ಭಾನುವಾರ, ಮಾರ್ಚ್ 26, 2023
31 °C
ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಬ್ಯಾಲೆಸ್ಟಿಕ್‌ ತಜ್ಞರಿಂದ ಲಾಡ್ಜ್‌ ಕೊಠಡಿ ಪರಿಶೀಲನೆ

ಸಾಯುವ ಮುನ್ನ ಗುಂಡು ಹಾರಿಸಿದ್ದು ಸಾಬೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಯುವ ಮುನ್ನ ಗುಂಡು ಹಾರಿಸಿದ್ದು ಸಾಬೀತು

ಮಡಿಕೇರಿ: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಆಕ್ರೋಶದಿಂದ ಇಲಾಖೆಯ ರಿವಾಲ್ವರ್‌ನಿಂದಲೇ ಎರಡು ಬಾರಿ ಹಾಸಿಗೆಗೆ ಗುಂಡು ಹಾರಿಸಿದ್ದು ತನಿಖೆಯಿಂದ ಸಾಬೀತಾಗಿದೆ.



ಜುಲೈ 7ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ನಗರದ ವಿನಾಯಕ ಲಾಡ್ಜ್‌ನ ಕೊಠಡಿ ಸಂಖ್ಯೆ 315ಕ್ಕೆ ಭಾನುವಾರ ಭೇಟಿ ನೀಡಿದ್ದ ಬ್ಯಾಲೆಸ್ಟಿಕ್‌ ತಜ್ಞರ ತಂಡವು ಗಣಪತಿ ರಿವಾಲ್ವರ್‌ನಿಂದಲೇ ಗುಂಡು ಹಾರಿರುವುದನ್ನು ಪತ್ತೆ ಹಚ್ಚಿದೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕ ರವೀಂದ್ರನಾಥ್ ನೇತೃತ್ವದಲ್ಲಿ ನಾಗಭೂಷಣ್‌, ಪ್ರಕಾಶ್‌ ತಪಾಸಣೆ ನಡೆಸಿದರು.



ಬಳಿಕ ಗುಂಡುಗಳು ಎಷ್ಟು ಅಂತರಕ್ಕೆ ಹೋಗಿ ಬಿದ್ದಿವೆ ಸೇರಿದಂತೆ ಮತ್ತಿತರ ಮಹತ್ವದ ಮಾಹಿತಿ ಕಲೆ ಹಾಕಿತು. ಲಾಡ್ಜ್‌ನ ಸಿಬ್ಬಂದಿಯನ್ನು ಕೊಠಡಿಗೆ ಕರೆಯಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ಶೂಟ್‌ ಮಾಡಿಕೊಂಡ ವೇಳೆ ಶಬ್ದ ಕೇಳಿಸಿರುವ ಬಗ್ಗೆಯೂ ಪ್ರಶ್ನಿಸಿದ್ದಾರೆ.



ಗಣಪತಿ ರಿವಾಲ್ವರ್‌ನಲ್ಲಿ ಉಳಿದಿದ್ದ ಎಂಟು ಬುಲೆಟ್‌ಗಳಿಗೂ ಹಾಸಿಗೆಯಲ್ಲಿ ದೊರೆತಿರುವ ಎರಡು ಬುಲೆಟ್‌ಗಳ ಸಾಮ್ಯತೆಯನ್ನು ಅಧಿಕಾರಿಗಳು ಪರೀಕ್ಷಿಸಿದರು. ನೇಣು ಹಾಕಿಕೊಳ್ಳುವ ಬದಲು ಶೂಟ್ ಮಾಡಿಕೊಳ್ಳುವ ಉದ್ದೇಶವಿತ್ತೇ ಎಂಬುದರ ಬಗ್ಗೆಯೂ ಪರಿಶೀಲಿಸಲಾಯಿತು ಎಂದು ಮೂಲಗಳು ಖಚಿತಪಡಿಸಿವೆ.



ಐಜಿಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಡಿವೈಎಸ್‌ಪಿ ರಿವಾಲ್ವರ್‌ ಬಳಸುವಂತಿಲ್ಲ. ಆದರೆ, ಎಂ.ಕೆ.ಗಣಪತಿ ಅವರು ಜೀವ ಬೆದರಿಕೆಯಿದೆ ಎಂದು ಹೇಳಿ ಇಲಾಖೆಯಿಂದ ಅನುಮತಿ ಪಡೆದು ರಿವಾಲ್ವರ್‌ ಇಟ್ಟುಕೊಂಡಿದ್ದರು.



