ಮಂಗಳವಾರ, ಆಗಸ್ಟ್ 16, 2022
29 °C

ಸಾರಿಗೆ ಅದಾಲತ್‌: ಸಮಸ್ಯೆಗಳ ಸುರಿಮಳೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದಲ್ಲಿ ಕ್ರೂಸರ್‌ಗಳು ಮತ್ತು ನಗರ ಸಾರಿಗೆ ಬಸ್‌ಗಳ ಓಡಾಟಕ್ಕೆ ಸಾರಿಗೆ ನಿಯಮಗಳನ್ನು ಅನ್ವಯಿಸುವುದಿಲ್ಲ. ಆದರೆ ಆಟೊಗಳಿಗೆ ಮಾತ್ರ ಕಾಯ್ದೆ ಅನ್ವಯಿಸಿ ತೊಂದರೆ ಕೊಡವುದನ್ನು ತಪ್ಪಿಸಬೇಕು ಎನ್ನುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಸಾರಿಗೆ ಅದಾಲತ್‌ನಲ್ಲಿ ಕೇಳಿ, ಪರಿಹಾರ ಒದಗಿಸುವಂತೆ ಕೋರಿದರು.ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಪ್ರಾದೇಶಿಕ ಸಾರಿಗೆ ವಿಭಾಗೀಯ ಕಚೇರಿಯ ಉಪಆಯುಕ್ತ ಶಿವರಾಜ್‌ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಾರಿಗೆ ಅದಾಲತ್‌ ನಡೆಯಿತು. ರಸ್ತೆ ವಿಸ್ತರಣೆಯಾದ ಕಡೆ ಆಟೊ  ನಿಲ್ದಾಣ ಕ್ಕಾಗಿ ಪ್ರತ್ಯೇಕ ಜಾಗ ತೋರಿಸಿಲ್ಲ. ಯಾವುದೇ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ.ಬೀದಿ ದೀಪಗವಿಲ್ಲದ ರಸ್ತೆಗಳಲ್ಲಿ ನಿರ್ಮಿಸಿರುವ ರಸ್ತೆ ವಿಭಜಕಗಳಿಂದ ಅಪಘಾತಗಳು ನಡೆಯುತ್ತಿವೆ. ಅವುಗಳಿಗೆ ರೆಡಿಯಂ ಅಂಟಿಸಬೇಕು. ಈಚೆಗೆ ಕ್ರೂಸರ್‌ ವಾಹನಗಳು ರೈಲ್ವೆ ನಿಲ್ದಾಣದಿಂದಲೇ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಪ್ರತಿದಿನ ಟಂಟಂಗಳಲ್ಲಿ ಅತೀ ಭಾರವಾದ ಸರಕುಗಳ ಸಾಗಾಟವಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಟೊ ಚಾಲಕರ ಒಕ್ಕೂಟದ ಪ್ರತಿನಿಧಿ ದೂರಿದರು.ಲಾರಿ ಟ್ರಾನ್ಸ್‌ಪೋರ್ಟ್‌ ಏಜೆನ್ಸಿ ಎಂದು ನೋಂದಾಯಿಸಿಕೊಳ್ಳದೆ ಸರಕು ಸಾಗಣೆ ಗುತ್ತಿಗೆ ಪಡೆದು ಅನೇಕ ಲಾರಿಗಳು ಕಾರ್ಯನಿರ್ವಹಿ ಸುತ್ತಿವೆ. ಇದರಿಂದ ಒಂದೇ ಲಾರಿ ಇಟ್ಟುಕೊಂ ಡಿರುವ ಮಾಲೀಕರು ಏನು ಮಾಡಬೇಕು. ಗುಲ್ಬರ್ಗದಲ್ಲಿ ಲಾರಿ ಟ್ರಾನ್ಸ್‌ಪೋರ್ಟ್‌ ಏಜೆನ್ಸಿಗೆ ಅನುಮತಿ ನೀಡಬೇಕು. ನೋಂದಾಯಿಸಿಕೊಳ್ಳದೆ ಸರಕು ಸಾಗಿಸುವ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಲಾರಿ ಚಾಲಕರ ಸಂಘದ ಪ್ರತಿನಿಧಿ ಒತ್ತಾಯಿಸಿದರು.ಬೈಕ್‌, ಕಾರು ಮಾರಾಟದ ಶೋ ರೂಮ್‌ ಗಳಲ್ಲಿ ರಸ್ತೆ ತೆರಿಗೆ ಪಡೆಯುವುದರ ಜತೆ ಆರ್‌ಟಿಒ ಹ್ಯಾಂಡ್ಲಿಂಗ್‌ ಚಾರ್ಜ್‌ ಎಂದು ವಸೂಲಿ ಮಾಡಲಾಗುತ್ತಿದೆ. ಇದು ನಿಯಮ ಬಾಹಿರವಾಗಿದ್ದರೆ, ಕೂಡಲೇ ಶೋ ರೂಮ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಕೋರಿದರು.ಆಟೊ  ಖರೀದಿಯಾದ 18 ವರ್ಷದ ಬಳಿಕ ಬದಲಾಯಿಸಬೇಕು ಎನ್ನುವ ನಿಯಮವಿದೆ. ಹಳೆ ಆಟೊ ಬಿಟ್ಟು, ಹೊಸ ಆಟೊ ಖರೀದಿಸುವುದಕ್ಕೆ ಯಾವುದೇ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಸಾಲ ನೀಡುವುದಕ್ಕೆ ಏನಾದರೂ ವ್ಯವಸ್ಥೆ ಮಾಡಬೇಕು. ಗುಲ್ಬರ್ಗದಲ್ಲಿ ಈಚೆಗೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯು ಹೊಸ ಆಟೊಗಳಿಗೆ ಅನುಮತಿ ನೀಡುತ್ತಿಲ್ಲ. ಆದರೆ ನಗರ ಸಾರಿಗೆ ಬಸ್‌ಗಳಿಗೆ ಏಕೆ ಅನುಮತಿ ನೀಡಲಾಗುತ್ತಿದೆ.ಆಟೊದಲ್ಲಿ ನಾಲ್ಕು ಪ್ರಯಾಣಿಕರಿದ್ದರೆ ದಂಡ ವಿಧಿಸಲಾಗುತ್ತದೆ. ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರು ಜೋತುಬಿದ್ದು ಪ್ರಯಾಣಿಸಿದರೂ ಕ್ರಮ ಕೈಗೊ ಳ್ಳುವುದಿಲ್ಲ. ಜನರಿಗೊಂದು ನಿಯಮ, ಸರ್ಕಾರಿ ಇಲಾಖೆಗೆ ಪ್ರತ್ಯೇಕ ನಿಯಮ ಅನುಸರಿಸುತ್ತಿರು ವುದೇಕೆ? ಶಾಲಾ ಮಕ್ಕಳು ಖಾಸಗಿ ವಾಹನಗಳಲ್ಲಿ ಶಾಲೆಗೆ ಹೋಗುತ್ತಿದ್ದು, ಕಡ್ಡಾಯವಾಗಿ ಶಾಲಾ ವಾಹನದಲ್ಲಿ ಪ್ರಯಾಣಿಸುವಂತೆ ಸೂಚಿಸಬೇಕು ಎಂದು ಅನೇಕರು ಪ್ರಶ್ನೆಗಳ ಮಳೆ ಸುರಿಸಿದರು.ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾ ಡಿದ ಉಪ ಆಯುಕ್ತರು, ಕ್ರೂಸರ್‌ಗಳು ಗುಲ್ಬರ್ಗ ರಿಂಗ್‌ ರಸ್ತೆಯಿಂದ ಒಳಗೆ ಓಡಾಡಬಾರದು ಎಂದು ಸೂಚಿಸಲಾಗಿತ್ತು. ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ಆಟೊ ನಿಲ್ದಾಣದ ಬಳಿ ಕ್ರೂಸರ್‌ ನಿಲ್ಲಿಸುವುದು ಕಾನೂನುಬಾಹಿರ. ನಿಯಮ ಉಲ್ಲಂಘಿಸುತ್ತಿರುವ ಕ್ರೂಸರ್‌ಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗುಲ್ಬರ್ಗ ಪ್ರಭಾರ ಪ್ರಾದೇಶಿಕ ಸಾರಿಗೆ ಆಯುಕ್ತ ಖಾದರ್‌ ಪಾಷಾ ಅವರಿಗೆ ಸೂಚಿಸಿದರು.ನಿಯಮ ಬಾಹಿರವಾಗಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿರುವ ಖಾಸಗಿ ವಾಹನಗಳನ್ನೆಲ್ಲ ವಶಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ವಾರದೊಳಗೆ ಆರಂಭಿಸಲಾಗುವುದು. ಆಟೊ ಚಾಲಕರಿಗೆ ಬೇಕಾಗುವ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಂತೆ ಮಹಾನಗರ ಪಾಲಿಕೆ, ಗುಲ್ಬರ್ಗ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗು ವುದು ಎಂದ ಅವರು, ಆರ್‌ಟಿಒ ಕಚೇರಿಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಕಷ್ಟವಾಗಿತ್ತು. ಆಟೊ ಒಕ್ಕೂಟ ಶೌಚಾಲಯ ನಿರ್ವಹಣೆಗೆ ಮುಂದೆ ಬಂದಿರುವುದು ಸಂತೋಷದ ವಿಷಯ ಎಂದರು.ಅದಾಲತ್‌ನಲ್ಲಿ ಜನರು ತಿಳಿಸಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಮೂಲಕ ಮಾಡಲಾಗುವುದು. ಮುಂದೆ ನಡೆ ಯುವ ಸಾರಿಗೆ ಅದಾಲತ್‌ನಲ್ಲಿ ಪಾಲಿಕೆ, ಜಿಡಿಎ ಹಾಗೂ ಪೊಲೀಸ್‌ ಇಲಾಖೆಯ ಪ್ರತಿನಿಧಿಯೊ ಬ್ಬರನ್ನು ಕಳುಹಿಸುವಂತೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರನ್ನು ಕೇಳಲಾಗುವುದು ಎಂದರು.

ಪ್ರಭಾರ ಪ್ರಾದೇಶಿಕ ಸಾರಿಗೆ ಆಯುಕ್ತ ಖಾದರ್‌ ಪಾಷಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.