ಸಾರಿಗೆ-ಏಕರೂಪ ತೆರಿಗೆ ಪದ್ಧತಿ ಬರಲಿ

7

ಸಾರಿಗೆ-ಏಕರೂಪ ತೆರಿಗೆ ಪದ್ಧತಿ ಬರಲಿ

Published:
Updated:

ಉಡುಪಿ: ಸಾರಿಗೆ ವ್ಯವಸ್ಥೆಯಲ್ಲಿ ದೇಶದಾದ್ಯಂತ ಏಕರೂಪ ತೆರಿಗೆ ಪದ್ಧತಿ ಜಾರಿಗೆ ತರಬೇಕು ಎಂದು ಪರಿಸರ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಕೃಷ್ಣ ಪಾಲೆಮಾರ್ ಆಗ್ರಹಿಸಿದರು.ಕರ್ನಾಟಕ ಬಸ್ ಮಾಲೀಕರ ಫೆಡರೇಷನ್ ಹಾಗೂ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಮೆಂಟ್ ಆಶ್ರಯದಲ್ಲಿ ಇಲ್ಲಿನ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶುಕ್ರವಾರ ಆರಂಭಗೊಂಡ ‘ಬಸ್ ಸಾರಿಗೆ ನಿರ್ವಹಣೆ-ಭವಿಷ್ಯದ ಹಾದಿ’ ಕುರಿತ ‘ಪಯಣ -2011’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.‘ರಾಜ್ಯದಲ್ಲೂ ಖಾಸಗಿ ಬಸ್‌ಗಳಿಗೆ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಿಗೆ ಪ್ರತ್ಯೇಕ ತೆರಿಗೆ ವ್ಯವಸ್ಥೆ ಇದೆ. ದೇಶದಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ರಾಜೀವ್ ಗಾಂಧಿ ಚಿಂತನೆ ನಡೆಸಿದ್ದರು. ಈ ಬಗ್ಗೆ ಮತ್ತೆ ಚರ್ಚೆ ನಡೆಯಬೇಕಿದೆ’ ಎಂದರು.‘ಸಾರಿಗೆಯನ್ನು ರಾಷ್ಟ್ರೀಕರಣ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ ಜನರಿಗೆ ಉತ್ತಮ ಸೇವೆ ದೊರಕಬೇಕು. ಕಲ್ಲಿದ್ದಲಿನಿಂದ ಬಸ್ ಓಡಿಸುವ ಕಾಲದಿಂದಲೂ ಖಾಸಗಿ ಬಸ್ ಮಾಲೀಕರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಆದರೆ ಇತ್ತೀಚೆಗೆ ಸರ್ಕಾರ ಸೇವೆಯ ಗುಣಮಟ್ಟ ಹೆಚ್ಚಿಸಿಕೊಂಡಿದೆ. ಆದರೆ ಖಾಸಗಿ ವಲಯ ಹಿಂದೆ ಬಿದ್ದಿದೆ. ಲೋಪಗಳನ್ನು ತಿದ್ದಿಕೊಂಡು ಸರ್ಕಾರಿ ಸೇವೆಯ ಜತೆ ಜತೆಗೆ ಹೆಜ್ಜೆ ಹಾಕಬೇಕು’ ಎಂದರು.ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ‘ವಿಮಾನ ಯಾನ, ರೈಲ್ವೆ ಯಾನದಂತೆ ಬಸ್‌ಗಳೂ ಆನ್‌ಲೈನ್ ಟಿಕೆಟ್ ಬುಕಿಂಗ್ ಸೇವೆ ಒದಗಿಸಬೇಕು. ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಬೇಕು. ಬಸ್ ಸಿಬ್ಬಂದಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು’ ಎಂದರು.ಸಂಸದ ಡಿ.ವಿ.ಸದಾನಂದ ಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಶಾಸಕ ಅಭಯಚಂದ್ರ ಜೈನ್, ಗೋಪಾಲ ಭಂಡಾರಿ, ಫೆಡರೇಶನ್ ಅಧ್ಯಕ್ಷ ಕೆ.ರಾಜವರ್ಮ ಬಲ್ಲಾಳ್, ಕಾರ್ಯದರ್ಶಿ ಬಾಲಶ್ಯಾಂ ಸಿಂಗ್, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಪಿ.ರಾಮಕೃಷ್ಣ ಚಡಗ, ವಿಚಾರಸಂಕಿರಣದ ಅಧ್ಯಕ್ಷ ಡಾ.ಕೆ.ವಿ.ಎಂ ವಾರಂಬಳ್ಳಿ ಮತ್ತಿತರರು ಇದ್ದರು‘ಬಸ್‌ನಿಲ್ದಾಣ ಭಿಕ್ಷುಕರ ಮನೆಗಿಂತ ಕೀಳು’

‘ಕರಾವಳಿಯ ಬಸ್‌ನಿಲ್ದಾಣಗಳು ಭಿಕ್ಷುಕರ ಮನೆಗಿಂತಲೂ ಕೀಳಾಗಿವೆ’ಹೀಗೆ ವರ್ಣಿಸಿದ್ದು ಬೇರಾರು ಅಲ್ಲ.  ಸ್ವತಃ ರಾಜ್ಯ ಸಾರಿಗೆ ಆಯುಕ್ತ ಭಾಸ್ಕರ ರಾವ್. ಬಸ್ ಮಾಲೀಕರಿಗೆ ಸಲಹೆ ಕೊಡುವ ಭರದಲ್ಲಿ ಸರ್ಕಾರದ ತಾರತಮ್ಯ ನೀತಿಯತ್ತ ಅವರು ಬಹಿರಂಗವಾಗಿಯೇ ಬೊಟ್ಟುಮಾಡಿ ತೋರಿಸಿದರು.‘ರಾಜ್ಯದಲ್ಲಿರುವ 42 ಸಾವಿರ ಬಸ್‌ಗಳ ಪೈಕಿ ಖಾಸಗಿ ಬಸ್‌ಗಳ ಪಾಲು 12 ಸಾವಿರ. ಖಾಸಗಿ ಬಸ್‌ಗಳಿಂದ 5ಲಕ್ಷ ಮಂದಿ ಉದ್ಯೋಗ ಪಡೆದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಸೇವೆಗೆ ಪೈಪೋಟಿ ನೀಡುವಲ್ಲೂ ಖಾಸಗಿ ಬಸ್ ಮಾಲೀಕರು ಹಿಂದೆ ಬಿದ್ದಿದ್ದಾರೆ. ಉದ್ಯಮ ಬೆಳೆಸುವ ಬಗ್ಗೆ ಮಾಲೀಕರು ಸಂಘಟಿತ ಚಿಂತನೆ ನಡೆಸಿಲ್ಲ. ತೆರಿಗೆ ಹೆಚ್ಚಿಸಿದ್ದಕ್ಕೆ ಪ್ರತಿಯಾಗಿ ಬಸ್‌ನಿಲ್ದಾಣಗಳ ಅಭಿವೃದ್ಧಿ, ಉತ್ತಮ ರಸ್ತೆ ಸೌಕರ್ಯ ಪಡೆಯವುದು ಬಸ್ ಮಾಲೀಕರ ಹಕ್ಕು. ಈ ಬಗ್ಗೆಯೂ ಸಮರ್ಪಕ ಲಾಬಿ ನಡೆಸಿಲ್ಲ. ಇವೆಲ್ಲವನ್ನು ಸ್ವಂತಕ್ಕಾಗಿ ಕೇಳಬೇಡಿ. ಪ್ರಯಾಣಿಕರ ಹಿತದೃಷ್ಟಿಯಿಂದಲಾದರೂ ಈ ಸವಲತ್ತಿಗಾಗಿ ಆಗ್ರಹಿಸಿ’ ಎಂದು ಅವರು ತಿಳಿಸಿದರು.‘ಶೇ 30 ಮಾಲಿನ್ಯ ಕಡಿಮೆ’

‘ರಾಜ್ಯದಲ್ಲಿ ಡಿ.22ರಂದು ಬಂದ್ ನಡೆದಾಗ ರಾಜ್ಯದಾದ್ಯಂತೆ ಯಾವುದೇ ಬಸ್‌ಗಳು ರಸ್ತೆಗಿಳಿಯಲಿಲ್ಲ. ಪರಿಸರ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ, ಅಂದು ವಾಯುಮಾಲಿನ್ಯ ಶೇ 30ರಷ್ಟು ಇಳಿಕೆಯಾಗಿತ್ತು. ಮಾಲಿನ್ಯದಲ್ಲಿ ಸರ್ಕಾರಿ ಬಸ್‌ಗಳ ಪಾತ್ರವೂ ಇದೆ. ಲಾಭದ ಜತೆ ಜನರ ಯೋಗಕ್ಷೇಮ ನೋಡಿಕೊಳ್ಳುವುದೂ ಮುಖ್ಯ. ಹಾಗಾಗಿ ಬಸ್ ಮಾಲೀಕರು ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಸಚಿವ ಕೃಷ್ಣ ಪಾಲೆಮಾರ್ ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry