ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಬಿಬಿಎಂಪಿ

7

ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಬಿಬಿಎಂಪಿ

Published:
Updated:
ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಬಿಬಿಎಂಪಿ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಜಯನಗರ ವಾಣಿಜ್ಯ ಸಂಕೀರ್ಣದ ಕೆಲ ಭಾಗಗಳನ್ನು ಕೆಡವಿ ಪುನರ್ ನಿರ್ಮಿಸುವ ಕಾಮಗಾರಿಯನ್ನು ಪ್ರಾರಂಭಿಸುತ್ತಿರುವ ಸಂದರ್ಭದಲ್ಲಿಯೇ ಬಿಬಿಎಂಪಿಯು ಸಂಕೀರ್ಣವನ್ನು `ಹುಡ್ಕೊ~ ಸಂಸ್ಥೆಗೆ ಅಡಮಾನವಿಟ್ಟು ಸಾಲ ಪಡೆಯಲು ಮುಂದಾಗಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.ನಗರದ ಎಂ.ಜಿ. ರಸ್ತೆಯ ಸಾರ್ವಜನಿಕ ಬಹುಪಯೋಗಿ (ಯುಟಿಲಿಟಿ) ಕಟ್ಟಡ ಹಾಗೂ ಜಯನಗರ ವಾಣಿಜ್ಯ ಸಂಕೀರ್ಣವನ್ನು ಅಡಮಾನವಿಟ್ಟು `ಹುಡ್ಕೊ~ ಸಂಸ್ಥೆಯಿಂದ 1000 ಕೋಟಿ ರೂಪಾಯಿ ಸಾಲ ಪಡೆಯಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ಆದರೆ, ವಾಣಿಜ್ಯ ಸಂಕೀರ್ಣದ ಗೋಪುರ ಭಾಗವನ್ನು ಹೊರತುಪಡಿಸಿ ಜನತಾ ಬಜಾರ್, ಪುಟ್ಟಣ್ಣ ಚಿತ್ರಮಂದಿರ ