ಸಾಯಿಬಣ್ಣಾ ನಾಟಿಕಾರ ಬದುಕಿನ ಅಂತ್ಯಕ್ಕೆ ಕ್ಷಣಗಣನೆ...

7
ಹಿಂಡಲಗಾ ಜೈಲಿನ ಕೈದಿಗೆ ರಾಷ್ಟ್ರಪತಿ `ಕ್ಷಮಾದಾನ' ನಿರಾಕರಣೆ

ಸಾಯಿಬಣ್ಣಾ ನಾಟಿಕಾರ ಬದುಕಿನ ಅಂತ್ಯಕ್ಕೆ ಕ್ಷಣಗಣನೆ...

Published:
Updated:
ಸಾಯಿಬಣ್ಣಾ ನಾಟಿಕಾರ ಬದುಕಿನ ಅಂತ್ಯಕ್ಕೆ ಕ್ಷಣಗಣನೆ...

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ಎದುರು ನೋಡುತ್ತಿರುವ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸಾಯಿಬಣ್ಣಾ ನಿಂಗಪ್ಪ ನಾಟಿಕಾರನಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು `ಕ್ಷಮಾದಾನ' ನೀಡಲು ನಿರಾಕರಿಸಿದ್ದು, ಆತನ ಬದುಕಿನ ಅಂತ್ಯದ ಕ್ಷಣಗಣನೆ ಶುರುವಾಗಿದೆ.ಇಬ್ಬರು ಪತ್ನಿಯರು ಹಾಗೂ ಪುತ್ರಿ  ಕೊಲೆ ಮಾಡಿದ್ದ ಸಾಯಿಬಣ್ಣಾ ನಾಟಿಕಾರ ಕ್ಷಮಾದಾನ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಏಪ್ರಿಲ್ 21, 2005ರಂದು ತಿರಸ್ಕರಿಸಿ, ಮರಣದಂಡನೆ ಅಂತಿಮಗೊಳಿಸಿತ್ತು. ಬಳಿಕ ಏಪ್ರಿಲ್ 30, 2005ರಂದು ಜೀವಾವಧಿ ಶಿಕ್ಷೆಗೆ ಇಳಿಸುವಂತೆ ಕೋರಿ ಸಾಯಿಬಣ್ಣಾ `ಕ್ಷಮಾದಾನ'ದ ಅರ್ಜಿ ಸಲ್ಲಿಸಿದ್ದ. ಈತನ ಅರ್ಜಿಯನ್ನು ಗೃಹ ಸಚಿವಾಲಯವು ನವೆಂಬರ್ 5, 2012ರಂದು ರಾಷ್ಟ್ರಪತಿ  ಕಚೇರಿಗೆ ರವಾನಿಸಿತ್ತು. ಈತನ ಪ್ರಕರಣಪರಿಶೀಲಿಸಿರುವ ರಾಷ್ಟ್ರಪತಿ ಅವರು, ಜನವರಿ 4, 2013ರಂದು  ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ರಾಷ್ಟ್ರಪತಿಗಳ ಸಚಿವಾಲಯದ ಅಧಿಕೃತ ಅಂತರಜಾಲ ತಾಣದಲ್ಲಿ ಪ್ರಕಟಿಸಲಾಗಿದೆ.ಸಾಯಿಬಣ್ಣಾ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ  ಅನುಭವಿಸುತ್ತ್ದ್ದಿದ.   1994 ಸೆಪ್ಟೆಂಬರ್‌ನಲ್ಲಿ ಜೈಲಿನಿಂದ `ಪೆರೋಲ್' ಪಡೆದು ಊರಿಗೆ ಬಂದಿದ್ದ ಸಾಯಿಬಣ್ಣಾ ತನ್ನ ಎರಡನೇ ಪತ್ನಿ ಹಾಗೂ ಪುತಿ  ಕೊಲೆ ಮಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನು. ಈ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯವು ಸಾಯಿಬಣ್ಣಾಗೆ ಮರಣದಂಡನೆ  ವಿಧಿಸಿತ್ತು.