ಸಾರಿಗೆ ಸಮಸ್ಯೆ ನಿವಾರಿಸಲು ವಣಿಕ್ಯಾಳ್ ಆಗ್ರಹ

7

ಸಾರಿಗೆ ಸಮಸ್ಯೆ ನಿವಾರಿಸಲು ವಣಿಕ್ಯಾಳ್ ಆಗ್ರಹ

Published:
Updated:

ಕೆಂಭಾವಿ: ಯಾದಗಿರಿ ವಿಭಾಗದ ಸಾರಿಗೆ ಸಮಸ್ಯೆಗಳನ್ನು ನಿವಾರಿಸಲು ಉಪಮುಖ್ಯಮಂತ್ರಿಗಳಾದ ಸಾರಿಗೆ ಸಚಿವ ಆರ್. ಅಶೋಕ, ಕೂಡಲೇ ಕ್ರಮ ಕೈಗೊಳ್ಳುವಂತೆ ಬಿಎಸ್ಸಾರ್ ಕಾಂಗ್ರೆಸ್ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಶಂಕ್ರಣ್ಣ ವಣಿಕ್ಯಾಳ ಒತ್ತಾಯಿಸಿದ್ದಾರೆ.ಯಾದಗಿರಿ ವಿಭಾಗದಲ್ಲಿ 318 ಶೆಡ್ಯೂಲ್‌ಗಳಿದ್ದು, ಟಾಯರ್‌ಗಳ ಬೇಡಿಕೆ ಬಹಳಷ್ಟಿದೆ. ಈ ಭಾಗದ ರಸ್ತೆಗಳು ಸರಿ ಇಲ್ಲದೇ ಇರುವುದರಿಂದ  ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ. ಬೇಡಿಕೆಯ ಪ್ರಮಾಣದಲ್ಲಿ ಟಾಯರ್‌ಗಳ ಪೂರೈಕೆಯಾಗುತ್ತಿಲ್ಲ.

 

ಆದ್ದರಿಂದ ಟಾಯರ್ ನವೀಕರಣ ಘಟಕ ಕಾಮಗಾರಿ ತೀವ್ರವಾಗಿ ಮುಗಿಸಿ ಇಲ್ಲಿಯೇ ಟಾಯರ್‌ಗಳು ಸಿಗುವಂತೆ ಆಗಬೇಕು. ಈಗಾಗಲೇ ಇಲ್ಲಿ ನವೀಕರಣ ಘಟಕದ ಕಾಮಗಾರಿ ಕುಂಟುತ್ತಾ ಸಾಗಿದೆ. ಸಾರಿಗೆ ಸಚಿವರು ವಿಧಾನ ಪರಿಷತ್ತಿನಲ್ಲಿ ಈ ಹಿಂದೆ ಶೀಘ್ರ ಆರಂಭಿಸುವುದಾಗಿ ಹೇಳಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಕಟ್ಟಡಕ್ಕಾಗಿ 12 ಎಕರೆ ಬೆಲೆ ಬಾಳುವ ರೈತರ ಜಮೀನನ್ನು ಸರ್ಕಾರ ಖರೀದಿ ಮಾಡಿದ್ದು, ಕಟ್ಟಡ ಕಟ್ಟಲು ಸರ್ಕಾರ ಹಣ ನೀಡುತ್ತಿಲ್ಲ. ಇದರಿಂದ ಕಾರ್ಯಾಲಯ ಬೇರೆ ಕಟ್ಟಡದಲ್ಲಿ ನಡೆಯುತ್ತಿದೆ.

 

ವಿಭಾಗೀಯ ಕಾರ್ಯಾಗಾರಕ್ಕೆ ಕಾಯಂ ಸಿಬ್ಬಂದಿಗಳಳನ್ನು ನೇಮಿಸಬೇಕು. ಬಸ್ ಮತ್ತು ಕವಚ ನಿರ್ಮಾಣದ ಎಲ್ಲ ಕಾರ್ಯಗಳೂ ಇಲ್ಲಿಯೇ ನಡೆಯಬೇಕು. ಖಾಸಗಿ ಜನರ ಕಪಿಮುಷ್ಠಿಯಿಂದ ದೂರವಿಟ್ಟು ಸರ್ಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ವಿಭಾಗೀಯ ಕಾರ್ಯಾಗಾರಕ್ಕೆ ಒಟ್ಟು 150 ಸಿಬ್ಬಂದಿ ಅವಶ್ಯಕತೆ ಇದ್ದು, ಕಚೇರಿಗೆ ಕೇವಲ 4 ಜನ ಮಾತ್ರ ನೇಮಕ ಆಗಿದ್ದಾರೆ. ಉಳಿದ ಉಳಿದ ಹುದ್ದೆಗಳನ್ನ ತುಂಬಬೇಕು ಎಂದು ತಿಳಿಸಿದ್ದಾರೆ.ಈ ಭಾಗದ ನಿರುದ್ಯೋಗಿ ತಾಂತ್ರಿಕ ಪದವೀಧರರಿಗೆ ಅನ್ಯಾಯವಾಗುತ್ತಿದೆ. ಈ ಭಾಗದಲ್ಲಿ ಇಷ್ಟು ನೌಕರರ ನೇಮಕಾತಿಯಾದರೆ ಕಾರ್ಮಿಕರ ಸಮಸ್ಯೆಯು ನಿವಾರಣೆ ಆಗಲಿದ್ದು, ಕಾರ್ಯಾಗಾರ ಸ್ಥಾಪಿಸಿದ ಸರ್ಕಾರದ ಉದ್ದೇಶವೂ ಈಡೇರಲಿದೆ ಎಂದು ಹೇಳಿದ್ದಾರೆ.ಈ ಕಾರ್ಯಾಗಾರ ಕೇವಲ ಹೆಸರಿಗೆ ಮಾತ್ರ ಇದ್ದು, ಬಸ್‌ಗಳ ತಯಾರಾಗಲಿ ಅಥವಾ ದುರಸ್ತಿಯಾಗಲಿ ಸರಿಯಾಗಿ ನಡೆಯುತ್ತಿಲ್ಲ. ಜನ ಸಾಮಾನ್ಯರಿಗೆ ಆಗುತ್ತಿರುವ ಇಂತಹ ಅನ್ಯಾಯವನ್ನು ಸರಿಪಡಿಸಬೇಕು. ಅಂತರ ರಾಜ್ಯ ಬಸ್‌ಗಳನ್ನು ಈ ಭಾಗದಿಂದ ಓಡಿಸಬೇಕು. ಗ್ರಾಮೀಣ ಸಾರಿಗೆ ಸರಿಪಡಿಸಲು ನೂರು ಹೊಸ ಬಸ್‌ಗಳನ್ನು ಕೊಡಬೇಕು, ಹೈಟೆಕ್ ಬಸ್‌ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry