ಮಂಗಳವಾರ, ಏಪ್ರಿಲ್ 20, 2021
25 °C

ಸಾಯುತ್ತಿರುವ ಭಾಷೆಗಳನ್ನು ಸಂರಕ್ಷಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಸಂರಕ್ಷಿಸಲು ಗೂಗಲ್ ಸಂಸ್ಥೆ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಜಗತ್ತಿನಲ್ಲಿ ಪ್ರಸ್ತುತ 7,000 ಭಾಷೆಗಳು ಬಳಕೆಯಲ್ಲಿವೆ. ಈ ಶತಮಾನದ ಅಂಚಿಗೆ ಇದರ ಅರ್ಧದಷ್ಟು ಭಾಷೆಗಳು ಅಳಿದುಹೋಗುವ ಸಾಧ್ಯತೆ ಇದೆ ಎಂಬುದು ಆತಂಕದ ಸಂಗತಿ.ಹೀಗಾಗಿ  ಅಳಿವಿನಂಚಿನಲ್ಲಿರುವ 3,000ಕ್ಕೂ ಅಧಿಕ ಭಾಷೆಗಳ ಕುರಿತ ದೃಶ್ಯ ಹಾಗೂ ಶ್ರವ್ಯ ಮಾಹಿತಿಗಳ ವಿನಿಮಯದಿಂದ ಆ ಭಾಷೆಗೆ ಬಲ ತುಂಬಲು ಸಾಧ್ಯವಾಗಬಹುದು ಎಂದು ಸಂಸ್ಥೆ ವ್ಯಕ್ತಪಡಿಸಿರುವ ಕಾಳಜಿ ಸ್ತುತ್ಯರ್ಹ. ಅತಿ ಹೆಚ್ಚಿನ ಭಾಷಾ ವೈವಿಧ್ಯ ಇರುವ ರಾಷ್ಟ್ರ ಭಾರತ. 2001ರ ಜನಗಣತಿಯ ಪ್ರಕಾರ ಭಾರತದಲ್ಲಿ 1635 ಮಾತೃಭಾಷೆಗಳಿವೆ.ಹಾಗೆಯೇ ಅಳಿವಿನಂಚಿನಲ್ಲಿರುವ ಭಾಷೆಗಳ ಸಂಖ್ಯೆಯೂ ಭಾರತದಲ್ಲಿ ಹೆಚ್ಚೇ ಇದೆ ಎಂಬುದು ಎಚ್ಚರಿಕೆಯ ಗಂಟೆ. ಯುನೆಸ್ಕೊ ಪಟ್ಟಿಯ ಪ್ರಕಾರ, ಭಾರತದ 197 ಭಾಷೆಗಳು ಅಳಿವಿನಂಚಿನಲ್ಲಿವೆ. ಭಾಷೆ ಮಾತನಾಡುವ ಜನರ ಗುಂಪು ಕಡಿಮೆ ಆಗುತ್ತಿದ್ದಂತೆಯೇ ಆ ಭಾಷೆ ಸತ್ತು ಹೋಗುತ್ತದೆ. 2010ರಲ್ಲಿ ಅಂಡಮಾನ್‌ನಲ್ಲಿ  85 ವರ್ಷದ ಬೊವಾ ಸೀನಿಯರ್ ಸತ್ತಾಗ ಆಕೆಯೊಂದಿಗೇ ಬೊ ಭಾಷೆ ಸತ್ತುಹೋಯಿತು.ಇಂದು ಮಧ್ಯ ಹಾಗೂ ಉತ್ತರ ಅಂಡಮಾನ್‌ನಲ್ಲಿ, ಗ್ರೇಟ್ ಅಂಡಮಾನೀಸ್ ಭಾಷೆ ಮಾತನಾಡಬಲ್ಲವರು ಕೇವಲ ಐದು ಮಂದಿ ಇದ್ದಾರೆ. ದಕ್ಷಿಣ ಅಂಡಮಾನ್‌ನಲ್ಲಿ ಜರಾವಾ ಮಾತನಾಡುವಂತಹವರು ಕೇವಲ 31 ಮಂದಿ ಇದ್ದಾರೆ. 10,000ಕ್ಕೂ ಕಡಿಮೆ ಮಂದಿ ಮಾತನಾಡುವ ಭಾಷೆಯನ್ನು ಅಳಿವಿನಂಚಿನಲ್ಲಿರುವ ಭಾಷೆ ಎಂದು ಗುರುತಿಸಲಾಗುತ್ತದೆ.

ಭಾಷೆಗಳು ಅಳಿಯುವುದನ್ನು ತಪ್ಪಿಸಲು ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್) ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ.

 

ಇವುಗಳ ಪೈಕಿ, ರಾಷ್ಟ್ರದ ಪ್ರತಿ ರಾಜ್ಯಗಳಲ್ಲಿ ಅಳಿವಿನಂಚಿನಲ್ಲಿರುವ ಭಾಷೆಗಳ ಸ್ಥಾನಮಾನ ಕುರಿತು ಸಿಐಐಎಲ್ ನಡೆಸುತ್ತಿರುವ ಸಮೀಕ್ಷೆಗಳು ಮುಖ್ಯವಾದವು. ಆರ್ಥಿಕ, ಸಾಮಾಜಿಕ ಕಾರಣಗಳು ಭಾಷೆಗಳು ಅಳಿಯಲು ಕಾರಣವಾಗಬಹುದು. ಉದ್ಯೋಗ ಅರಸಿ ಬೇರೆ ಊರುಗಳಿಗೆ ಹೋಗುವುದು, ವಿದ್ಯಾಭ್ಯಾಸಕ್ಕಾಗಿ ಮೂಲ ಭಾಷೆ ತೊರೆಯುವುದು, ಲಿಂಗಾನುಪಾತದಲ್ಲಿ ಅಸಮತೋಲನ - ಈ ಎಲ್ಲವೂ ಭಾಷೆಗಳು ಅಳಿಯಲು ಕಾರಣ ಎಂಬುದು ಭಾಷಾವಿಜ್ಞಾನಿಗಳ ವಿಶ್ಲೇಷಣೆ.ತ್ರಿಪುರಾದ  ಬುಡಕಟ್ಟು ಭಾಷೆ `ಸೈಮರ್~ ಮಾತನಾಡುವವರ ಸಂಖ್ಯೆ ಈಗ ಕೇವಲ ನಾಲ್ಕಕ್ಕೆ ಇಳಿದಿದೆ. ಈ ಜನಾಂಗದಲ್ಲಿ ಹೆಣ್ಣುಸಂತಾನ ಕಡಿಮೆಯಾದುದೂ ಇದಕ್ಕೆ ಕಾರಣ.  ಅಳಿದು ಹೋಗುತ್ತಿರುವ ಭಾಷೆಯನ್ನು ಉಳಿಸುವುದು ಸಾಧ್ಯವೇ ಇಲ್ಲ ಎಂದಾದಾಗ ಅಂತಹ ಭಾಷೆಯಲ್ಲಿರುವ ಜ್ಞಾನ, ಜಾನಪದವನ್ನು ಸವಿವರವಾಗಿ ದಾಖಲಿಸುವ ಕೆಲಸವನ್ನು ಸಿಐಐಎಲ್ ಮಾಡುತ್ತಿದೆ.

 

ಒಂದು ಭಾಷೆ ಅಳಿದುಹೋಯಿತು ಎಂದರೆ ಒಂದು ಜೀವನವಿಧಾನ, ಚಿಂತನೆಯ ಮಾರ್ಗಗಳು ಹಾಗೂ ಸಂಸ್ಕೃತಿಯನ್ನೇ  ಕಳೆದುಕೊಂಡಂತೆ. ಇಡೀ ಜನಾಂಗದ ಸ್ಮೃತಿ ಕೋಶಗಳಾದ ಭಾಷೆಗಳನ್ನು ಸಂರಕ್ಷಿಸಲು ಸಮುದಾಯಗಳಷ್ಟೇ ಅಲ್ಲ ಸರ್ಕಾರಗಳೂ ಸೂಕ್ತ ನೀತಿಗಳ ಮೂಲಕ  ಪ್ರಯತ್ನಗಳನ್ನು ಮಾಡುವುದು ಅಗತ್ಯ. ಅಂತರ್ಜಾಲದಲ್ಲಿ ವಿಶ್ವವೇ ಒಂದುಗೂಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಭಾಷೆ ಮಾತನಾಡುವವರು ಇಲ್ಲದಿದ್ದರೂ ಭಾಷೆಗಳು ನಮ್ಮಡನೆ ಉಳಿಯುತ್ತವೆ ಎಂಬಂತಹ ಆಶಾಭಾವನೆ ತಾಳಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.