ಗುರುವಾರ , ಮೇ 13, 2021
17 °C

ಸಾರಾಯಿ ಮಾರಾಟ: ಗ್ರಾಮಸ್ಥರಿಂದ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ:  ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಗ್ರಾಮದ ಮಹಿಳೆಯರು, ಯುವಕರು ಹಿಡಿದು 43 ಸಾವಿರ ರೂ. ದಂಡ ಹಾಕಿದ ಘಟನೆ ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ  ನಡೆದಿದೆ.ಕಳೆದ ಸೋಮವಾರ ಗ್ರಾಮದ ಮಹಿಳೆಯರು ಹಾಗೂ ಯುವಕರು ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾಡುವುದರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದರಲ್ಲದೆ ಯಾವುದೇ ವ್ಯಕ್ತಿ ಸಾರಾಯಿ ಮಾರಾಟ ಮಾಡಿದರೆ 10 ಸಾವಿರ ರೂ. ದಂಡ ವಿಧಿಸುವುದಾಗಿ ಪ್ರಕಟಿಸಿದ್ದರು.ಆದರೂ ಕೂಡಾ ಗ್ರಾಮದ ಕೆಲ ವ್ಯಾಪಾರಸ್ಥರು ತಮ್ಮ ಕಿರಾಣಿ ಹಾಗೂ ಪಾನ್‌ಶಾಪ್‌ಗಳಲ್ಲಿ ಕದ್ದು ಮುಚ್ಚಿ ಸಾರಾಯಿ ಮಾರಾಟ ಮುಂದುವರಿಸಿದ್ದರು. ಈ ವಿಷಯ ಗ್ರಾಮದ ಯುವಕರಿಗೆ ಹಾಗೂ ಮಹಿಳೆಯರಿಗೆ ಗೊತ್ತಾಗುತ್ತಿದ್ದಂತೆಯೇ ಗುರುವಾರ ರಾತ್ರಿ ಮಾರಾಟಗಾರರ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ವಿವಿಧ ಕಂಪೆನಿಗಳ ಸುಮಾರು 60ಕ್ಕೂ ಹೆಚ್ಚು ಸಾರಾಯಿ ಬಾಟಲ್‌ಗಳನ್ನು ವಶಪಡಿಸಿಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಮಹಿಳೆಯರು ಹಾಗೂ ಗ್ರಾಮದ ಹಿರಿಯ ಸಭೆ ಸೇರಿ ಮೊದಲೇ ನಿರ್ಧರಿಸಿದಂತೆ ನಾಲ್ಕು ಜನ ಮಾರಾಟಗಾರರಿಗೆ 10 ಸಾವಿರ ರೂ.ದಂಡ, ಸಂಶಯಾಸ್ಪದ ವ್ಯಕ್ತಿಗೆ 2500 ರೂ. ಹಾಗೂ ವಾಹನದಲ್ಲಿ ಸಾರಾಯಿ ಬಾಟಲ್ ತಂದ ಚಾಲಕನಿಗೆ 500 ರೂ ದಂಡ ವಿಧಿಸಿದರು.ಇನ್ನು ಮುಂದೆ ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡುವುದಿಲ್ಲ ಎಂದು ಮಾರಾಟಗಾರರಿಂದ ಪ್ರಮಾಣ ಮಾಡಿಸಿ, ಗ್ರಾಮಸ್ಥರ ಮಾತು ಮೀರಿ ಸಾರಾಯಿ ಮಾರಾಟ ಮಾಡಿರುವುದಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳಿಸಲಾಯಿತು.ಸಾರಾಯಿ ಮಾರಾಟಗಾರರಿಂದ ವಸೂಲಿ ಮಾಡಿದ ದಂಡವನ್ನು ಶನಿವಾರ 12 ಗಂಟೆಗಯೊಳಗೆ ಗ್ರಾಮದ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಇಡಲು ಸಭೆಯಲ್ಲಿ ನಿರ್ಧರಿಸಲಾಯಿತು.ಸಭೆಯಲ್ಲಿ ತಾ.ಪಂ. ಮಾಜಿ ಸದಸ್ಯ ಅಶೋಕ ಹರಣಗೇರಿ, ಹನುಮಂತಪ್ಪ ಅಂಗರಗಟ್ಟಿ, ಹೊನ್ನಪ್ಪ ಯಲಿಗಾರ, ಚನ್ನವೀರಪ್ಪ ಅಕ್ಕಿ ಅಲ್ಲದೇ ಗ್ರಾಮದ ಸ್ನೇಹಸದನ ಯುವಕ ಮಂಡಳದ ಸದಸ್ಯರು, ಮಹಿಳೆಯರು  ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.