ಮುಂದುವರಿದ ಸಿಐಡಿ ತನಿಖೆ: ನಗರದಲ್ಲಿ ಮೂರು ದಿನಗಳಿಂದ ಬೀಡುಬಿಟ್ಟಿರುವ ಸಿಐಡಿ ಎಸ್ಪಿ ಕುಮಾರಸ್ವಾಮಿ ನೇತೃತ್ವದ ತಂಡವು, ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಬೆಂಗಳೂರಿಗೆ ತೆರಳಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ತೀವ್ರಗೊಳಿಸಿದೆ.



ಸಂಶಯಕ್ಕೆ ಕಾರಣವಾಗಿರುವ ದೂರಿನ ಪ್ರತಿ, ಆತ್ಮಹತ್ಯೆ ಮಾಡಿಕೊಂಡ ಕೊಠಡಿಯ ಬಾಗಿಲನ್ನು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಒಡೆದ ದೃಶ್ಯಾವಳಿಗಳು, ಛಾಯಾಚಿತ್ರಗಳು, ಕೊಠಡಿಯಲ್ಲಿ ದೊರೆತ ಬಟ್ಟೆ, ಪರ್ಸ್‌, ಡಿವೈಎಸ್‌ಪಿ ಬಳಸುತ್ತಿದ್ದ ಮೊಬೈಲ್‌, ಸಿಮ್‌ ಹಾಗೂ ಜಿಲ್ಲಾ ಪೊಲೀಸರು ಸಂಗ್ರಹಿಸಿದ್ದ ಖಾಸಗಿ ವಾಹಿನಿಯ ಸಂದರ್ಶನದ ದೃಶ್ಯಾವಳಿಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಹೇಳಿಕೆ ಸೇರಿದಂತೆ ಅವರಿಂದ ಪ್ರಾಥಮಿಕ ವರದಿಯನ್ನು ಸಿಐಡಿ ಅಧಿಕಾರಿಗಳು ಪಡೆದುಕೊಂಡರು.



ಸ್ಥಳೀಯ ಖಾಸಗಿ ವಾಹಿನಿಯ ಕಚೇರಿಗೆ ಭಾನುವಾರ ಎರಡನೇ ಬಾರಿಗೆ ಭೇಟಿ ನೀಡಿ, ಸಂದರ್ಶನ ನಡೆಸಿದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಆದರೆ, ಸಂದರ್ಶನದ ವೇಳೆ ಗಣಪತಿ ಪ್ರದರ್ಶಿಸಿದ್ದ ಆರೋಗ್ಯ ದೃಢೀಕರಣ ಪತ್ರಗಳು, ತಮ್ಮ ವಿರುದ್ಧ ಇಂಗ್ಲಿಷ್‌ ಪತ್ರಿಕೆಯಲ್ಲಿ ಬಂದಿದ್ದ ವರದಿಗಳು ಹಾಗೂ ರೌಡಿಶೀಟರ್‌ ಪ್ರಶಾಂತ್‌ ಛಾಯಾಚಿತ್ರಗಳನ್ನು ವಶಕ್ಕೆ ಪಡೆಯಲು ಸಿಐಡಿ ತಂಡಕ್ಕೆ ಸಾಧ್ಯವಾಗಿಲ್ಲ. ಸಾರ್ವಜನಿಕರ ಹೇಳಿಕೆಯನ್ನೂ ಸಿಐಡಿ ದಾಖಲಿಸಿಕೊಂಡಿದೆ.



ಮನೋವೈದ್ಯರ ಹೇಳಿಕೆ ದಾಖಲು (ಮಂಗಳೂರು ವರದಿ): ಡಿವೈಎಸ್‌ಪಿ ಎಂ.ಕೆ.ಗಣಪತಿಯವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಮೃತ ಅಧಿಕಾರಿಗೆ ಚಿಕಿತ್ಸೆ ನೀಡುತ್ತಿದ್ದ ಎ.ಜೆ.ಆಸ್ಪತ್ರೆಯ ಮನೋವೈದ್ಯ ಡಾ.ಪಿ.ಕೆ.ಕಿರಣ್‌ಕುಮಾರ್‌ ಅವರ ಹೇಳಿಕೆಯನ್ನು ಭಾನುವಾರ ದಾಖಲು ಮಾಡಿಕೊಂಡರು.



ಶನಿವಾರ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್‌ ರೆಡ್ಡಿ ಮತ್ತು ಡಿಐಜಿ ಹೇಮಂತ್‌ ನಿಂಬಾಳ್ಕರ್ ನೇತೃತ್ವದ ತಂಡ, ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿನ ಗಣಪತಿ ಅವರ ಕಚೇರಿಯ ಮಹಜರು ನಡೆಸಿತ್ತು. ಬಳಿಕ ಅಲ್ಲಿನ ಸಿಬ್ಬಂದಿಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿತ್ತು. ಭಾನುವಾರ ಬೆಳಿಗ್ಗೆಯೇ ಈ ತಂಡ ಡಾ.ಕಿರಣ್‌ಕುಮಾರ್‌ ಅವರನ್ನು ಭೇಟಿ ಮಾಡಿದ್ದು, ಮೃತ ಡಿವೈಎಸ್‌ಪಿಗೆ ಚಿಕಿತ್ಸೆ ನೀಡುತ್ತಿದ್ದ ಕುರಿತು ವಿಸ್ತೃತವಾಗಿ ಮಾಹಿತಿ ಸಂಗ್ರಹಿಸಿದೆ.



ಸಿಐಡಿ ಪೊಲೀಸರು ಹೇಳಿಕೆ ಪಡೆದಿರುವುದನ್ನು ಮಾಧ್ಯಮಗಳಿಗೆ ಖಚಿತಪಡಿಸಿದ ಡಾ.ಕಿರಣ್‌ಕುಮಾರ್, ‘ಗಣಪತಿ ಅವರು ತಲೆನೋವು ಮತ್ತು ಮರೆವು ರೋಗಕ್ಕೆ ಚಿಕಿತ್ಸೆ ಪಡೆಯಲು ನನ್ನ ಬಳಿ ಬಂದಿದ್ದರು. ಚಿಕಿತ್ಸೆಗೆ ಬರುವಾಗ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾದಂತೆ ಇದ್ದರು. ಆದರೆ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು.



ಯಾವಾಗಲೂ ಶಾಂತವಾಗಿ ಇರುತ್ತಿದ್ದರು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳು ಅಥವಾ ಹಿರಿಯ ಅಧಿಕಾರಿಗಳಿಂದ ಒತ್ತಡ, ಕಿರುಕುಳ ಇರುವ ಕುರಿತು ನನ್ನ ಜತೆ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ’ ಎಂದು ತಿಳಿಸಿದರು.



ಜೂನ್‌ 23ರಂದು ಗಣಪತಿ ಕೊನೆಯ ಬಾರಿಗೆ ಚಿಕಿತ್ಸೆಗಾಗಿ ಬಂದಿದ್ದರು. ಬೇಗ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕಾರಣಿ ಅಥವಾ ಪೊಲೀಸ್‌ ಅಧಿಕಾರಿಗಳು ತಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.



ಜಾರ್ಜ್‌ ಬಂಧನಕ್ಕೆ ಆಗ್ರಹ

ಕುಶಾಲನಗರ: ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆಗೂ ಮುನ್ನ ನೀಡಿರುವ ಟಿ.ವಿ. ವಾಹಿನಿಗೆ ನೀಡಿದ ಹೇಳಿಕೆ ಆಧರಿಸಿ ಸಚಿವ ಕೆ.ಜೆ.ಜಾರ್ಜ್‌, ಲೋಕಾಯುಕ್ತ ಐಜಿ ಪ್ರಣವ್‌ ಮೊಹಾಂತಿ, ಎಡಿಜಿಪಿ ಎ.ಎಂ.ಪ್ರಸಾದ್‌ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಜಾಜಿವಿಲಾ ಎಸ್ಟೇಟ್‌ನಲ್ಲಿರುವ ಗಣಪತಿ ನಿವಾಸಕ್ಕೆ ಭಾನುವಾರ ಭೇಟಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಇದ್ದರು.



ಲಾಡ್ಜ್‌ ಸಿಬ್ಬಂದಿ ಬೆನ್ನು ಹತ್ತಿದ ಪೊಲೀಸರು

ಜುಲೈ 7ರಂದು ಗಣಪತಿ ಅವರಿಗೆ ಕೋಣೆ ಕೊಟ್ಟ ಸಿಬ್ಬಂದಿಯೊಬ್ಬರನ್ನು ಪೊಲೀಸರು ಪದೇ ಪದೇ ವಿಚಾರಿಸುತ್ತಿದ್ದಾರೆ. ಆತನನ್ನು ಸಿಐಡಿ ಅಧಿಕಾರಿಗಳು, ಸ್ಥಳೀಯ ಪೊಲೀಸರು ಬಿಡದೆ ವಿಚಾರಣೆ ನಡೆಸುತ್ತಿದ್ದಾರೆ.  ಕರೆದಾಗ ವಿಚಾರಣೆಗೆ ಹಾಜರಾಗಬೇಕು, ಸದ್ಯಕ್ಕೆ ಊರಿಗೆ ತೆರಳದಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.