ಸಾಮೂಹಿಕ ವಿವಾಹಕ್ಕೆ ಭರದ ಸಿದ್ಧತೆ

7

ಸಾಮೂಹಿಕ ವಿವಾಹಕ್ಕೆ ಭರದ ಸಿದ್ಧತೆ

Published:
Updated:

ಗದಗ: ಬಿ.ಶ್ರೀರಾಮುಲು ಅಭಿಮಾನಿ ಬಳಗ ವತಿಯಿಂದ ಆರನೇ ವರ್ಷದ ಉಚಿತ ಸಾಮೂಹಿಕ ವಿವಾಹ ಅ. 5ರಂದು ಮುಂಜಾನೆ 11ಕ್ಕೆ ನಗರದಲ್ಲಿ ನಡೆಯಲಿದ್ದು, ವಿದ್ಯಾದಾನ ಸಮಿತಿ ಮೈದಾನದಲ್ಲಿ ಅಂತಿಮ ಹಂತದ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 800 ಜೋಡಿಗಳು ಹೆಸರು ನೋಂದಾಯಿಸಿದ್ದು, ಇದರಲ್ಲಿ 30 ಜೋಡಿ ಮುಸ್ಲಿಂ ಸೇರಿದೆ. ಸಾಮೂಹಿಕ ವಿವಾಹದ ಮುನ್ನ ದಿನವಾದ ಗುರುವಾರ 30 ಮುಸ್ಲಿಂ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರಿಶೀಲಿಸಿದ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕರು ಅನುಮತಿ ನೀಡಿರುವ ಜೋಡಿಗಳಿಗೆ ಮಾತ್ರ ವಿವಾಹ ಮಾಡಲಾಗುವುದು ಎಂದು ಬಳಗದ ಕಾರ್ಯದರ್ಶಿ ಶಿವನಗೌಡರ ತಿಳಿಸಿದ್ದಾರೆ.ವಿಡಿಎಸ್ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಬ್ಬರು ಡಿವೈಎಸ್‌ಪಿ, 15 ಪಿಎಸ್‌ಐ, 150 ಪೊಲೀಸರು, 6 ಸಿಪಿಐ, 26- ಎಎಸ್‌ಐ, ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ.ವಧು-ವರರಿಗೆ ಮತ್ತು ಪಾಲಕರಿಗೆ ವಾಸ್ತವ್ಯಕ್ಕೆ ಕೆ.ಎಚ್.ಪಾಟೀಲ ಸಭಾಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಊಟಕ್ಕೆ 150 ಕ್ವಿಂಟಲ್ ಬುಂದಿ, 225 ಕ್ವಿಂಟಲ್ ಅನ್ನ ತಯಾರಿಸಲಾಗುತ್ತಿದೆ. 3000 ಸ್ವಯಂ ಸೇವಕರು ಶ್ರಮಿಸಲಿದ್ದಾರೆ. ವಧು-ವರರಿಗೆ ಬಂಗಾರದ ತಾಳಿ, ಬೆಳ್ಳಿಯ ಕಾಲುಂಗರ, ಬಟ್ಟೆ ನೀಡಲಾಗುವುದು. ಆದರ್ಶ ವಿವಾಹ ಯೋಜನೆಯಡಿ ರೂ. 10 ಸಾವಿರ ಪ್ರೋತ್ಸಾಹ ಧನ ಕೊಡಲಾಗುವುದು ಎಂದು ಬಳಗದ ಕಾರ್ಯದರ್ಶಿ ಎಸ್.ಎಚ್. ಶಿವನಗೌಡರ ತಿಳಿಸಿದರು.ಈ ಸಮಾರಂಭದ ಸಾನ್ನಿಧ್ಯವನ್ನು ಡಾ.ಸಿದ್ದಲಿಂಗ ಸ್ವಾಮೀಜಿ, ಫಕ್ಕೀರ ಸಿದ್ದರಾಮ ಸ್ವಾಮೀಜಿ, ಶಿವಶಾಂತವೀರ ಶರಣರು, ಕಲ್ಲಯ್ಯಜ್ಜ ವಹಿಸಲಿದ್ದು, ಶಾಸಕ ಶ್ರೀರಾಮುಲು ಉದ್ಘಾಟಿಸುವರು.

ಅಭಿಮಾನಿ ಬಳಗದ ಅಧ್ಯಕ್ಷ ಅನಿಲ ಮೆಣಸಿನಕಾಯಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಚಿವ ಕಳಕಪ್ಪ ಬಂಡಿ, ಸಂಸದರಾದ ಜೆ.ಶಾಂತಾ, ಸಣ್ಣಫಕ್ಕೀರಪ್ಪ ಆಗಮಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry