ಸಾರಸ್ವತ ದಿಗ್ಗಜರ ಅನುಭವಗಳಿಗೆ ಸಾಕ್ಷಿಯಾದ `ಸಾಹಿತ್ಯ ಉತ್ಸವ'

7

ಸಾರಸ್ವತ ದಿಗ್ಗಜರ ಅನುಭವಗಳಿಗೆ ಸಾಕ್ಷಿಯಾದ `ಸಾಹಿತ್ಯ ಉತ್ಸವ'

Published:
Updated:

ಬೆಂಗಳೂರು: ಕನ್ನಡ ಸಾರಸ್ವತ ಲೋಕದ ದಿಗ್ಗಜರು ತಮ್ಮ ಬಾಲ್ಯದ ನೆನಪು, ಸುತ್ತಮುತ್ತಲಿನ ಪರಿಸರ, ನಿತ್ಯ ಮನಹೊಕ್ಕುವ ಮತ್ತು ಕಲಕುವ ವಿಚಾರಧಾರೆಗಳು ಹೇಗೆ ಅಕ್ಷರ ರೂಪ ಪಡೆಯುತ್ತವೆ ಎಂಬ ಕುತೂಹಲಕಾರಿ ಅನುಭವಗಳನ್ನು ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಹಂಚಿಕೊಂಡರು.ನಗರದ ಜಯಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಶನಿವಾರ ನಡೆದ `ಸೃಜನಶೀಲತೆ' ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಾಹಿತಿಗಳು ಜೀವಾನುಭವವನ್ನು ತೆರೆದಿಟ್ಟಿದ್ದು ಹೀಗೆ...ಲೇಖಕಿ ವೈದೇಹಿ, `ಚಿಕ್ಕಂದಿಂನಿಂದಲೂ ಕೇಳಿದ ಕತೆಗಳಲ್ಲಿ ಬರುವ ಸ್ತ್ರೀ ಪಾತ್ರದೊಳಗಿನ ಅವ್ಯಕ್ತ ಮಾತುಗಳೇ ನನ್ನೊಳಗಿನ ಸೃಜನಶೀಲತೆಯನ್ನು ಬಡಿದೆಬ್ಬಿಸಿತು' ಎಂದು ಪ್ರತಿಕ್ರಿಯೆ ನೀಡಿದರು.`ಕುಂದಾಪುರ ಕನ್ನಡದಲ್ಲಿರುವ ಜನಪದ ಕಾವ್ಯಗಳಲ್ಲಿ ಕಾಡುವ ಅಂಶಗಳನ್ನು ನನ್ನದೇ ಶೈಲಿಯಲ್ಲಿ ಶಿಷ್ಟ ಕನ್ನಡದ ರೂಪ ನೀಡುತ್ತಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮನೆಗಳಲ್ಲಿ ವಿಧವೆಯರ ದೈನ್ಯ ಸ್ಥಿತಿಯನ್ನು ನೋಡಿದ್ದೇನೆ. ಸ್ತ್ರೀಯರ ಭಾವನೆ, ಪ್ರತಿಭೆಯನ್ನು ಗೌರವಿಸದೇ ಇರುವ ಪರಂಪರೆ ಸಂಸ್ಕೃತಿಯಲ್ಲಿ ಗಾಢವಾಗಿದ್ದು, ಅದನ್ನು ಪ್ರಶ್ನಿಸುತ್ತಲೇ ಹೊಸ ಪಾತ್ರಗಳನ್ನು ಸೃಷ್ಟಿಸುವ ಮೂಲಕ ಬರವಣಿಗೆಯ ಕಲೆಯನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ' ಎಂದು ವಿನಮ್ರವಾಗಿ ನುಡಿದರು.ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, `ಹುಟ್ಟೂರಿನ ನದಿಯ ತಟದಲ್ಲಿ ತೇಲುತ್ತಿದ್ದ ಹೆಣಗಳು ಮತ್ತು ಅವುಗಳ ಸುತ್ತ ಗ್ರಾಮಸ್ಥರು ಹೆಣೆಯುತ್ತಿದ್ದ ಕತೆಗಳೇ ನನ್ನ ಸೃಜನಶೀಲತೆಯ ಜೀವಾಳ. ಈ ನೆಲದ ಜನಪದ ಕತೆಗಳೇ ನನಗೆ ಕತೆ ಹಾಗೂ ಕವಿತೆಯನ್ನು ಬರೆಯುವಂತೆ ಪ್ರೇರೇಪಿಸಿದವು' ಎಂದು ತಿಳಿಸಿದರು.ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, `ಗಂಭೀರ ಚಿಂತನೆಗಳಿಗೆ ಹೆಸರಾದ ಎಡಪಂಥೀಯರು, ಧರ್ಮವೇ ದೊಡ್ಡದೆಂದು ವಾದಿಸುವ ಬಲಪಂಥೀಯರು ಆತ್ಮರತಿಯಲ್ಲಿ ತೊಡಗಿಕೊಂಡಿದ್ದು, ಇಂತಹ ವಿಚಾರಗಳನ್ನು ಒಳಗೊಂಡು ಪ್ರಸ್ತುತ ವಿದ್ಯಮಾನಗಳನ್ನು ಸಂಕೋಚವಿಲ್ಲದೇ ದಿಟ್ಟವಾಗಿ ಹೇಳುವುದೇ ಸೃಜನಶೀಲ ಸಾಹಿತ್ಯ' ಎಂದು ಅಭಿಪ್ರಾಯಪಟ್ಟರು.`ಮತಧರ್ಮಗಳು ತಮ್ಮ ಕಾಲದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರಬೇಕು. ಸಾಹಿತ್ಯ ಎಂದಿಗೂ ರಾಮಾಯಣ ಮತ್ತು ಮಹಾಭಾರತದಂತೆ ಮನುಷ್ಯ ಮಿತಿಯನ್ನು ತಿಳಿಸುವ ಪ್ರಯತ್ನವನ್ನು ಮಾಡಬೇಕು. ಆಗ ಮಾತ್ರ ಅದು ಲೇಖಕನ ಸೃಜನಶೀಲತೆಗೆ ಸಾರ್ವಕಾಲಿಕ ಗುಣವನ್ನು ತಂದುಕೊಡುತ್ತದೆ' ಎಂದು ತಿಳಿಸಿದರು.ಚಲನಚಿತ್ರ ವಿಮರ್ಶಕ ಮನು ಚಕ್ರವರ್ತಿ, ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry