ಮಂಗಳವಾರ, ಮೇ 18, 2021
29 °C

ಸಾರಾಪುರ ಕೆರೆಗೆ ಭರ್ತಿ ಮಹಾಪೂರ

ಪ್ರಜಾವಾಣಿ ವಾರ್ತೆ /ಎನ್.ಪಿ.ಕೊಣ್ಣೂರ Updated:

ಅಕ್ಷರ ಗಾತ್ರ : | |

ಹುಕ್ಕೇರಿ:  ಅಳಿದು ಉಳಿದ ಕೆರೆಗಳನ್ನು ಕಾಪಾಡಿಕೊಂಡು ಹೋಗುವದೇ ದೊಡ್ಡ ಸವಾಲವಾಗಿದೆ. ಎಂಥ ಮಳೆ ಗಾಲದಲ್ಲಿಯೂ ತುಂಬದ ಕೆರೆ ಇಂದು ತುಂಬಿ ಹರಿದು ನೋಡುಗರ ಕಣ್ಮನ ಸೆಳೆಯುತ್ತಿದೆ. ಜೊತೆಗೆ ಗ್ರಾಮದ ರೈತರ ಭೂಮಿಗೂ ಹಸರಿನ ವಾತಾವರಣ ಉಂಟುಮಾಡಿದೆ. ಅದುವೇ ತಾಲ್ಲೂಕಿನ ಸಾರಾಪೂರ ಕೆರೆ. ಗ್ರಾಮದ ರೈತಾಪಿ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ದಶಕದ ಹಿಂದೆ ನಿರ್ಮಿಸಿರುವ ಈ ಕೆರೆ ಮಳೆಗಾಲದಲ್ಲಿ ಅಲ್ಪ-ಸ್ವಲ್ಪ ನೀರು ಸಂಗ್ರಹವಾಗಿ ಕೆಲವೇ ದಿನಗಳಲ್ಲಿ ನೀರು ಮಾಯವಾಗಿ ಮತ್ತೆ ಬರಿದಾಗುತ್ತಿತ್ತು.ಇದರಿಂದ ಅಲ್ಲಿಯ ರೈತ ಜನರಿಗೆ ನಿರಾಶೆಯು ಉಂಟಾಗಿತ್ತು. ಆದರೆ  ಸಾರಾಪೂರ ಗ್ರಾಮದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಕೋಟಬಾಗಿ ಏತ ನೀರಾವರಿ ಯೋಜನೆಯ ಕಾಲುವೆಯಿಂದ ಬಿಡಲಾಗುತ್ತಿರುವ  ನೀರು ಸಾರಾಪೂರ ಕೆರೆಗೆ ಬಂದು ಸಂಗ್ರಹವಾಗುತ್ತಿರುವುದರಿಂದ ಕಳೆದ ಎರಡು ವರ್ಷಗಳಿಂದ ಬರಿದಾಗದ  ಕೆರೆ ಇಂದು ನೀರಿನಿಂದ ಕಂಗೊಳಿಸುತ್ತಿದೆ.ರೈತರ ಮೊಗದಲ್ಲಿ ಸಂತೋಷದ ತೃಪ್ತಿಯ ಚಿಲುಮೆ ಕಂಡುಬರುತ್ತಿದ್ದು, ಈಗ ಕೆರೆಯಲ್ಲಿ  ಸಂಗ್ರಹವಾದ ನೀರಿನಿಂದ ಅಲ್ಲಿನ ಜನರಿಗೆ ತುಂಬಾ ಅನೂಕೂಲವಾಗಿದೆ.ಗ್ರಾಮದ ಪಕ್ಕದಲ್ಲಿರುವ ಈ  ಕೆರೆಯ ನೀರನ್ನು ಜನರು ತಮ್ಮ ದನ- ಕರುಗಳಿಗೆ ಕುಡಿಯಲು, ಮಹಿಳೆಯರು ಬಟ್ಟೆ ತೊಳೆಯಲು ಹಾಗೂ ರೈತರು ತಮ್ಮ ಗದ್ದೆಗಳಿಗೆ ಪೂರೈಕೆ ಮಾಡಿ ಕೊಳ್ಳುತ್ತಿದ್ದಾರೆ. ಇದರಿಂದ  ರೈತರಿಗೆ ಹಾಗೂ ಅಲ್ಲಿನ ನಿವಾಸಿಗಳಿಗೆ  ನೀರಿನ ತೊಂದರೆ ನೀಗಿದಂತಾಗಿದೆ. ಈ ಕೆರೆಯ ನೀರಿನಿಂದ ಅಂತರಜಲ ಮಟ್ಟ ಹೆಚ್ಚಾಗಿ ಸುತ್ತಮುತ್ತಲಿನ ರೈತರ ಬಾವಿಗಳು, ಕೊಳವೆ ಬಾವಿಗಳಿಗೆ ಅನುಕೂಲವಾಗಿದೆ. ಕೇವಲ ಒಂದು ಕೆರೆಯಿಂದ ರೈತರಿಗೆ ಇಷ್ಟು ಅನುಕೂಲ ವಾದರೆ ತಾಲ್ಲೂಕಿನ ಜನರು ಕನಸು ಕಟ್ಟಿಕೊಂಡಿರುವ ಕೆರೆಗಳ ನೀರು ತುಂಬಿಸುವ ಯೋಜನೆ ಪ್ರಾರಂಭವಾ ದರೆ ಇನ್ನಷ್ಟೂ ಅನುಕೂಲ ಎಂಬುದು ಜನರ ಲೆಕ್ಕಾಚಾರ.ಇಚ್ಛಾಶಕ್ತಿ ಬೇಕು: ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಅವರು ಕ್ಷೇತ್ರದ ಬೆಳವಿ, ಶೇಲಾಪುರ, ರಾಶಿಂಗ, ಬೈರಾಪುರ ಕಮತನೂರ, ಯಾದಗೂಡ, ಎಲಿಮುನ್ನೋಲಿ, ಹಣಜ್ಯಾನಟ್ಟಿ, ಅಮ್ಮಣಗಿ, ಕಣಗಲಾ ಸೇರಿದಂತೆ 22 ಕೆರೆಗಳಿಗೆ  ನದಿಯಿಂದ ನೀರು ತುಂಬಿಸುವ ಯೋಜನೆಗೆ ರೂ.49 ಕೋಟಿ ಮಂಜೂರಾತಿ ಪಡೆದುಕೊಂಡಿರುವ   ಕಾಮಗಾರಿಗೆ ವಿಳಂಬಮಾಡದೆ ಶೀಘ್ರವಾಗಿ ಕಾರ್ಯ ಪ್ರಾರಂಭಿಸಿದರೆ ರೈತರಿಗೆ, ಜನರಿಗೆ ಅನುಕೂಲ ಆಗುವುದು. ಬರುವ ಹಿಂಗಾರು ಹಂಗಾಮಿನೊಳಗೆ ಕನಿಷ್ಟ ಪಕ್ಷ ಅರ್ಧ ಕಾಮಗಾರಿ ಮುಗಿದರೂ ಬರುವ ಬೇಸಿಗೆಯೊಳಗಾಗಿ ನೀರು ಕೆರೆಗೆ ತುಂಬಿಸಬಹುದು.ಒಂದು ವೇಳೆ ಕಾಮಗಾರಿ ನೆನೆಗುದಿಗೆ ಬಿದ್ದರೆ ರೈತರ ಕನಸು ನನಸಾಗದು. ಶಾಸಕ ಉಮೇಶ ಕತ್ತಿ ಹಾಗೂ ಸಂಸದ ರಮೇಶ ಕತ್ತಿ ಮನಸ್ಸು ಮಾಡಿದರೆ 2014ರ ಒಳಗಾಗಿ ನೀರು ತುಂಬಿಸಬಹುದು ಎಂಬ ಲೆಕ್ಕಾಚಾರ ಗಳು ತಾಲ್ಲೂಕಿನಾದ್ಯಾಂತ ಗರಿಗೆದರಿವೆ. ರೈತರು ಭರವಸೆಗಳನ್ನು ಹುಸಿಮಾಡದೆ, ಕೆರೆಗಳಿಗೆ ನೀರು ಪೂರೈಕೆ ಮಾಡಿದಲ್ಲಿ ಅಲ್ಲಿಯ ರೈತರು ಕೂಡಾ ನೆಮ್ಮದಿ ಬದುಕು ನಡೆಸಬಹುದಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.