ಸಾರಂಗಿ ಹಾಡು

7

ಸಾರಂಗಿ ಹಾಡು

Published:
Updated:
ಸಾರಂಗಿ ಹಾಡು

`ಸಾರಂಗಿ ಅತ್ಯಂತ ಮಧುರ ನಾದ ಕೊಡುವ ವಾದ್ಯ. ಕಠಿಣ ಪರಿಶ್ರಮ ನಿರೀಕ್ಷಿಸುವ ವಾದ್ಯವೂ ಹೌದು. ಐದು ವರ್ಷದ ಮಗು ಸಾರಂಗಿ ಕಲಿಯಲು ಶುರು ಮಾಡಬಹುದು.ಕನಿಷ್ಠ 15 ವರ್ಷವಾದರೂ ಗುರುಗಳ ಜತೆ ಇದ್ದುಕೊಂಡೇ ಕಲಿಯಬೇಕು. ಎರಡು ಮೂರು ತಿಂಗಳಲ್ಲಿ ನುಡಿಸಬೇಕು ಅಂದರೆ ಅದು ಖಂಡಿತವಾಗಿಯೂ ಅಸಾಧ್ಯದ ಮಾತು~ ಎನ್ನುತ್ತಲೇ ಸಾರಂಗಿಯನ್ನು ಒಲಿಸಿಕೊಳ್ಳಲು ಪಡಬೇಕಾದ ಕಷ್ಟವನ್ನು ಒತ್ತಿ ಹೇಳುತ್ತಾರೆ ಆ ವಾದ್ಯ ನುಡಿಸುವುದರಲ್ಲಿ ಪಳಗಿರುವ ಉಸ್ತಾದ್ ಫಯಾಜ್ ಖಾನ್.`ಈಗಿನ ಮಕ್ಕಳಿಗೆ ತಾಳ್ಮೆ ಎನ್ನುವುದೇ ಇಲ್ಲ. ಎಲ್ಲ ಇನ್‌ಸ್ಟಂಟ್ ಆಗಬೇಕು ಎಂದೇ ಬಯಸುತ್ತಾರೆ~ ಎಂದು ವಿಷಾದಿಸುವ ಅವರು, ಕಠಿಣ ಪರಿಶ್ರಮ, ಶ್ರದ್ಧೆ, ಸತತ ಅಭ್ಯಾಸವನ್ನು ಈ ವಾದ್ಯ ನಿರೀಕ್ಷಿಸುತ್ತದೆ ಎನ್ನುತ್ತಾರೆ.ಸಾರಂಗಿ ಕಲಿಯಲು ಮಕ್ಕಳೇಕೆ ಮುಂದೆ ಬರುತ್ತಿಲ್ಲ ಎಂಬುದು ಪ್ರಶ್ನೆ. `ಮೊದಮೊದಲು ಉತ್ಸಾಹದಿಂದ ಬರುವ ಮಕ್ಕಳು ಸಹ, ರಿಯಾಜ್ ಮಾಡಬೇಕು. ಕಷ್ಟ ಪಡಬೇಕು ಎಂದಾಗ ಕ್ಲಾಸಿಗೆ ಬರಲು ಹಿಂಜರಿಯುತ್ತಾರೆ. ಒಂದು ವೇಳೆ ಗದರಿಸಿ ಕಲಿಸ ಹೊರಟರೆ ಮುಂದಿನ ಕ್ಲಾಸ್‌ಗೆ ಬರುವುದೇ ಇಲ್ಲ~ ಎಂದು ಸಾರಂಗಿ ಕಲಿಸುವ ಸಾಹಸವನ್ನೂ ಹಂಚಿಕೊಳ್ಳುತ್ತಾರೆ ಉಸ್ತಾದ್‌ಜೀ.ಮನೆತನಕ್ಕೆ ಸೀಮಿತ

`ಬಹಳ ಹಿಂದಿನ ಕಾಲಘಟ್ಟವನ್ನು ಗಮನಿಸಿದರೆ ಸಂಗೀತ ಕೆಲವೊಂದು ಮನೆತನಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಶ್ರೀಮಂತ ಮನೆತನದವರು ಇದನ್ನು ಕ್ಷುಲ್ಲಕವಾಗಿ ಕಾಣುತ್ತಿದ್ದರು. ಸಂಗೀತ ವೃತ್ತಿ ಎಂದರೆ ಉದ್ಯೋಗವೇ ಅಲ್ಲ ಎಂಬಂತಹ ಪರಿಸ್ಥಿತಿಯಿತ್ತು.

ಆ ಕಾಲದಲ್ಲಿ ನಮ್ಮ ಪೂರ್ವಜರು ಸಾರಂಗಿ ಎಂಬ ಸಂಗೀತ ವಾದ್ಯವನ್ನು ನುಡಿಸಾಣಿಕೆಗೆ ಒಲಿಸಿಕೊಂಡಿದ್ದಲ್ಲದೆ ಉಳಿಸಿಕೊಂಡೂ ಬಂದರು. ನಮ್ಮ ತಾತ ಮೈಸೂರು ಮಹಾರಾಜರ ಕಾಲದಲ್ಲಿ ಸಾರಂಗಿಯನ್ನು ಕರ್ನಾಟಕಕ್ಕೆ ತಂದರು.

 

ನವಾಬರ ಕಾಲದಲ್ಲಿ ತಂದೆಯವರು ಸಾರಂಗಿಯಲ್ಲಿ ಮತ್ತಷ್ಟು ಪ್ರಯೋಗ ಮಾಡಿದರು. ಕಿರಾಣಾ ಘರಾಣೆಯಿಂದ ಬಂದ ನಮ್ಮ ಕುಟುಂಬ ಕರ್ನಾಟಕದಲ್ಲಿ ಸಾರಂಗಿ ನುಡಿಸುವ ಏಕೈಕ ಕುಟುಂಬವಾಗಿ ಉಳಿಯಿತು.1950ರಲ್ಲಿ ತಂದೆಯವರಿಗೆ ಧಾರವಾಡ ಆಕಾಶವಾಣಿಯಲ್ಲಿ ನೌಕರಿ ಸಿಕ್ಕಿತು. ಅಲ್ಲಿಂದ ಮತ್ತೆ ಸಾರಂಗಿಯೊಂದಿಗೆ ನಮ್ಮ ಕುಟುಂಬದ ಸಂಬಂಧ ಮತ್ತೂ ಗಾಢವಾಯಿತು~ ಎಂದು  ಮಧುರಾತಿ ಮಧುರ ವಾದ್ಯದ ಜತೆ ತಮ್ಮ ಅನುಬಂಧ ಗಟ್ಟಿಯಾದ ಬಗೆಯನ್ನು ವಿವರಿಸುತ್ತಾರೆ ಫಯಾಜ್ ಖಾನ್.  `ನಾನು ಆರು ವರ್ಷದ ಬಾಲಕನಿದ್ದಾಗಲೇ ಸಾರಂಗಿ ಕಲಿಯಲಾರಂಭಿಸಿದೆ. ತಂದೆಯವರೇ ಗುರುಗಳು. ಬಳಿಕ ಮುಂಬೈಯಲ್ಲಿರುವ ಹಿರಿಯ ಸಾರಂಗಿ ಕಲಾವಿದ ಪಂ.ರಾಮನಾರಾಯಣ್ ಅವರ ಬಳಿ ಸುಮಾರು ಆರೇಳು ವರ್ಷ ಕಲಿತೆ.ಈಗ ನನ್ನ ಮಗ ಸರ್ಫ್ರಾಜ್‌ಖಾನ್ ಕೂಡ ಅವರ ಬಳಿಯೇ ಸಾರಂಗಿ ಕಲಿಯುತ್ತಿದ್ದಾನೆ. ಜತೆಗೆ ಮೂವರು ಶಿಷ್ಯಂದಿರನ್ನೂ ತಯಾರು ಮಾಡುತ್ತಿದ್ದೇನೆ. ಆದರೆ ಈಗ ಸಾರಂಗಿ ಕಲಿಯಲು ಮುಂದೆ ಬರುವವರ ಸಂಖ್ಯೆ ತೀರಾ ಕಡಿಮೆ~ ಎನ್ನುತ್ತಾರೆ.ಸಾರಂಗಿ ನಮ್ಮ ಭಾರತೀಯ ವಾದ್ಯವೇ. ಬಹಳ ಹಳೆಯದು. ಕೆಲವು ಪೌರಾಣಿಕ ಸನ್ನಿವೇಶಗಳಲ್ಲಿ ಸಾರಂಗಿಯ ಉಲ್ಲೇಖ ಕಾಣಬಹುದು. ಆಗ ಇದನ್ನು `ರಾವಣ ಹಸ್ತ~ ಎನ್ನುತ್ತಿದ್ದರು. ಇದರಲ್ಲಿ 40-42 ತಂತಿಗಳಿರುತ್ತವೆ.ಆದರೆ ನುಡಿಸಾಣಿಕೆಗೆ ಬಳಸುವುದು ಬರೀ ಮೂರು ತಂತಿಗಳನ್ನು ಮಾತ್ರ. ನೇಪಾಳ, ರಾಜಸ್ತಾನಗಳಲ್ಲಿ ಬಳಸುವ ಸಾರಂಗಿಯಲ್ಲಿ ಸುಮಾರು 60 ತಂತಿಗಳಿರುತ್ತವೆ. ಈ ವಾದ್ಯದ ಸ್ವರೂಪ ಬದಲಾಗುತ್ತಲೇ ಇದೆ. ಈಗ ಪ್ರಚಲಿತದಲ್ಲಿರುವ ಸಾರಂಗಿ ವಾದ್ಯ ಅತ್ಯಂತ ಸುಧಾರಿತ ರೂಪದ್ದು.ಮೊದಮೊದಲು ಸಾರಂಗಿಯನ್ನು ಸಾಥಿ ವಾದ್ಯವಾಗಿ ಬಳಸುತ್ತಿದ್ದರು. ಗಾಯಕರು ಕೂಡ ಸಾರಂಗಿಯನ್ನು ತುಂಬ ನೆಚ್ಚಿಕೊಂಡಿದ್ದರು. ಆಗ ಹಿಂದೂಸ್ತಾನಿ ಸಂಗೀತಕ್ಕೆ ಸಾಥ್ ನೀಡಲು ಹಾರ್ಮೋನಿಯಂ ಕೂಡ ಬಂದಿರಲಿಲ್ಲ. ಕ್ರಮೇಣ ಹಾರ್ಮೋನಿಯಂ ಸಾಥ್ ಸಿಗತೊಡಗಿತು. ಆಗ ಸಾರಂಗಿ ತೆರೆಮರೆಗೆ ಸರಿಯಿತು.ಅತ್ಯಂತ ಮಧುರವಾದ ನಾದ ನೀಡುವ ಸಾರಂಗಿ ವಾದ್ಯ ಗಾಯನಕ್ಕೆ ಅತ್ಯಂತ ಹತ್ತಿರವಾದದ್ದು. ಇದರ ಸುನಾದ, ಗಮಕ ಗಾಯನಕ್ಕಿಂತಲೂ ಹಿತವಾಗಿ ಕೇಳಿಸುತ್ತದೆ. ಹೀಗಾಗಿ ಗಾಯಕರು ಸಾರಂಗಿಯನ್ನು ಸಾಥಿ ವಾದ್ಯವಾಗಿ ಬಳಸುವುದನ್ನು ಇಷ್ಟಪಡುವುದಿಲ್ಲವೇನೋ ಎಂಬ ಶಂಕೆ ಫಯಾಜ್ ಖಾನ್ ಅವರದು.ಹಾಗೆ ನೋಡಿದರೆ ಸಾರಂಗಿಯನ್ನು ಎಲ್ಲ ಪ್ರಕಾರದ ಗಾಯನದಲ್ಲಿಯೂ ಬಳಸುತ್ತಾರೆ. ಶಾಸ್ತ್ರೀಯ ಸಂಗೀತ, ಗಜಲ್, ಸಿನಿಮಾ ಸಂಗೀತದಲ್ಲಿ ಸಾರಂಗಿ ಬಳಸುವುದಿದೆ. ಹೆಚ್ಚಾಗಿ ಹಿಂದಿ, ಬೆಂಗಾಲಿ ಸಿನಿಮಾ ಸಂಗೀತಗಳಲ್ಲಿ ಸಾರಂಗಿಯದ್ದು ಪ್ರಮುಖ ಪಾತ್ರ. `ಚುನ್~ ಮರದ ವಾದ್ಯ

ಸಾರಂಗಿಯನ್ನು `ಚುನ್~ ಎಂಬ ಮರದಿಂದ ಮಾಡುವುದು. ಒಂದೇ ಮರ ಬಳಸಿ ಮಾಡಲಾಗುತ್ತದೆ. ಇದರ ಮೇಲ್ಭಾಗವನ್ನು ಆಡಿನ ಚರ್ಮದಿಂದ ಮುಚ್ಚಲಾಗುತ್ತದೆ. ವಾದ್ಯದ ಪ್ರಮುಖ ಮೂರು ತಂತಿಗಳಿಗೆ ಆಡಿನ ಕರುಳಿನ ಹದಗೊಳಿಸಿದ ಭಾಗವನ್ನು ಸೇರಿಸುತ್ತಾರೆ.

 

ಉಳಿದ ತಂತಿಗಳನ್ನು ಸ್ಟೀಲ್‌ನಿಂದ ತಯಾರಿಸುತ್ತಾರೆ. ನುಡಿಸಾಣಿಕೆಗೆ ಕಮಾನು ಬಳಸಲಾಗುತ್ತದೆ. ಉಗುರಿನಿಂದ ಮೇಲ್ಭಾಗದಲ್ಲಿರುವ ಚರ್ಮದಿಂದ ನುಡಿಸುವುದು. ಇದು ತುಂಬ ನೋವು ತರುತ್ತದೆ ಎಂದು ವಿವರಿಸುತ್ತಾರೆ ಉಸ್ತಾದ್‌ಜೀ.ಈ ವಾದ್ಯ ಸುಲಭವಾಗಿ ಎಲ್ಲೂ ಸಿಗುವುದಿಲ್ಲ. ಮುಂಬೈ, ಮೀರತ್, ಮುರಾದಾಬಾದ್‌ಗಳಲ್ಲಿ ಮಾತ್ರ ಕೆಲವೇ ಕೆಲವು ಕಡೆ ಸಿಗುತ್ತದೆ. ಇದನ್ನು ನುಡಿಸುವವರು ಕಡಿಮೆ ಆದ್ದರಿಂದ ಮಾಡುವವರೂ ಕಡಿಮೆ. 2-3 ರೀತಿಯ ಸಾರಂಗಿ ಸಿಗುತ್ತದೆ. ಬೆಲೆ 12 ರಿಂದ 15 ಸಾವಿರ ರೂಪಾಯಿ. ಉತ್ತಮ ಗುಣಮಟ್ಟದ ಸಾರಂಗಿಗೆ 25ರಿಂದ 30 ಸಾವಿರ ರೂಪಾಯಿ ಇರುತ್ತದೆ.ವಾದ್ಯ, ನುಡಿಸುವ ಕ್ರಮ, ಅಭ್ಯಾಸ ಮತ್ತಿತರ ಸಮಗ್ರ ಮಾಹಿತಿಗಾಗಿ ಉಸ್ತಾದ್ ಫಯಾಜ್ ಖಾನ್ ಅವರನ್ನು 98455 92037ನಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry