ಭಾನುವಾರ, ಆಗಸ್ಟ್ 18, 2019
23 °C
ಖಾಸಗಿ ವಾಹನಗಳಿಂದ ಕಾನೂನು ಬಾಹಿರ ಸಂಚಾರ

ಸಾರಿಗೆ ಸಂಸ್ಥೆಯ ಕಾರ್ಮಿಕರಿಂದ ಪ್ರತಿಭಟನೆ

Published:
Updated:

ಬೆಳಗಾವಿ: ನಗರದಲ್ಲಿ ಆರ್.ಆರ್, ಸಾಮ್ರಾಟ್ ಹಾಗೂ ರಾಣಿ ಚನ್ನಮ್ಮ ಖಾಸಗಿ ವಾಹನಗಳು ಕಾನೂನು ಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಂಟ್ರ್ಯಾಕ್ಟ್ ಕ್ಯಾರೇಜ್ ಪರವಾನಿಗೆ ಪಡೆದುಕೊಂಡ ಆರ್.ಆರ್, ಸಾಮ್ರಾಟ್ ಹಾಗೂ ರಾಣಿ ಚನ್ನಮ್ಮ ಖಾಸಗಿ ವಾಹನಗಳು ನಿಯಮ ಉಲ್ಲಂಘನೆ ಮಾಡಿ ಸ್ಟೇಜ್ ಕ್ಯಾರೇಜ್ ಮೂಲಕ ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿಯೊಂದು ಊರಿನಲ್ಲಿ ಪ್ರಯಾಣಿಕರನ್ನು ವಾಹನದಲ್ಲಿ ಹತ್ತಿಸಿಕೊಂಡು ಟಿಕೆಟ್ ವಿತರಿಸಿ, ಕಾರ್ಯಾಚರಣೆ ಮಾಡುತ್ತಿರುವುದು ಕಾನೂನು ಉಲ್ಲಂಘನೆ ಮಾಡುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಖಾಸಗಿ ವಾಹನಗಳು ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಸಾರಿಗೆ ಸಂಸ್ಥೆಗೆ ದಿನನಿತ್ಯ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಈ ಕುರಿತು ಪರಿಶೀಲನೆ ನಡೆಸಿ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿರುವ ಆರ್.ಆರ್, ಸಾಮ್ರಾಟ್, ರಾಣಿ ಚನ್ನಮ್ಮ ಖಾಸಗಿ ವಾಹನಗಳ ಕಾರ್ಯಾಚರಣೆಯನ್ನು ತಡೆಗಟ್ಟಬೇಕು. ಕಾನೂನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಇಲ್ಲಿನ ಗಾಂಧಿ ನಗರದ ಕಿಲ್ಲಾ ಕೆರೆಯ ಎದುರಗಡೆ ಇರುವ ಕೃಷಿ ಜಮೀನಿನಲ್ಲಿ ಖಾಸಗಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಕುರಿತು ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಪಾಲಿಕೆಯ ಆಯುಕ್ತರು ಖಾಸಗಿ ಬಸ್‌ನಿಲ್ದಾಣವನ್ನು ತೆರವುಗೊಳಿಸಿರುವುದು ಸ್ವಾಗತಾರ್ಹ. ಆದರೆ, ಪಾಲಿಕೆಯ ಆಯುಕ್ತರ ಆದೇಶಕ್ಕೆ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದ್ದು, ಪುನಃ ಖಾಸಗಿ ವಾಹನಗಳ ಅಕ್ರಮ ಕಾರ್ಯಾಚರಣೆ ನಡೆಯುತ್ತಿದೆ. ಹೀಗಾಗಿ ಆದಷ್ಟು ಬೇಗ ನ್ಯಾಯಾಲಯದ ತಡೆಯಾಜ್ಞೆ ಆದೇಶವನ್ನು ತೆರವುಗೊಳಿಸಿ, ಸಾರಿಗೆ ಸಂಸ್ಥೆಯ ನೌಕರರ ಹಿತಾಸಕ್ತಿಯನ್ನು ಪರಿಗಣಿಸಿ ಅಕ್ರಮ ಖಾಸಗಿ ವಾಹನ ನಿಲ್ದಾಣ ಹಾಗೂ ಅಕ್ರಮ ಖಾಸಗಿ ವಾಹನಗಳ ಕಾರ್ಯಾಚರಣೆಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.ಕೆಎಸ್‌ಆರ್‌ಟಿಸಿ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎನ್.ಆರ್. ಕಾನಗೋ, ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಬಿಡ್ನಾಳ,  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಕಾತಿ,  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಧಿಕಾರಿಗಳ/ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿ. ರಾಜಸ್, ಎನ್. ಬಿ.ಜಹಾಜ ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Post Comments (+)