ಸಾರಿ... ರೀ.. ಸೀರೆ...

7

ಸಾರಿ... ರೀ.. ಸೀರೆ...

Published:
Updated:

ಆವತ್ತು ಕಾಲೇಜಿನಲ್ಲಿ ಸಾರಿ ಡೇ! ಹಿಂದಿನ ದಿನ ಹಾಸ್ಟೆಲಿನ ಕಾರಿಡಾರಿನಲ್ಲಿ ಬರೀ ಸೀರೆಯದೇ ಮಾತು. ಅದಕ್ಕೆ ಮ್ಯಾಚಿಂಗ್ ಬ್ಲೌಸು, ಬಳೆ, ನೇಲ್ ಪಾಲಿಶ್, ಕ್ಲಿಪ್, ಐ ಶೇಡ್ ಎಂದು ಎಲ್ಲಾ ತಯಾರಿ ನಡೆಯುತ್ತಿದೆ.

 

ನಾಳೆ ಸೀರೆ ಉಡುವುದು ಎಂದು ಯಾರಿಗೂ ನಿದ್ದೆ ಬರುತ್ತಿಲ್ಲ. ಒಬ್ಬಳಿಗೆ ಸೀರೆ ಉಟ್ಟು ನಡೆದಾಡುವ ಚಿಂತೆಯಾದರೆ ಇನ್ನೊಬ್ಬಳಿಗೆ ಸೀರೆಗೆ ಮ್ಯಾಚಿಂಗ್ ಬಳೆಯ ಚಿಂತೆ. ಇನ್ಯಾರಿಗೋ ಬ್ಲೌಸೇ ಸರಿ ಹೋಗುತ್ತಿಲ್ಲ, ಮತ್ತೊಬ್ಬಳಿಗೆ ಸೀರೆ ಉಡಲೇ ಬರುವುದಿಲ್ಲ. ಅಲ್ಲಿರುವ ಬಹುತೇಕ ಹುಡುಗಿಯರು ಅದೇ ಮೊದಲ ಬಾರಿ ಸೀರೆ ಉಡುತ್ತಿದ್ದಾರೆ.

 

ಹಾಗಾಗಿ ಅವರಲ್ಲಿ ಒಂದು ರೀತಿಯ ಟೆನ್ಷನ್, ಒಂದು ಬಗೆಯ ದಿಗಿಲು, ಹಾಗೇ ಒಂಥರಾ ಪುಳಕ. ಅಲ್ಲಿಯವರೆಗೆ ನೀಟಾಗಿ ಯೂನಿಫಾರ್ಮ್ ಹಾಕಿ ಸ್ಕೂಲಿಗೆ ಹೋಗಿ ಬರುತ್ತಾ, ಟ್ಯೂಷನ್, ಸ್ಟಡಿ ಎಂದು ತಲೆ ಕೆಡಿಸಿಕೊಳ್ಳುತ್ತಾ ಎಕ್ಸಾಮ್ ಬಂದಾಗ ಓದಿಕೊಂಡು, ರಿಸಲ್ಟ್ ಬಂದಾಗ ಮುಂದೇನು ಎಂದು ಯೋಚಿಸುತ್ತಿದ್ದವರಿಗೆ ಈಗ ಒಂದೇ ಸಲ ಕಾಲೇಜಿನಲ್ಲಿ ದಿನಕ್ಕೊಂದು `ಡೇ~ಗಳ ಸಂಭ್ರಮ.

 

ಅದರಲ್ಲೂ ಹಾಸ್ಟೆಲಿನಲ್ಲಿದ್ದರೆ ಮುಗಿದೇ ಹೋಯಿತು. ಸೀರೆ ಉಡುವುದು ಎಂದರೆ ಸಣ್ಣ ಮಾತೆ? ಅದನ್ನ ಹೇಗೆ ಹೇಗೋ ಅಮ್ಮಂದಿರು ಉಟ್ಟ ಹಾಗೆಲ್ಲ ಉಡಲು ಸಾಧ್ಯವಿಲ್ಲ. ಅದಕ್ಕೆ ಎಲ್ಲ ಮ್ಯಾಚಿಂಗೇ ಆಗಬೇಕು. ಸೀರೆ ಉಟ್ಟ ಮೇಲೆ ಅದು ನೀಟಾಗಿ ನಿಲ್ಲಬೇಕು.

 

ಹೊಟ್ಟೆ ಕಾಣಬಾರದು, ಸೆರಗಿಗೆ ಹಾಕಿದ ಪಿನ್ ಗಟ್ಟಿಯಾಗಿರಬೇಕು, ಯಾವುದೇ ಕೆಲಸ ಮಾಡುವ ಪ್ರಸಂಗ ಬರಬಾರದು. ಅಬ್ಬಬ್ಬಬ್ಬ! ಎಷ್ಟೊಂದು ಬೇಕುಗಳು. ಒಬ್ಬರಿಂದ ಒಬ್ಬರು ಕೊಟ್ಟು ತೆಗೆದುಕೊಂಡು, ಏನೇನೋ ಕಲಿತುಕೊಂಡು ಅಂತೂ ಮರುದಿನ ಸೀರೆ ಉಡಲು ರೆಡಿಯಾಗುತ್ತಾರೆ.ಸೀರೆ ಉಡುವುದು ಎಂದರೆ ಸಾಮಾನ್ಯವೇ? ಸೀರೆ ಉಡುವ ಮೊದಲು ಹೀಲ್ಡ್ ಧರಿಸಿರಬೇಕು. ಏಕೆಂದರೆ ಅದರ ಎತ್ತರಕ್ಕೆ ತಕ್ಕ ಹಾಗೆ ಸೀರೆ ಉಡಬೇಕು. ಇಲ್ಲದಿದ್ದರೆ ಸೀರೆ ಗಿಡ್ಡವಾಗಿಬಿಡುತ್ತದೆ. ಅಂತೂ ಹೀಲ್ಡ್ ಧರಿಸಿ ಉಡತೊಡಗಿದರೆ ನೆರಿಗೆಯೇ ಕೂರುತ್ತಿಲ್ಲ.ಅದಕ್ಕಾಗಿ ಒಂದಷ್ಟು ಅಸಹನೆ. `ಥೂ ಯಾರ್ ಕಂಡ್ ಹಿಡದ್ರೋ ಈ ಸೀರೇನ~ ಎಂದು ಗೊಣಗುತ್ತ ಒಬ್ಬರಿಗೊಬ್ಬರು ಹೆಲ್ಪ್ ಮಾಡಿಕೊಂಡು ಸೆರಗು ಪಿನ್ ಮಾಡಿ, ನಾಲ್ಕಾರು ಬಾರಿ ಕನ್ನಡಿ ಎದುರು ಓಡಾಡಿ ಪ್ರಾಕ್ಟೀಸ್ ಮಾಡಿಕೊಂಡು ಮೆಲ್ಲಗೆ ಹಾಸ್ಟೆಲಿನಿಂದ ಹೊರಬೀಳುತ್ತಾರೆ. ಆ ದಿನವಿಡೀ ಏನೂ ಕಾರ‌್ಯಕ್ರಮವಿರುವುದಿಲ್ಲ. ಆದಷ್ಟೂ ಸೀರೆ ಸುಕ್ಕಾದಂತೆ ಓಡಾಡುವುದೊಂದೇ ಆ ದಿನದ ಅಜೆಂಡಾ.ಇದು ಇವತ್ತಿನ ಯುವತಿಯರು ಸೀರೆಗೆ ರೆಡಿಯಾಗುವ ಪರಿ. ಒಂದು ಕಾಲವಿತ್ತು, ಹೆಣ್ಣುಮಗು ದೊಡ್ಡವಳಾಗುತ್ತಿದ್ದಂತೆ ಉಡುತ್ತಿದ್ದುದೇ ಸೀರೆ. ಆಕೆಗೆ ಅದರ ನೆರಿಗೆ ಸೆರಗುಗಳ ನಯ ನಾಜೂಕುಗಳು ಗೊತ್ತಿರಲಿಲ್ಲ. ಮೈ ಮುಚ್ಚಲೊಂದು ಬಟ್ಟೆ ಅಷ್ಟೇ ಆಗಿತ್ತು.ಸಭೆ, ಸಮಾರಂಭ, ಮದುವೆ, ದಿಬ್ಬಣ ಎಲ್ಲದಕ್ಕೂ ಒಂದೇ ವೇಷಭೂಷಣ, ಒಂದೇ ಅಲಂಕಾರ. ಅವಳು ಉಟ್ಟಿದ್ದು ಸೀರೆ ಎಂದಾದರೆ ಮುಗಿದಿತ್ತು. ಆದರೆ ಇವತ್ತು ಸೀರೆಯ ಟ್ರೆಂಡ್ ಬದಲಾಗಿದೆ. ಹೆಚ್ಚು ಹೆಚ್ಚು ನಯನಾಜೂಕುಗಳನ್ನು ಮೈಗೂಡಿಸಿಕೊಂಡ ಮಹಿಳೆ ಸೀರೆಗೆ ಬೇರೆಯದೇ ಭಾಷ್ಯ ಬರೆದಿದ್ದಾಳೆ. ಅದಕ್ಕೊಂದು ಆಧುನಿಕ ಟಚ್ ನೀಡಿದ್ದಾಳೆ.