ಮುಂಬೈ ಮೇಲೆ ದಾಳಿ ನಡೆಸಿದ್ದ ಉಗ್ರ ಅಜ್ಮಲ್ ಕಸಾಬ್‌ಗೆ ರಾಷ್ಟ್ರಪತಿಗಳು `ಕ್ಷಮಾದಾನ' ನಿರಾಕರಿಸಿದ ಬಳಿಕ ಇದೀಗ ಸಾಯಿಬಣ್ಣಾ ನಾಟಿಕಾರನಿಗೂ ನಿರಾಕರಿಸಿದ್ದರಿಂದ ರಾಜ್ಯದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುವ ಸೌಲಭ್ಯ ಇರುವ ಏಕಮಾತ್ರ ಸ್ಥಳವಾದ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದತ್ತ ಎಲ್ಲರೂ ಕುತೂಹಲದಿಂದ ಕಣ್ಣು ಹಾಯಿಸುತ್ತಿದಾರೆ. ಕೊಲೆ ಅಪರಾಧಿ ಹನುಮಂತನನ್ನು 1983ರಲ್ಲಿ ನೇಣಿಗೆ ಏರಿಸಿದ್ದೇ ಕೊನೆಯ ಪ್ರಕರಣ.  ಹಿಂಡಲಗಾ ಕಾರಾಗೃಹದಲ್ಲಿ ಒಂದೇ ಬಾರಿ ಮೂವರು ಅಪರಾಧಿಗಳನ್ನು ನೇಣಿಗೇರಿಸುವ ಸೌಲಭ್ಯ ಇದೆ. ಆದರೆ, ಇದೀಗ ಕಾರಾಗೃಹದಲ್ಲಿ ಗಲ್ಲಿಗೇರಿಸುವ ಸಿಬ್ಬಂದಿ ನಿವೃತ್ತರಾಗಿರುವುದರಿಂದ ಗಲ್ಲು ಶಿಕ್ಷೆಯನ್ನು ಜೈಲಿನ ಅಧಿಕಾರಿಗಳು ಹೇಗೆ ಜಾರಿಗೊಳಿಸಲಿದ್ದಾರೆ ಎಂಬ ಕುತೂಹಲ ಮೂಡತೊಡಗಿದೆ.`ಸಾಯಿಬಣ್ಣಾ ನಾಟಿಕಾರ `ಕ್ಷಮಾದಾನ' ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದ. ಆದರೆ, ನಾಟಿಕಾರನಿಗೆ `ಕ್ಷಮಾದಾನ' ನಿರಾಕರಿಸಿರುವ ಬಗ್ಗೆ ರಾಷ್ಟ್ರಪತಿ ಕಚೇರಿಯಿಂದ ನಮಗೆ ಇದುವರೆಗೂ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲ. ಈ ಆದೇಶ ಬಂದ ಬಳಿಕ ಮರಣದಂಡನೆ ಜಾರಿಗೊಳಿಸುವ ಪ್ರಕ್ರಿಯೆ ನಡೆಸಲಾಗುವುದು' ಎಂದು ಐಜಿಪಿ (ಬಂದೀಖಾನೆ) ರವಿ ಅವರು `ಪ್ರಜಾವಾಣಿ'ಗೆ ತಿಳಿಸಿದರು.`30 ವರ್ಷಗಳಿಂದ ಹಿಂಡಲಗಾ ಕಾರಾಗೃಹದಲ್ಲಿ ಮರಣ ದಂಡನೆ  ಜಾರಿಗೊಳಿಸಿಲ್ಲ. `ಹ್ಯಾಂಗ್‌ಮನ್' ಸಿಬ್ಬಂದಿ ಸದ್ಯಕ್ಕೆ ಇಲ್ಲ. ಮರಣದಂಡನೆ  ಜಾರಿಗೊಳಿಸುವ ಆದೇಶ ಬಂದ ಬಳಿಕ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು' ಎಂದು ಅವರು ಹೇಳಿದರು.

`ಮರಣದಂಡನೆಗೆ ಒಳಗಾಗಿರುವ 60 ಕೈದಿಗಳು ಹಿಂಡಲಗಾ ಕಾರಾಗೃಹದಲ್ಲಿದ್ದಾರೆ. ಸಾಯಿಬಣ್ಣಾ ನಾಟಿಕಾರ ಸೇರಿದಂತೆ 9 ಅಪರಾಧಿಗಳು `ಕ್ಷಮಾದಾನ' ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿ ಕೊಂಡಿದ್ದರು. ಮರಣದಂಡನೆಗೆ ಒಳಗಾದ ಉಳಿದ 51 ಕೈದಿಗಳು ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ' ಎಂದು ಹಿಂಡಲಗಾ ಕಾರಾಗೃಹದ ಮೂಲಗಳು ತಿಳಿಸಿವೆ.ಪ್ರಕರಣದ ಹಿನ್ನೆಲೆ (ಜೇವರ್ಗಿ ವರದಿ):   1989ರಲ್ಲಿ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಮೊದಲನೇ ಪತ್ನಿ ಮಲಕವ್ವ ಎಂಬವಳನ್ನು ಗುಲ್ಬರ್ಗ ಬ್ರಹ್ಮಪುರದಲ್ಲಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ನಂತರ ಪೆರೋಲ್ ಮೇಲೆ ಬಿಡುಗಡೆ ಹೊಂದಿದ್ದ.1994 ಆಗಸ್ಟ್ 19ರಂದು ಜೈಲಿನಿಂದ ಹೊರಗೆ ಬಂದು,1994 ಸೆಪ್ಟೆಂಬರ್ 12ರಂದು ಅಫಜಲಪುರ ತಾಲ್ಲೂಕಿನ ಭೋಸಗಾ ಗ್ರಾಮದಲ್ಲಿ (ಎರಡನೇ ಪತ್ನಿಯ ತವರೂರು) ಎರಡನೇ ಪತ್ನಿ ನಾಗಮ್ಮ ಹಾಗೂ 4 ವರ್ಷದ ಪುತ್ರಿ ವಿಜಯಲಕ್ಷ್ಮಿಯನ್ನು ಕೊಲೆಗೈದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂದು ಪೋಲಿಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಂತರ ಜೇವರ್ಗಿ ತಾಲ್ಲೂಕಿನ ಹಿಪ್ಪರಗಾ ಎಸ್.ಎನ್. ಗ್ರಾಮದ ಅಂಗನವಾಡಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸರೂಭಾಯಿಯನ್ನು ಮದುವೆಯಾದ. ಮೂರನೇ ಪತ್ನಿಗೆ ಶರಣಬಸಪ್ಪ ಎಂಬ ಮಗು ಜನಿಸಿದ ಮೂರೇ ತಿಂಗಳಲ್ಲಿ ಮತ್ತೆ ಜೈಲು ಪಾಲಾಗಿದ್ದ. 1994ರಲ್ಲಿ ಸೆರೆಮನೆಗೆ ತೆರಳಿದ ಸಾಯಬಣ್ಣ ನಾಟೀಕಾರ ಇದುವರೆಗೂ ಮರಳಿ ಗ್ರಾಮಕ್ಕೆ ಬಂದಿಲ್ಲ. ಪತ್ನಿ, ಪುತ್ರನ ಮುಖ ನೋಡಿಲ್ಲ.ಘಟನೆಗೆ ಸಂಬಂದಿಸಿದಂತೆ ಭಾನುವಾರ ಮಾಹಿತಿ ಸಂಗ್ರಹಿಸಲು ಮಂದೇವಾಲ ಗ್ರಾಮಕ್ಕೆ ತೆರಳಿದಾಗ ಯಾವುದೇ ವಿವರ ದೊರಕಲಿಲ್ಲ. ಕೊಲೆ ಆರೋಪಿ ಸಾಯಬಣ್ಣ ನಾಟೀಕಾರ ಮನೆಗೆ ತೆರಳಿದಾಗ ತಮ್ಮನ ಪತ್ನಿ ಯಾವುದೇ ವಿಷಯ ಬಹಿರಂಗ ಪಡಿಸಲು ನಿರಾಕರಿಸಿದ ಘಟನೆ ಜರುಗಿತು. ಆರೋಪಿ ಸಾಯಬಣ್ಣ ಸೇರಿದಂತೆ 4 ಜನ ಸಹೋದರರಿದ್ದಾರೆ. ಗ್ರಾಮದಲ್ಲಾಗಲಿ, ಸಹೋದರರ ಮನೆಯಲ್ಲಾಗಲಿ ಆತನ ಬಗ್ಗೆ ಸುಳಿವು ಹಾಗೂ ಭಾವಚಿತ್ರ ನೀಡಲಿಲ್ಲ. ಆರೋಪಿ ಮೂರನೇ ಹೆಂಡತಿ ಸರೂಭಾಯಿ ತನ್ನ ಪುತ್ರ ಶರಣಬಸಪ್ಪನೊಂದಿಗೆ ತವರೂರಾದ ಹಿಪ್ಪರಗಾ ಎಸ್.ಎನ್ ಗ್ರಾಮದಲ್ಲಿ ನೆಲೆಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry