಲರೂ ಘಟನೆಯನ್ನು ಮರೆತು ಬಿಡಬಹುದು. ಆದರೆ ಆಕೆ ಬದುಕಿನುದ್ದಕ್ಕೂ ಇದನ್ನು ಮರೆಯಲಾಗುವುದಿಲ್ಲ. ಇದು ಆಕೆಯ ಮೇಲೊಂದು ಗಾಯವಾಗಿ ಉಳಿದುಬಿಡುತ್ತದೆ. ಇದೊಂದು ಭೀಕರ ಮಾನಸಿಕ ಚಿತ್ರಹಿಂಸೆ. ಇದಕ್ಕೆ ನೀವೇನು ಪರಿಹಾರ ಕೊಡುತ್ತೀರಿ?' ಎಂದು ಕೇಳುವಷ್ಟು ಹೊತ್ತಿಗೆ ಜಯಾ ಬಿಕ್ಕಳಿಸಲಾರಂಭಿಸಿದರು.



ನಂತರ ಒಂದು ಕ್ಷಣ ಮೌನ ವಹಿಸಿ ಸಾವರಿಸಿಕೊಂಡ ಜಯಾ ತಮ್ಮ ಕಣ್ಣಂಚಿನಲ್ಲಿ ಮೂಡಿದ ನೀರನ್ನು ಒರೆಸಿಕೊಂಡರು. 'ಪ್ರತಿದಿನ ಮಹಿಳೆಯರು ತಂದೆ, ಸಹೋದರರು, ಮಲತಂದೆಯಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಇದು ನಾಚಿಕೆಗೇಡು. ನಾವು ವಂಚಿತರಾದವರಿಗಾಗಿ ಸಂಬಂಧಪಟ್ಟ ಮಸೂದೆಗಳನ್ನು ತರುತ್ತಿದ್ದೇವೆ. ಈ ಜಗತ್ತಿಗೆ ನಿಮ್ಮನ್ನು ಕರೆತಂದ ಮಹಿಳೆಯರ ಬಗ್ಗೆ ಏನು ಹೇಳಿ. ಅವರಿಗೆ ರಕ್ಷಣೆ ಎಲ್ಲಿದೆ?' ಎಂದು ಬಚ್ಚನ್ ಪ್ರಶ್ನಿಸಿದರು.



'ನನಗೆ ನಾಚಿಕೆಯಾಗುತ್ತಿದೆ. ನಾನು ವೈಯಕ್ತಿಕವಾಗಿ ತುಂಬಾ ನಾಚಿಕೊಂಡಿದ್ದೇನೆ. ನಾನು ಈ ಸದನದೊಳಗೆ ಕುಳಿತುಕೊಂಡಿದ್ದೇನೆ, ಆದರೆ ಏನೂ ಮಾಡಲಾಗದೆ ಅಸಹಾಯಕಳಾಗಿದ್ದೇನೆ. ಈ ಸದನದಲ್ಲಿ ಬರುತ್ತಿರುವ ಉತ್ತರಗಳ ಬಗೆಗೂ ನಾನು ಅಷ್ಟೇ ಚಿಂತಿತಳಾಗಿದ್ದೇನೆ. ಈ ಉತ್ತರಗಳೆಲ್ಲಾ ಸಂಪೂರ್ಣವಾಗಿ ಅಸಮರ್ಪಕವಾದವು' ಎಂದು ಅವರು ನುಡಿದರು.



'ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ನ್ನು ತಿದ್ದುಪಡಿ ಮಾಡಿ ಅತ್ಯಾಚಾರವನ್ನು ಕೊಲೆಯತ್ನದ ಅಪರಾಧಕ್ಕೆ ಸರಿಸಮ ಅಪರಾಧವನ್ನಾಗಿ ಮಾಡಬೇಕು' ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.



ಇದಕ್ಕೆ ಮುನ್ನ ನಿಗದಿತ ಸಮಯ ಮೀರಿ ಮಾತನಾಡಲು ತಮಗೆ ಅವಕಾಶ ಸಿಗದೇ ಹೋದಾಗ ಜಯಾ ಸಭಾಪತಿಗಳ ಜೊತೆ ಘರ್ಷಿಸಿದ್ದರು. ಇದು ಮಹತ್ವದ ವಿಷಯವಾಗಿದ್ದು ನನ್ನ ಅಸನದ ಬಳಿ ನಿಂತುಕೊಂಡೇ ಪ್ರತಿಭಟಿಸುತ್ತೇನೆ ಎಂದು ಹೇಳಿ ಎದ್ದು ನಿಂತುಕೊಂಡಿದ್ದರು. ಸಭಾಪತಿಗಳು ಎರಡನೇ ಬಾರಿಗೆ ಮಾತನಾಡಲು ಅವಕಾಶ ನೀಡಿದಾಗ 'ಇದು ನಾಚಿಕೆಗೇಡು. ನನಗೆ ಏನು ಹೇಳಬೇಕು ಎಂದೇ ತೋಚುತ್ತಿಲ್ಲ. ನಾನು ನಡುಗುತ್ತಿದ್ದೇನೆ' ಎನ್ನುತ್ತಲೇ ಜಯಾ ಮಾತು ಆರಂಭಿಸಿದರು.



'ಈವರೆಗೆ ನಾನು ಮಹಿಳೆಯರನ್ನು ದೇವತೆಗಳು ಎಂದು ಪರಿಗಣಿಸಿ ಪೂಜಿಸುವ ರಾಷ್ಟ್ರದಲ್ಲಿ ನಾನು ಬದುಕುತ್ತಿದ್ದೇನೆ ಎಂದು ಭಾವಿಸಿದ್ದೆ. ನಾವು ದುರ್ಗೆಯನ್ನು ಶಕ್ತಿದೇವತೆ ಎಂದು ಹೇಳಿ ಪೂಜಿಸುತ್ತೇವೆ. ಪ್ರತಿದಿನವೂ ಭಾರತದ ನಗರಗಳಲ್ಲಿ ವಿಶೇಷವಾಗಿ ದೆಹಲಿಯಲ್ಲಿ ನಡೆಯುತ್ತಿರುವ ಇಂತಹ ಘಟನೆಗಳಿಂದಾಗಿ ಈ ಆದರ್ಶಗಳೆಲ್ಲ ಹಾಳಾಗುತ್ತಿವೆ' ಎಂದು ಜಯಾ ನುಡಿದರು.



ಚರ್ಚೆಗೆ ಉತ್ತರ ನೀಡಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು 'ಪ್ರಕರಣದ ವಿಚಾರಣೆಯನ್ನು ಕ್ಷಿಪ್ರಗತಿಯಲ್ಲಿ ನಡೆಸಲಾಗುವುದು' ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry