ಗುರುವಾರ , ಆಗಸ್ಟ್ 6, 2020
27 °C

ಸಾರಿಗೆ ಇಲಾಖೆಯಿಂದ ಅಂಗಾಂಗ ದಾನದ ನೂತನ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾರಿಗೆ ಇಲಾಖೆಯಿಂದ ಅಂಗಾಂಗ ದಾನದ ನೂತನ ಯೋಜನೆ

ಬೆಂಗಳೂರು: ಅಂಗಾಂಗ ದಾನ ಮಾಡಲು ಬಯಸುವ ವ್ಯಕ್ತಿಯ ವಾಹನ ಚಾಲನಾ ಪರವಾನಗಿಯಲ್ಲಿ ಹಸಿರು ಬಣ್ಣದ ಹೃದಯದ ಗುರುತು ಸೇರಿಸುವ ಮೂಲಕ ಸಾರಿಗೆ ಇಲಾಖೆಯು ಅಂಗದಾನದ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಹೊರಟಿದೆ.`ಗಿಫ್ಟ್ ಯುವರ್ ಆರ್ಗನ್~ ಪ್ರತಿಷ್ಠಾನವು ರೂಪಿಸಿರುವ ಈ ನೂತನ ಯೋಜನೆಯನ್ನು ಆರೋಗ್ಯ ಮತ್ತು  ಕುಟುಂಬ ಇಲಾಖೆಯ ಸಹಕಾರದೊಂದಿಗೆ ಸಾರಿಗೆ ಇಲಾಖೆಯ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಆರ್.ಅಶೋಕ ಅವರು ನಗರದಲ್ಲಿ ಸೋಮವಾರ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, `ಪ್ರಸ್ತುತ ದಿನಗಳಲ್ಲಿ ಅಂಗಾಂಗದ ಕೊರತೆಯಿಂದ ಅನೇಕ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಈ ದಿಸೆಯಲ್ಲಿ  ನೂತನ ಅಂಗಾಂಗ ದಾನ ಯೋಜನೆ ಸಹಕಾರಿಯಾಗಲಿದೆ. ಈ ವಿಚಾರದಲ್ಲಿ ಇಲಾಖೆಯು ಆದೇಶ ಹೊರಡಿಸದೇ ಸಾಮಾನ್ಯ ಜನರಲ್ಲಿ ಅಂಗಾಂಗ ದಾನಕ್ಕೆ ಮನವಿ ಮಾಡುತ್ತದೆ~ ಎಂದು ತಿಳಿಸಿದರು.`ಅಮೆರಿಕ, ಇಂಗ್ಲೆಡ್‌ನಲ್ಲಿ ಈ ಯೋಜನೆಯು ಸಂಪೂರ್ಣ ಯಶಸ್ವಿಯಾಗಿದೆ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಮೊದಲಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆರಂಭಿಸಲಾಗುವುದು. ನಂತರ ಹಂತ ಹಂತವಾಗಿ ರಾಜ್ಯದ ಎಲ್ಲ ಭಾಗಗಳಲ್ಲೂ ಯೋಜನೆ ಜಾರಿಗೆ ಬರಲಿದೆ~ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ರಾಜ್ ಸೇಥಿಯಾ ಮತ್ತು ಪ್ರೇಮಾಲತಾ ಅವರಿಗೆ ಹಸಿರು ಬಣ್ಣದ ಹೃದಯದ ಗುರುತು ಇರುವ ಚಾಲನಾ ಪರವಾನಗಿಯನ್ನು ನೀಡಲಾಯಿತು. ಸಾರಿಗೆ ಇಲಾಖೆಯ ಕಾರ್ಯದರ್ಶಿ ಪಿ.ಬಿ.ರಾಮಮೂರ್ತಿ, ಆಯುಕ್ತ ಶ್ಯಾಮ್ ಭಟ್, `ಗಿಫ್ಟ್ ಯುವರ್ ಆರ್ಗನ್~ ಪ್ರತಿಷ್ಠಾನದ ಸ್ಥಾಪಕ ಸಮೀರ್ ದುವಾ ಇತರರು ಉಪಸ್ಥಿತರಿದ್ದರು.`ಸಡಿಲಗೊಳ್ಳಬೇಕಿರುವ ಅಂಗಾಂಗ ದಾನದ ಕಾನೂನು~


`ಅಂಗಾಂಗ ದಾನಕ್ಕೆ ಇಚ್ಚಿಸಿದವರು ಪರವಾನಗಿಯಲ್ಲಿ ಈ ಹಸಿರು ಹೃದಯದ ಗುರುತನ್ನು ಪಡೆದುಕೊಳ್ಳುತ್ತಾರೆ. ಆದರೆ ಅದರಲ್ಲಿ ಎಷ್ಟು ಮಂದಿಯ ಕುಟುಂಬವು ಈ ಅಂಗಾಂಗ ದಾನ ಪ್ರಕ್ರಿಯೆಗೆ ಸಹಕರಿಸಲಿದೆ? ಎಂಬುದು ಸದ್ಯದ ಪ್ರಶ್ನೆ. ಅಂಗಾಂಗ ದಾನಕ್ಕೆ ಸಂಬಂಧಪಟ್ಟಂತೆ ಕಾನೂನಿನಲ್ಲಿ ಹಲವು ತೊಡಕುಗಳಿದ್ದು, ಕಾನೂನನ್ನು ಸಡಿಲಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು~ ಎಂದು ಅಂಗಾಂಗ ಕಸಿ ಕುರಿತ ಕರ್ನಾಟಕ ವಲಯ ಸಮನ್ವಯ ಸಮಿತಿ ಅಧ್ಯಕ್ಷ, ನಿಮ್ಹಾನ್ಸ್ ನಿರ್ದೇಶಕ ಡಾ.ಪಿ.ಸತೀಶ್ಚಂದ್ರ ತಿಳಿಸಿದರು.`ಅಂಗಾಂಗ ದಾನದಲ್ಲಿ ದಾನಿಯ ಇಚ್ಛೆಯೇ ಅಂತಿಮ. ಮತ್ತೆ ಕುಟುಂಬದ ಅನುಮತಿಯ ಅಗತ್ಯವಿರುವುದಿಲ್ಲ ಎಂಬ ತಿದ್ದುಪಡಿಯನ್ನು ಅಂಗಾಂಗ ದಾನಕ್ಕೆ ಸಂಬಂಧಪಟ್ಟ ಕಾನೂನಿನಲ್ಲಿ ತರುವ ಅಗತ್ಯವಿದ್ದು, ಆಗ ಈ ಯೋಜನೆ ಇನ್ನಷ್ಟು ಬಲಗೊಳ್ಳಲಿದೆ~ ಎಂದು ತಿಳಿಸಿದರು.`ಪ್ರತಿ ವರ್ಷ ರಾಜ್ಯದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಮಂದಿ ಅಪಘಾತದಿಂದ ಮರಣವನ್ನು ಹೊಂದುತ್ತಿದ್ದಾರೆ. ಇವರಲ್ಲಿ ಬಹುಪಾಲು ಅಂಗಾಂಗ ದಾನಕ್ಕೆ ಮುಂದಾದರೆ, ಅಂಗಾಗ ವೈಫಲ್ಯದಿಂದ ಸಾವನ್ನಪ್ಪುವವರನ್ನು ರಕ್ಷಿಸಬಹುದು. ಈ ನಿಟ್ಟಿನಲ್ಲಿ ಇದೊಂದು ಉತ್ತಮ ಯೋಜನೆ~ ಎಂದು ಶ್ಲಾಘಿಸಿದರು.ಯಾರು ಮಾಡಬಹುದು?


ಅಂಗಾಂಗ ದಾನ ಮಾಡಲು ಇಚ್ಛಿಸುವ ವ್ಯಕ್ತಿಯು ಚಾಲನಾ ಪರವಾನಗಿ ಅರ್ಜಿಯೊಂದಿಗೆ ಅಂಗ ದಾನದ ಅರ್ಜಿಯನ್ನು ಸ್ವಯಂ ಪ್ರೇರಿತವಾಗಿ ಪಡೆಯಬಹುದು. ಎರಡು ಅರ್ಜಿಗಳನ್ನು ಭರ್ತಿ ಮಾಡಿ ಪ್ರಾದೇಶಿಕ ಸಾರಿಗೆ ಕಚೇರಿಗೆ ನೀಡಿದರೆ, ಹಸಿರು ಹೃದಯದ ಗುರುತಿರುವ  ಚಾಲನಾ ಪರವಾನಗಿ ದೊರೆಯುತ್ತಿದೆ.

 

ಈ ಗುರುತು ವ್ಯಕ್ತಿಯ ಅಂಗಾಂಗ ದಾನದ ಇಂಗಿತವನ್ನು ಸೂಚಿಸುತ್ತದೆ. ಅರ್ಜಿಯಲ್ಲಿ ಕಣ್ಣು, ಹೃದಯ, ಯಕೃತ್ತು, ಕಿಡ್ನಿ ಸೇರಿದಂತೆ ವಿವಿಧ ಅಂಗಾಂಗ ದಾನದ ಬಗ್ಗೆ ಪ್ರತ್ಯೇಕವಾಗಿ ನಮೂದಿಸಲಾಗಿರುತ್ತದೆ. ವ್ಯಕ್ತಿ ಇಚ್ಛಿಸಿದ ಅಂಗವನ್ನು ದಾನ ಮಾಡಬಹುದು.ಹೊಸದಾಗಿ ಪರವಾನಗಿ ಪಡೆಯುವವರು ಮಾತ್ರವಲ್ಲ, ನವೀಕರಣದ ಸಂದರ್ಭದಲ್ಲೂ ಅಂಗಾಂಗ ದಾನಕ್ಕೆ  ಅರ್ಜಿ ಸಲ್ಲಿಸಬಹುದು. ಗುರುತು ಇದ್ದ ಮಾತ್ರಕ್ಕೆ ವ್ಯಕ್ತಿಯ ಅಂಗಾಂಗಗಳನ್ನು ಪಡೆಯಲು ಸಾಧ್ಯವಿಲ್ಲ. ವ್ಯಕ್ತಿಯ ಮರಣದ ನಂತರ ಕುಟುಂಬದಿಂದ ಸಂಪೂರ್ಣ ಅನುಮತಿ ದೊರೆತ ನಂತರವೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

www.giftyourorgan.org  ದೂರವಾಣಿ 080-32509800

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.