ಮಂಗಳವಾರ, ನವೆಂಬರ್ 19, 2019
29 °C

ಸಾರ್ಕ್ ಅಭಿವೃದ್ಧಿ ಗುರಿ ವಿಸ್ತರಣೆ

Published:
Updated:

ಕಠ್ಮಂಡು (ಪಿಟಿಐ): ಸಾರ್ಕ್ ರಾಷ್ಟ್ರಗಳಲ್ಲಿನ ಅಭಿವೃದ್ಧಿ ಗುರಿಯನ್ನು 2012ರಿಂದ 2015ರವರೆಗೆ ವಿಸ್ತರಿಸುವ ನಿರ್ಧಾರವನ್ನು ಭಾರತ ಸೇರಿದಂತೆ 8 ಸಾರ್ಕ್ ರಾಷ್ಟ್ರಗಳು ತೆಗೆದುಕೊಂಡಿವೆ.ಶುಕ್ರವಾರ ಇಲ್ಲಿ ಮುಕ್ತಾಯಗೊಂಡ ಮೂರನೇ ಸಾರ್ಕ್ ರಾಷ್ಟ್ರಗಳ ಸಚಿವರುಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಜೊತೆಗೆ ಬಡತನ ನಿರ್ಮೂಲನೆ ಮಾಡಲು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಮೂರು ಹಂತದ ಯೋಜನೆ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.ಈ ಪ್ರಾದೇಶಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ನೇಪಾಳ ಮಧ್ಯಂತರ ಚುನಾವಣಾ ಸರ್ಕಾರದ ಮುಖ್ಯಸ್ಥ ಖಿಲ್ ರಾಜ್ ರೆಗ್ಮಿ, `ಬಡತನ ಎನ್ನುವುದು ಹಿಂಸೆಯ ಮೂರ್ತ ರೂಪ' ಎಂದು ಮಹಾತ್ಮಾ ಗಾಂಧಿಯವರ ಮಾತನ್ನು ನೆನಪಿಸಿದರಲ್ಲದೆ, ಜಂಟಿ ಕಾರ್ಯಗಳ ಮೂಲಕ ಬಡತನದ ವಿರುದ್ಧ ಹೋರಾಡಬೇಕಿದೆ ಎಂದರು.`ಸಾರ್ಕ್‌ನ ಸಹಸ್ರಮಾನದ ಗುರಿ ಸಾಧಿಸುವಲ್ಲಿ ಪ್ರಯತ್ನ ನಡೆಸುವುದಾಗಿ ಸಾರ್ಕ್ ಮಹಾಪ್ರಧಾನ ಕಾರ್ಯದರ್ಶಿ ಅಹಮದ್ ಸಲೀಂ ತಿಳಿಸಿದರು. ಯೋಜನಾ ಆಯೋಗದ ಪ್ರಧಾನ ಸಲಹೆಗಾರ್ತಿ ವಂದನಾ ಕುಮಾರಿ ಜೆನಾ ನೇತೃತ್ವದ ನಾಲ್ವರು ಸದಸ್ಯರ ಭಾರತೀಯ ನಿಯೋಗ ಭಾಗವಹಿಸಿದೆ.

ಪ್ರತಿಕ್ರಿಯಿಸಿ (+)