ಅದೇನೇ ಇದ್ದರೂ ಸೀರೆ ಅಂದ ಕೂಡಲೇ ಏನೇನು ನೆನಪಾಗತ್ತೆ?ದ್ರೌಪದಿ? ದುಶ್ಯಾಸನ? ಮೈಸೂರ್ ಸಿಲ್ಕ್? ಖಾದಿ ಸೀರೆ? ಇಂದಿರಾಗಾಂಧಿ? ಏರ್ ಇಂಡಿಯಾದ ಗಗನ ಸಖಿಯರು? ಪ್ರಿಯಾಂಕಾ ಗಾಂಧಿ? ಊಹುಂ, ಇದ್ಯಾವುದೂ ಅಲ್ಲ. ಸೀರೆ ಅಂದ ತಕ್ಷಣ ನೆನಪಿಗೆ ಬರುವುದು ಒದ್ದೆ ಸೆರಗು, ಸುಕ್ಕುಗಟ್ಟಿದ ಅಂಚು, ಸೊಂಟವೇರಿ ಕುಳಿತ ನೆರಿಗೆ, ಮುದುರಿದ ರವಿಕೆ, ಕೈಯ ಗಾಜಿನ ಬಳೆ, ಹಣೆಯ ಉರುಟು ಕುಂಕುಮ ಹೀಗೆ ಇದೆಲ್ಲ ಒಮ್ಮೆಲೆ ನೆನಪಿಸುವುದು ಅಮ್ಮನನ್ನು.ಅಪ್ಪನ ಸಿಡುಕುಗಳಿಗೆ ಮೌನವಾಗುತ್ತ, ಮಕ್ಕಳ ಮಾತಿಗೆ ಕಣ್ಣೀರಾಗುತ್ತ, ತನ್ನ ಆಸೆಗಳಿಗೆ ತಣ್ಣೀರೆರೆಚುತ್ತ ಹೆಚ್ಚಿನ ಸಮಯ ಅಡುಗೆ ಮನೆಯಲ್ಲೇ ಕಳೆದ, ಕಳೆವ ಅಮ್ಮ ಅನಾಯಾಸವಾಗಿ ನೆನಪಾಗುವುದು ಸೀರೆಯೊಂದಿಗೆ. ಅಮ್ಮ, ಹಾಗೂ ಸೀರೆ ಎರಡೂ ಒಟ್ಟೊಟ್ಟಿಗೇ ಬರುವ ನೆನಪುಗಳು. ಎಂದಾದರೂ ಅಮ್ಮನನ್ನು ಜೀನ್ಸ್ ಪ್ಯಾಂಟಿನಲ್ಲಿ ನೆನಪಿಸಿಕೊಂಡಿದ್ದೀರಾ?ಅಮ್ಮ ಜೀನ್ಸ್ ತೊಟ್ಟು ಪಾತ್ರೆ ತೊಳೆಯುವುದು, ನೀರು ಸೇದುವುದು, ರಂಗೋಲಿ ಹಾಕುವುದು, ದೇವರ ಮನೆಯಲ್ಲಿ ಕೂರುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾ? ಬಹುಶಃ ನಮ್ಮ ಮಕ್ಕಳಿಗೆ ಅದು ಸಾಧ್ಯವಾಗಬಹುದು. ಏಕೆಂದರೆ ನಾನು, ನನ್ನಂತವರು ಚೂಡಿದಾರ್, ಕುರ್ತಾ ಜೀನ್ಸ್‌ಗಳ ಬಹುರೂಪಿಗಳಾದ್ದರಿಂದ ಅವರಿಗದು ಸುಲಭವೇ!ಆದರೆ ನಾವೆಲ್ಲ ತಿಳಿವಳಿಕೆ ಬಂದಾಗಿನಿಂದ ಅಮ್ಮನನ್ನು ನೋಡಿದ್ದು ಸೀರೆಯಲ್ಲಿ. ಅಮ್ಮ ಕೋಪಿಸಿಕೊಂಡಾಗ, ಸೆರಗು ಕಣ್ಣಿಗೊತ್ತಿ ಅಳುವಾಗ, ಹಲ್ಲುಕಚ್ಚಿ ನೋವು ನುಂಗುವಾಗ, ಪಟ್ಟು ಹಿಡಿದು ಜಗಳಕ್ಕೆ ನಿಂತಾಗ ಎಲ್ಲ ಅಮ್ಮನೊಂದಿಗೆ ಇದ್ದಿದ್ದು ಸೀರೆ. ಹೀಗಾಗಿ ಸೀರೆ ಎಂದರೆ ಅಮ್ಮನ ಅಮೂರ್ತ ರೂಪ ಹಾಗೂ ಮೂರ್ತ ಭಾವ.ಅಮ್ಮನಂತೆ ಸೀರೆ ಉಡುವೆ ಎಂದು ಮೊದಲಬಾರಿ ಅಂದುಕೊಂಡಿದ್ದು ಯಾವಾಗ? ಸರಿಯಾಗಿ ನೆನಪಿಲ್ಲ. ಆದರೆ ಬೊಂಬೆಗೆ ಸೀರೆ ಉಡಿಸುವುದರಿಂದ ಶುರುವಾಗುವ ಸೀರೆ ಆಟ, ಕೊನೆಗೆ ತಾನೇ ಉಟ್ಟು ಅಮ್ಮನಾಗಿಬಿಡುವವರೆಗೂ ಮುಂದುವರೆಯುತ್ತದೆ. ಗಂಡುಮಕ್ಕಳು ಕಾರು, ಪವರು, ಸ್ಪೈಡರ್ ಮೆನ್ ಎಂದು ಆಡುವ ಹೊತ್ತಿಗೆ ಹೆಣ್ಣುಮಕ್ಕಳು ಅಮ್ಮನ ಸೀರೆ ಉಡುವ ಆಟ ಆಡತೊಡಗುತ್ತಾರೆ.

 

ಸೀರೆ ಉಟ್ಟು ತನ್ನ ಗೊಂಬೆಗೆ ಅಮ್ಮನಾಗುತ್ತ, ಟೀಚರಾಗುತ್ತ ಅವಳಿಗೇ ಅರಿವಿಲ್ಲದೆ ಸೀರೆಯನ್ನು ಒಪ್ಪಿಕೊಂಡು ಬಿಡುತ್ತಾಳೆ. ಹೇಗಾದರೂ ಸರಿ ಸೀರೆ ಸುತ್ತಿಕೊಳ್ಳುವ ಅವಳ ತವಕದಲ್ಲೇ ಹೆಣ್ತನ ಅರಳತೊಡಗುತ್ತದೆ. ಅಮ್ಮನ ದೊಗಳೆ ರವಿಕೆಯಾದರೂ ಸರಿ ಅದನ್ನೇ ಹಾಕಿಕೊಂಡು ಅಮ್ಮನಿಗೆ ದುಂಬಾಲು ಬಿದ್ದು ಸೀರೆ ಉಡಿಸಿಕೊಳ್ಳುವ ಮಗಳು ಉದ್ದುದ್ದ ಸೆರಗು ನೆಲಕ್ಕೆ ಹಾಸುತ್ತ, ಕಾಲಿಗೆ ಸಿಕ್ಕ ನೆರಿಗೆಗಳನ್ನು ತಡವುತ್ತ, ಅಮ್ಮನಾಗುವ ಅಬ್ಬರದಲ್ಲಿ ಅವಳಿಗೇ ಗೊತ್ತಿಲ್ಲದೆ ಸೀರೆಯನ್ನು ಪ್ರೀತಿಸತೊಡಗುತ್ತಾಳೆ.

 

ಹಾಗಂತ ಸೀರೆಯನ್ನೇ ಉಟ್ಟುಬಿಡುತ್ತಾಳೆ ಎಂದಲ್ಲ. ಚೂಡಿದಾರ್ ತೊಡುವ ಮೈ ಮನಸ್ಸು ಯೌವನಕ್ಕೆ ಪಕ್ಕಾಗುತ್ತಿದ್ದಂತೆ ಸೀರೆಗೆ ಮಾರು ಹೋಗಿರುತ್ತದೆ. ಆದರೆ ಅಮ್ಮನಂತೆ ದಿನನಿತ್ಯ ಅವಳು ಸೀರೆ ಉಡಲು ಸಾಧ್ಯವೇ? `ಏ ಹೋಗಮ್ಮ, ಅದೇನ್ ದೊಡ್ಡ ಬ್ರಮ್ಮ ವಿದ್ಯೆ ಅಲ್ಲ, ಕಲತ್ಕೊಂಡ್ರಾಯ್ತು~ ಎನ್ನುತ್ತ ಜೀನ್ಸ್ ತೊಟ್ಟು ಕಾಲೇಜಿಗೆ ಓಡೇಬಿಡುತ್ತಾಳೆ.ಬಹುತೇಕ ಹುಡುಗಿಯರು ಸೀರೆ ಉಡಲು ತೊಡಗುವುದು ಕಾಲೇಜು ದಿನಗಳಿಂದಲೇ. ಟ್ರೆಡಿಶನಲ್ ಡೇಗೋ ಇಲ್ಲ ಯತ್ನಿಕ್ ಡೇಗೊ ಸೀರೆ ಉಟ್ಟರೆ ಮುಗಿಯಿತು. ನಂತರ ಆ ನೆನಪುಗಳನ್ನು ನೀಟಾಗಿ ವಾರ್ಡ್‌ರೋಬಿನಲ್ಲಿ ಎತ್ತಿಟ್ಟುಬಿಡುತ್ತಾರೆ. ಎಷ್ಟೋ ಹುಡುಗಿಯರು ಮತ್ತೆ ಸೀರೆ ಉಡುವುದು ಅವರ ಎಂಗೇಜ್‌ಮೆಂಟ್‌ನಲ್ಲೇ. ಆದರೆ ಹಾಗೆ ಯಾವತ್ತೋ ಸೀರೆ ಉಡುವಾಗ ಅದನ್ನು ಹೇಗೇಗೋ ಉಡಲು ಅವರು ತಯಾರಿರುವುದಿಲ್ಲ. ಡಿಸೈನ್ ಸಾರಿಯೇ ಆಗಿರಬೇಕು. ಸೀರೆ ಚಂದ ಕಾಣಬೇಕು ಅಂದರೆ ರವಿಕೆ ಪ್ಯಾಷನೇಬಲ್ ಆಗಿರಬೇಕು. ತಲೆಯಿಂದ ಅಡಿಯವರೆಗೆ ಎಲ್ಲವೂ ಮ್ಯಾಚ್ ಆಗಿರಬೇಕು.

 

ಸೀರೆ ಉಟ್ಟ ಮೇಲೆ ಅದು ಅತ್ತಿತ್ತ ಸರಿದಾಡಕೂಡದು, ಜಾರಕೂಡದು, ಹೀಗೆ ಕಂಡೀಶನ್ ಮೇಲೆ ಕಂಡೀಶನ್‌ಗಳು. ಆದರೂ ಸೀರೆ ಉಡಬೇಕು! ವಿಚಿತ್ರ ಎಂದರೆ `ಯಾಕಮ್ಮ ಇದನ್ ಉಡಬೇಕು~ ಎಂದು ಗೊಣಗುತ್ತಲಾದರೂ ಕೊನೆಗೂ ಅದನ್ನು ಅಪ್ಪಿಕೊಳ್ಳುತ್ತಾರೆ. ಆದರೆ ಹಾಗೆ ಸೀರೆ ಉಡುವುದನ್ನು ಕಲಿಯುವ ಪ್ರಕ್ರಿಯೆ ಮಾತ್ರ ಎಲ್ಲರಿಗೂ ಒಂದೇ ಆಗಿರುತ್ತದೆ.

 

ತಾನು ದೊಡ್ಡವಳಾಗುತ್ತಿದ್ದೇನೆ ಎಂಬ ನಾಚಿಕೆ ಒಂದೆಡೆಯಾದರೆ, `ಇದನೆಲ್ಲ ನಾನು ಉಡಲ್ಲ~ ಎಂಬ ಸುಳ್ಳೇ ಭಂಡತನ ಇನ್ನೊಂದೆಡೆ. `ನಾನಂತೂ ಸೀರೆ ಎಲ್ಲ ಉಡಲ್ಲಪ್ಪ~ ಎಂದು ಸುಮ್ಮನೆ ಹೇಳುತ್ತ, ಅದರೆಡೆ ಸಣ್ಣ ಕುತೂಹಲವನ್ನೂ ತೋರದೆ ಕೊನೆಗೆ ಉಡಲೇಬೇಕಾದ ಪ್ರಸಂಗ ಬಂದಾಗ ಇದ್ದ ಕೋಪವನ್ನೆಲ್ಲ ಅಮ್ಮನ ಮೇಲೆ ತೀರಿಸಿಕೊಳ್ಳುತ್ತಾರೆ. ಆದರೆ ಒಮ್ಮೆ ಸೀರೆ ಉಡುವುದು ಕಲಿತ ಮೇಲೆ ಸಂದರ್ಭಕ್ಕೆ ತಕ್ಕ ಹಾಗೆ ಸೀರೆಯನ್ನು ಮಾರ್ಪಾಡು ಮಾಡಿಕೊಳ್ಳುವ ಎಲ್ಲ ಕಲೆಯನ್ನೂ ಕರಗತ ಮಾಡಿಕೊಂಡು ಬಿಡುತ್ತಾರೆ.ತೀರಾ ತೆಳ್ಳಗಿರುವ ಹುಡುಗಿಯರಿಗೆ ಸೀರೆ ಉಡಲು ಮುಜುಗುರ. ಇನ್ನಷ್ಟು ತೆಳ್ಳಗೆ ಕಾಣಿಸಿದರೆ ಎಂದು. ಆಗೆಲ್ಲ ಎರಡೆರಡು ಲಂಗ ತೊಟ್ಟು ಸೀರೆ ಉಡುವವರಿದ್ದಾರೆ. ಇನ್ನು ದಪ್ಪ ಇರುವವರಿಗೂ ತಾನು ಸೀರೆಯಲ್ಲಿ ಇನ್ನಷ್ಟು ದಪ್ಪ ಕಂಡರೆ ಎಂಬ ದಿಗಿಲು.

 

ಅಂಥವರೇನು ಮಾಡುತ್ತಾರೆ ಗೊತ್ತಾ? ಚೂಡಿದಾರ್ ಪ್ಯಾಂಟ್ ಮೇಲೆ ಸೀರೆ ಉಟ್ಟುಬಿಡುತ್ತಾರೆ! ಇನ್ನು ಹೊಸದಾಗಿ ಸೀರೆ ಉಟ್ಟವರ ಮೈಮೇಲಂತೂ ಸಾರಿ ಪಿನ್ ರಾಶಿಯೇ ತುಂಬಿರುತ್ತದೆ. ಎಲ್ಲೆಲ್ಲೋ ಅಡಗಿ ಕುಳಿತ ಸಾರಿ ಪಿನ್‌ಗಳು ಹುಡುಗಿಯ ಮಾನ ಕಾಪಾಡುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿರುತ್ತವೆ. ಇವೆಲ್ಲ ಹೆಣ್ಣುಮಕ್ಕಳ ಲೋಕದ ಗುಟ್ಟುಗಳು.ಇಂದಿನ ಹುಡುಗಿಯರನ್ನು ಸೀರೆಯಲ್ಲಿ ನೋಡಲು ಸಿಗುವುದು ನೋಡುಗರ ಭಾಗ್ಯವೇ ಸರಿ. ಆದರೆ ಅದರರ್ಥ ಅವರು ಸೀರೆಯ ದ್ವೇಷಿಗಳೆಂದಲ್ಲ. ಚೂಡಿದಾರ್ ನೀಡುವ ಕಂಫರ್ಟ್ ಅನ್ನು ಸೀರೆ ನೀಡಲಾರದು, ಜೀನ್ಸ್ ಕೊಡುವ ಆರಾಮವನ್ನು ಚೂಡಿದಾರ್ ಕೊಡಲಾರದು.

 

ಆದರೆ ಅವ್ಯಾವುದೂ ಕೊಡಲಾಗದ ಮೋಹಕತೆಯನ್ನು ಸೀರೆ ಕೊಡಬಲ್ಲದು. ಇದನ್ನು ಯಾವ ಹುಡುಗಿಯೂ ಅಲ್ಲಗಳೆಯಲಾರಳು. ಏಕೆಂದರೆ ಇವತ್ತಿಗೂ ಫಾರ್ಮಲ್ ಅಥವ ಸಾಂಪ್ರದಾಯಿಕ ಉಡುಗೆ ಎಂದರೆ ಸೀರೆಯನ್ನೇ ಉಡುತ್ತೇವೆ. ಏಕೆ? ಚೂಡಿದಾರ್ ಆರಾಮಾಗಿರುತ್ತದೆ ಎಂದು ಗ್ರಾಂಡ್ ಚೂಡಿದಾರ್ ಯಾಕೆ ತೊಡುವುದಿಲ್ಲ? ಏಕೆಂದರೆ ಸೀರೆಗಿರುವ ಹೆಣ್ತನ, ಮಾತೃತ್ವ ಇನ್ನಾವುದೇ ದಿರಿಸಿಗಿಲ್ಲ.

 

ಇವತ್ತು ಸೋನಿಯಾ ಗಾಂಧಿ ನಮ್ಮವರು ಎನಿಸುತ್ತಿದ್ದರೆ ಅದಕ್ಕೆ ಕಾರಣ ಸೀರೆ. ಇಟಲಿಯ ಹೆಣ್ಣು ಮಗಳು ಎಂದು ಪ್ರಜ್ಞಾಪೂರ್ವಕವಾಗಿ ನೆನಪಿಸಿಕೊಂಡರೂ ಅವರು ನಮ್ಮವರಾಗೇ ಉಳಿದು ಬಿಡುವುದು ಅವರುಡುವ ಸೀರೆಯಿಂದಾಗಿ. ಇನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲರನ್ನು ಒಮ್ಮೆ ಬ್ರಿಟನ್ ರಾಣಿಯ ಗೌನಿನಲ್ಲಿ ಕಲ್ಪಿಸಿಕೊಳ್ಳಿ ನೋಡೋಣ. ಊಂ ಹುಂ. ಸುತಾರಾಂ ಸಾಧ್ಯವಿಲ್ಲ. ಚಿನ್ನದಂಚಿನ ರೇಶ್ಮೆ ಸೀರೆಯೇ ಅವರಿಗೆ ಸರಿ.ವಿಶ್ವಸುಂದರಿ ಸ್ಪರ್ಧೆ ಸಮಯದಲ್ಲಿ ಐಶ್ವರ್ಯ ರೈ ಈಜುಡುಗೆ ತೊಟ್ಟಿದ್ದರು ಎಂದರೆ ನಂಬಲು ಹಿಂದೆ ಮುಂದೆ ನೋಡುತ್ತೇವೆ ಏಕೆ? ಅವರನ್ನು ಸೀರೆಯ ಮೇಲೆ ನೋಡಿದ್ದರಿಂದ. ತುಂಡುಡುಗೆ ತೊಟ್ಟು `ಧೂಮ್ ಮಚಾಲೆ~ ಎಂದು ಅವಳು ಕುಣಿಯುತ್ತಿದ್ದಾಗ ಮೂಗು ಮುರಿದು ಚಾನೆಲ್ ಬದಲಾಯಿಸಿದ ಜನ ಅದೇ ಐಶ್ವರ್ಯ ಲಕ್ಷಣವಾಗಿ ಸೀರೆ ಉಟ್ಟು ಬೆಳಗಾವಿ ಕನ್ನಡ ಸಮ್ಮೇಳನಕ್ಕೆ ಬಂದಾಗ ಮುಗಿಬಿದ್ದು ನೋಡ ಹೋಗಿಲ್ಲವೆ? ಹೀಗೆ ಇಡೀ ವ್ಯಕ್ತಿತ್ವಕ್ಕೇ ಒಂದು ಮಾಂತ್ರಿಕತೆಯನ್ನು ತುಂಬುವ ತಾಕತ್ತಿದೆ ಸೀರೆಗೆ.ಇವತ್ತು ಸೀರೆ ಕೇವಲ ಒಂದು ಉಡುಗೆಯಾಗಿ ಉಳಿದಿಲ್ಲ. ಅದೊಂದು ಅಕೇಶನಲ್ ಉಡುಗೆಯಾಗಿ ಬದಲಾಗಿದೆ. ಮದುವೆ, ಫಂಕ್ಷನ್, ಅವಾರ್ಡ್ ಸೆರೆಮನಿ, ಪಾರ್ಟಿ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆಯದೇ ಸ್ವರೂಪ ಪಡೆದುಬಿಟ್ಟಿದೆ.ಸೀರೆಯನ್ನು ಈಗ ಕೇವಲ ಟ್ರೆಡಿಷನಲ್ ಉಡುಗೆ ಎಂದರೆ ಒಪ್ಪಿಕೊಳ್ಳಲಾಗದು. ಏಕೆಂದರೆ ಇವತ್ತು ಸೀರೆ ಫ್ಯಾಶನ್ ಶೋಗಳಲ್ಲಿ ಕೂಡ ತನ್ನದೇ ಆದ ರೀತಿಯಲ್ಲಿ ಮಿಂಚುತ್ತಿದೆ. ಮೈ ತುಂಬ ಸೀರೆ ಇದ್ದರೂ ಸೆಕ್ಸಿ ಎನಿಸುವಂತೆ ಬದಲಾಗಿದೆ.

 

ಇಂದಿನ ನೆಟೆಡ್ ಸೀರೆಗಳು, ಬೆನ್ನು ಕಾಣುವ ಬ್ಲೌಸ್‌ಗಳು, ತೋಳಿಲ್ಲದ ರವಿಕೆಗಳು ಸೀರೆಗೆ ಹೊಸ ಆಯಾಮವನ್ನೇ ನೀಡಿಬಿಟ್ಟಿವೆ. ಹೀಗಿರುವಾಗ ಇಂದಿನ ಹುಡುಗಿಯರು ಅಮ್ಮನ ಕಾಲದ ಸೀರೆಯನ್ನು ಒಪ್ಪಿಕೊಳ್ಳುತ್ತಾರೆಯೆ? ಖಂಡಿತಾ ಇಲ್ಲ.

 

ಸೀರೆ ಉಡಲು ಬಾರದವರಿಗೆ ಸಹಾಯವಾಗಲಿ ಎಂದೇ ನೆರಿಗೆ ಸ್ಟಿಚ್ ಮಾಡಿದ ಸೀರೆಗಳೂ ಮಾರುಕಟ್ಟೆಗೆ ಬಂದಿವೆ. ಸುಮ್ಮನೆ ಸೀರೆಯನ್ನು ಸೊಂಟಕ್ಕೆ ಸಿಕ್ಕಿಸಿ ಸೆರಗು ಪಿನ್ ಮಾಡಿದರೆ ಮುಗಿಯಿತು. ಸೀರೆ ರೆಡಿ.ಇವತ್ತು ನಾನು, ಹಾಗೂ ನನ್ನಂಥವರು ಅಮ್ಮಂದಿರಾಗಿದ್ದೇವೆ. ನಮ್ಮಂಥ ಸೂಪರ್ ಅಮ್ಮಂದಿರು ನಮ್ಮ ಮದುವೆಯಲ್ಲಿ ಅಥವಾ ಇನ್ನಾರದೋ ರಿಸೆಪ್ಷನ್ ಬಿಟ್ಟರೆ ಉಳಿದ ದಿನಗಳಲ್ಲಿ ಸೀರೆ ಉಟ್ಟಿದ್ದೇ ಕಡಿಮೆ. ಸೀರೆಗಿಂತ ಚೂಡಿದಾರ್ ಅಥವಾ ಜೀನ್ಸ್ ಮೈ ಮುಚ್ಚುತ್ತದೆ ಎನ್ನುವುದು ನಮ್ಮ ವಾದ. ನಮ್ಮ ಚೂಡಿದಾರ್ ಕುರ್ತಾಗಳು ಸ್ವತಃ ಅಮ್ಮನೇ ನಿಂತು ಕೊಡಿಸಿದ್ದು.

 

ನೀನು ನನ್ನಂತೆ ಸೀರೆಯಲ್ಲಿ ಹೈರಾಣಾಗುವುದು ಬೇಡ ಮಗಳೆ ಎಂದು ಅವಳೇ ಕಂಫರ್ಟ್ ನೀಡುವ ಬಟ್ಟೆಗಳನ್ನು ಹಾಕಿಸಿದ್ದು. ಅದಕ್ಕೇ ನಾವು ಸೀರೆಯನ್ನು ಅಪರೂಪಕ್ಕಾದರೂ ಕಷ್ಟಪಟ್ಟು ಉಡುತ್ತೇವೆ. ಇಂಥ ನಮ್ಮನ್ನು ನೋಡುವ ನಮ್ಮ ಮಕ್ಕಳಿಗೆ ಸೀರೆ ಎಂದರೆ ಅಮ್ಮ ಎನ್ನುವ ಕಲ್ಪನೆ ಬರಲು ಸಾಧ್ಯವೇ? ಬರಲಿಕ್ಕಿಲ್ಲ.

 

ಆದರೆ ನಾವು ಮಾತ್ರ ಕೈ ಕಣ್ಣೀರು ಎರಡೂ ವರೆಸಿದ್ದು ಅಮ್ಮನ ಸೆರಗಿನಲ್ಲಿ. ನಮ್ಮ ಮಟ್ಟಿಗೆ ಹೇಳುವುದಾದರೆ ಸೀರೆ ಎಂದರೆ ಮಫ್ಲರ್, ಸೀರೆ ಎಂದರೆ ಬೆಡ್‌ಶೀಟ್, ಸೀರೆ ಎಂದರೆ ತೊಟ್ಟಿಲು, ಸೀರೆ ಎಂದರೆ ಕರ್ಟ್‌ನ್, ಸೀರೆ ಎಂದರೆ ಗಾಯಕ್ಕೆ ಕಟ್ಟುವ ತುಂಡು, ಸೀರೆ ಎಂದರೆ ಮೂಗೊರೆಸುವ ಕರ್ಚೀಫ್, ಸೀರೆ ಎಂದರೆ ಇನ್ನೇನೇನೊ. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry