ಸಾಮೂಹಿಕ ವಿವಾಹ ಕಾರ್ಯಕ್ರಮ: ಕೋರ್ ಕಮಿಟಿ ಶಿಫಾರಸಿಗೆ ಕಿಮ್ಮತ್ತಿಲ್ಲ!

7

ಸಾಮೂಹಿಕ ವಿವಾಹ ಕಾರ್ಯಕ್ರಮ: ಕೋರ್ ಕಮಿಟಿ ಶಿಫಾರಸಿಗೆ ಕಿಮ್ಮತ್ತಿಲ್ಲ!

Published:
Updated:

ಕೊಪ್ಪಳ: ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಬಾಲ್ಯ ವಿವಾಹ ನೆರವೇರುವುದನ್ನು ತಡೆಗಟ್ಟುವ ಸಲುವಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ನೇತೃತ್ವದ ಕೋರ್ ಕಮಿಟಿ ಶಿಫಾರಸಿನಂತೆ ಹಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

ಆದರೆ, ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ ಸಂಘಟಕರು ಈ ಮಾರ್ಗಸೂಚಿಗಳಿಗೆ ಕಿಮ್ಮತ್ತೇ ಇಲ್ಲದ ರೀತಿಯಲ್ಲಿ ವರ್ತಿಸುತ್ತಿರುವುದು ಬೆಳಕಿಗೆ ಬಂದಿದೆ.

ಸಾಮೂಹಿಕ ವಿವಾಹ ಆಯೋಜನೆಯಿಂದ ಹಿಡಿದು ವಿವಾಹ ನಂತರ ಸಂಘಟಕರು ಪಾಲಿಸಬೇಕಾದ ನಿಯಮಗಳನ್ನು ಬಾಲ್ಯ ವಿವಾಹ ತಡೆ ರಾಜ್ಯ ಕೋರ್ ಕಮಿಟಿ ರೂಪಿಸಿದೆ. ಈ ಮಾರ್ಗದರ್ಶಿ ಸೂತ್ರಗಳು 18.8.20011ರಿಂದಲೇ ಜಾರಿಗೆ ಬಂದಿವೆ. ಆದರೆ, ಆ. 18ರಿಂದ ಈಚೆಗೆ ಜಿಲ್ಲೆಯಲ್ಲಿ ನಡೆದಿರುವ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ ಈ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಲ್ಲ ಎಂದು ಯೂನಿಸೆಫ್‌ನ ಮಕ್ಕಳು ಹಕ್ಕು ರಕ್ಷಣಾ ಘಟಕದ ತರಬೇತಿ ಸಂಯೋಜಕ ಹರೀಶ್ ಜೋಗಿ ವಿಷಾದಿಸುತ್ತಾರೆ.

`ಪ್ರಜಾವಾಣಿ~ಗೆ ಈ ಸಂಬಂಧ ವಿವರ ನೀಡಿದ ಅವರು, ಇದೇ ಅಕ್ಟೋಬರ್‌ನಲ್ಲಿ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಗಾಣದಾಳ (16 ಜೋಡಿ), ಯಡ್ಡೋಣಿ (14 ಜೋಡಿ) ಹಾಗೂ ಚಿಕ್ಕೇನಕೊಪ್ಪ ಗ್ರಾಮದಲ್ಲಿ (21 ಜೋಡಿ) ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹಗಳ ಕುರಿತು ಸಂಬಂಧಪಟ್ಟ ಇಲಾಖೆಗಳಲ್ಲಿ ನೋಂದಣಿ ಮಾಡಿಲ್ಲ ಎಂದು ಹೇಳುತ್ತಾರೆ.

ಈ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಖಾಸಗಿ ಟ್ರಸ್ಟ್‌ಗಳು, ಸಂಘಗಳು, ಸೊಸೈಟಿಗಳು ಹಾಗೂ ಖಾಸಗಿ ವ್ಯಕ್ತಿಗಳು ಜಿಲ್ಲಾ ನೋಂದಣಿ ಕಚೇರಿಯಲ್ಲಿ `ಸಾಮೂಹಿಕ ವಿವಾಹಗಳ ಆಯೋಜಕರು~ ಎಂಬುದಾಗಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸದೇ ಇದ್ದ ಪಕ್ಷದಲ್ಲಿ ಸಾಮೂಹಿಕ ವಿವಾಹಗಳನ್ನು ಸಂಘಟಿಸಬಾರದು ಎಂಬುದಾಗಿ ಕಂದಾಯ ಇಲಾಖೆ ಕಾರ್ಯದರ್ಶಿ ಕೆ.ಎಸ್.ಪ್ರಭಾಕರ 18.8.2011ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಾಮೂಹಿಕ ವಿವಾಹದ ವಿಡಿಯೋ ಚಿತ್ರೀಕರಣ ಹಾಗೂ ಭಾವಚಿತ್ರಗಳನ್ನು ಕಾರ್ಯಕ್ರಮ ನಡೆದ ಒಂದು ವಾರದೊಳಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸಲ್ಲಿಸುವುದು ಕಡ್ಡಾಯ. ಜಿಲ್ಲೆಯಲ್ಲಿ ನಡೆದ ಇಂತಹ ಕಾರ್ಯಕ್ರಮಗಳ ಕುರಿತು ಇದುವರೆಗೆ ಸಂಘಟಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿವೆ.

ಯಲಬುರ್ಗಾ ತಾಲ್ಲೂಕಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದನ್ನು ವಕೀಲರ  ಮುಂದಾಳತ್ವದಲ್ಲಿಯೇ ಜರುಗಿದ್ದು ವಿಪರ್ಯಾಸ ಎಂದು ಹೆಸರು ಹೇಳಲು ಬಯಸದ ಇಲಾಖೆಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸಾಮೂಹಿಕ ವಿವಾಹದಲ್ಲಿ ಬಾಲ್ಯ ವಿವಾಹ ನಡೆಯುವುದನ್ನು ತಡೆಗಟ್ಟುವ ಸಂಬಂಧ ಇಷ್ಟೆಲ್ಲ ಕಾನೂನು-ಕಟ್ಟಳೆಗಳನ್ನು ಜಾರಿಗೊಳಿಸಿದ್ದರೂ ಜಿಲ್ಲೆಯಲ್ಲಿ ಇವುಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಇನ್ನೊಂದೆಡೆ, ಅಧಿಕಾರ ಇಲ್ಲದಿದ್ದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸಿಬ್ಬಂದಿ ಅಪ್ರಾಪ್ತ ವಯಸ್ಕರಿಗೂ ವಿವಾಹ ಯೋಗ್ಯ ವಯಸ್ಸಿನ್ನು ನಮೂದಿಸಿದ ಪ್ರಮಾಣ ಪತ್ರ ನೀಡುವ ಮೂಲಕ ಬಾಲ್ಯ ವಿವಾಹಗಳು ನಡೆಯಲು ಇಂಬು ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ವಿಷಾದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry