ಭಾನುವಾರ, ಮೇ 22, 2022
26 °C

ಸಾರಾಯಿ ನಿಷೇಧ: ಮದ್ಯ ಮಾರಾಟ 215 ಪಟ್ಟು ಹೆಚ್ಚಳ!

ಪ್ರಜಾವಾಣಿ ವಾರ್ತೆ/ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಜ್ಯದಲ್ಲಿ ಮದ್ಯ ಮಾರಾಟವು 2007 ಜುಲೈ ತಿಂಗಳಲ್ಲಿ ನಿಷೇಧಗೊಂಡಿದೆ. ಆ ಬಳಿಕ ಜಿಲ್ಲೆಯ ಮದ್ಯ ಮಾರಾಟದಲ್ಲಿ 215 ಪಟ್ಟು ಹೆಚ್ಚಳವಾಗಿದೆ. ಸರ್ಕಾರದ ಆದಾಯವೂ ಸುಮಾರು 20 ಪಟ್ಟು ವೃದ್ಧಿಗೊಂಡಿದೆ. ಆಗ ಸ್ವದೇಶಿ ಮದ್ಯ ಮಾರಾಟವು ವಾರ್ಷಿಕ 7,082 ಲೀಟರ್                 (2007-08) ಇತ್ತು. ಅದು ಈಗ 15,24,077 ಲೀಟರ್‌ಗೆ (2012-          13) ಏರಿದೆ. ಕೇವಲ ಐದು ವರ್ಷಗಳಲ್ಲಿ 215 ಪಟ್ಟು ಅಧಿಕಗೊಂಡಿದೆ. ಆದರೆ ಜಿಲ್ಲೆಯ ಜನಸಂಖ್ಯೆ ಕಳೆದ 10 ವರ್ಷಗಳಲ್ಲಿ ಹೆಚ್ಚಿರುವುದು ಶೇ 18.01 ಮಾತ್ರ. ಅಂದು ಜಿಲ್ಲೆಯಲ್ಲಿ ವಾರ್ಷಿಕ ಸಾರಾಯಿ ಮಾರಾಟವು 1,331ಲೀಟರ್(2007-08) ಇತ್ತು.ಮದ್ಯದ ಜೊತೆ ಸರ್ಕಾರದ ಆದಾಯವೂ ಹೆಚ್ಚಿದೆ. ಅಂದು ಸುಮಾರು 5 ಕೋಟಿ ರೂಪಾಯಿ ವಾರ್ಷಿಕ ಬಾಡಿಗೆ ಬರುತ್ತಿದ್ದರೆ, ಈಗ ಆದಾಯ 105 ಕೋಟಿ ರೂಪಾಯಿ ದಾಟಿದೆ. ಇನ್ನೊಂದೆಡೆ ಕಳ್ಳಬಟ್ಟಿ ದಂಧೆಯೂ               ತಲೆ ಎತ್ತಿದೆ. ಹಿಂದೆ ಪ್ರತಿ ತಾಲ್ಲೂಕಿನ ಸಾರಾಯಿ ಮಾರಾಟದ ಗುತ್ತಿಗೆಯನ್ನು ಒಬ್ಬರು ಪಡೆಯುತ್ತಿದ್ದರು. ಜಿಲ್ಲೆಯ ಒಟ್ಟು 873 ಜನವಸತಿ ಗ್ರಾಮಗಳು ಹಾಗೂ 10 ನಗರ ಪ್ರದೇಶಗಳು ಸೇರಿದಂತೆ ಬಹುತೇಕ ಕಡೆ `ಶೇಂದಿ ಅಂಗಡಿ' ಹಾಕಿ ಮಾರುತ್ತಿದ್ದರು. ಉಳಿದಂತೆ ನಗರ ಪ್ರದೇಶದಲ್ಲಿ ಬೆರಳೆಣಿಕೆಯ ಸ್ವದೇಶಿ ಮದ್ಯ ಮಾರಾಟದ ಅಂಗಡಿಗಳು ಇದ್ದವು.ಈಗ 128 ಚಿಲ್ಲರೆ ಮದ್ಯ ಮಾರಾಟ (ವೈನ್‌ಶಾಪ್), 50 ಬಾರ್‌ಗಳು, 25 ಮದ್ಯ ಹೊಂದಿದ ಹೋಟೆಲ್, 2 ಕ್ಲಬ್‌ಗಳು ಹಾಗೂ ಇತರ ಸೇರಿದಂತೆ ಅಧಿಕೃತವಾಗಿ ಇರುವುದು ಕೇವಲ 223 ಮದ್ಯ ಮರಾಟದ ಮಳಿಗೆಗಳು. ಆದರೂ ಮದ್ಯ ಮಾರಾಟದ ಭರಾಟೆ ಜೋರು.

ಬೇಸಿಗೆ ಬಿಯರ್: ಬೇಸಿಗೆ ಬಂದರೆ ಬಿಯರ್‌ಗೂ ಇಲ್ಲಿ ಭಾರಿ ಬೇಡಿಕೆ. ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ 13,385 ಲೀಟರ್ ಇತರ ಮದ್ಯ ಮಾರಾಟವಾದರೆ, ಕೇವಲ ಬಿಯರ್ 1,20,063 ಲೀಟರ್ ಬಿಕರಿಯಾಗಿದೆ. ಇದು ರಾಜ್ಯದಲ್ಲೇ ಶೇಕಡಾವಾರು ಗರಿಷ್ಠ ಮಾರಾಟ ಎನ್ನಲಾಗಿದೆ. ಜಿಲ್ಲೆಯಲ್ಲಿ ಬಿಯರ್ ಬಿಟ್ಟರೆ ವಿಸ್ಕಿ (ಮೇ -1,24,159 ಲೀ) ಕುಡಿಯುವರು ಅಧಿಕ. `ಹಣ್ಣಿನ ಪೇಯ' ಎಂದೇ ಖ್ಯಾತವಾದ ವೈನ್ (ಮೇ-618 ಲೀ.) ಕುಡಿಯುವವರು ವಿರಳ.ಮಾರಾಟ ವ್ಯವಸ್ಥೆ:  ಹಿಂದೆ ಗ್ರಾಮೀಣ ಭಾಗದಲ್ಲಿ ವಿಕೇಂದ್ರೀಕರಣ ಹೊಂದಿದ ಕಡಿಮೆ ದರದ ಸಾರಾಯಿ ಮಾರಾಟ ವ್ಯವಸ್ಥೆ ಇತ್ತು. ಈಗ ನಗರ ಕೇಂದ್ರೀಕೃತ ಮದ್ಯ ಮಾರಾಟ ವ್ಯವಸ್ಥೆ ಇದೆ. ಇದು ದುಬಾರಿ. ಇನ್ನೊಂದೆಡೆ ಗ್ರಾಮೀಣ ಭಾಗದಿಂದ ನಗರಕ್ಕೆ ಬರಲು ಸಂಚಾರ ವೆಚ್ಚ ತಗಲುವ ಕಾರಣ ಅನಧಿಕೃತ ಮಾರಾಟದ ಅಂಗಡಿಗಳು, ಕಳ್ಳಬಟ್ಟಿ ಸಾರಾಯಿ ಮತ್ತಿತರ ಅಡ್ಡದಾರಿಗಳು ಹೆಚ್ಚುತ್ತಿವೆ ಎಂದು ಹಿಂದೆ ಸಾರಾಯಿ ಮಾರಾಟ ಮಾಡುತ್ತಿದ್ದವರು ಆರೋಪಿಸುತ್ತಾರೆ.  ಸಿಬ್ಬಂದಿ ಕೊರತೆ: ಸಾರಾಯಿ ನಿಷೇಧದ ಬಳಿಕ ಹೆಚ್ಚಿದ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟವನ್ನು ತಡೆಯಬೇಕಾದ ಜವಾಬ್ದಾರಿ ಅಬಕಾರಿ ಇಲಾಖೆಯ ಮೇಲಿದೆ. ಆದರೆ ಜಿಲ್ಲೆಯ150 ಹುದ್ದೆಗಳ ಪೈಕಿ 50 ಖಾಲಿ ಇವೆ. ಹೊಸ ನೇಮಕಾತಿ ನಡೆದಿಲ್ಲ.

ಇನ್ನೊಂದೆಡೆ 2005ರ ಬಳಿಕದ ಅತ್ಯಾಧುನಿಕ ವಾಹನಗಳನ್ನು ಇಲಾಖೆಗೆ ನೀಡಿಲ್ಲ.ಮದ್ಯ ದಂಧೆ ವಿರುದ್ಧ ಹೋರಾಡಲು ಜೀವರಕ್ಷಕ ಶಸ್ತ್ರಾಸ್ತಗಳೂ ಇಲ್ಲ. ಕಳೆದ ಐದು ವರ್ಷಗಳ ಬೆಳವಣಿಗೆ ಬಗ್ಗೆ ಸಿಬ್ಬಂದಿಗೆ ಸಮರ್ಪಕ ತರಬೇತಿಯೂ ಇಲ್ಲ. ಇದರಿಂದ ದುರ್ಗಮ ಪ್ರದೇಶದ ತಾಂಡಾ, ಗ್ರಾಮಗಳಿಗೆ  ಇಲಾಖೆ ಅಧಿಕಾರಿಗಳು ತಲುಪುವ ಮೊದಲೇ ಆರೋಪಿಗಳು ತಪ್ಪಿಸಿಕೊಳ್ಳುತ್ತಾರೆ.ಹೀಗಾಗಿ ಅಧಿಕೃತವಾಗಿಯೇ 116 ಆರೋಪಿಗಳು (ಮೇ 2013) ತಲೆಮರೆಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಮಹಿಳಾ ಸಂಘಟನೆಗಳು ಅಕ್ರಮ ಸಾರಾಯಿ ಕೇಂದ್ರ ಸ್ಥಗಿತಗೊಳಿಸಿ ಎಂದು ಸರ್ಕಾರಕ್ಕೆ ಮೊರೆಯಿಡುತ್ತಲೇ ಇವೆ.

`ಅಕ್ರಮ ಮದ್ಯ ತಡೆಗೆ  ನಿರಂತರ ಕ್ರಮ'

`ಆಂಧ್ರಪ್ರದೇಶದಲ್ಲಿ ಶೇಂದಿ ಮಾರಾಟವಿದೆ. ಇದರಿಂದ ಚಿಂಚೋಳಿ ಮತ್ತು ಸೇಡಂ ಜನತೆ ಅಲ್ಲಿಗೆ ಹೋಗಿ ಕುಡಿದು ಬರುತ್ತಾರೆ. ಅಲ್ಲದೇ ಸಿಎಚ್-4 ರಾಸಾಯನಿಕ ಬಳಸಿ ನಕಲಿ ಸಾರಾಯಿ ತಯಾರಿಸುವ ಜಾಲವೂ ಹೆಚ್ಚಿದೆ. ನಕಲಿ ಸಾರಾಯಿ ತಯಾರಿಕೆಯ 76 ಜನವಸತಿ ಪ್ರದೇಶಗಳನ್ನು ಗುರುತಿಸಿ, ನಿಯಂತ್ರಿಸಿದ್ದೇವೆ. ಆದರೆ ಚಿತ್ತಾಪುರ ತಾಲ್ಲೂಕಿನ ಶಹಾಬಾದ್ ಇನ್ನೂ ನಮಗೆ  ಸವಾಲಾಗಿದೆ'

-ಎಫ್.ಎಚ್.ಚಲವಾದಿ, ಉಪ ಆಯುಕ್ತ, ಅಬಕಾರಿ ಇಲಾಖೆ.

ಅಕ್ರಮ ಮದ್ಯ, ಗಾಂಜಾ: ದೂರು ಕೊಡಿ

ಅಕ್ರಮ ಮದ್ಯದ ತಯಾರಿಕೆ ಅಥವಾ ಸಾಗಾಟ ಹಾಗೂ ಗಾಂಜಾ ಮತ್ತಿತರ ಅಬಕಾರಿ ಪ್ರಕರಣಗಳು ಇದ್ದಲ್ಲಿ ಸಾರ್ವಜನಿಕರು ನೇರವಾಗಿ (24್ಡ7) ಸಹಾಯ ಕೇಂದ್ರ (ದೂ:08472-278682) ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.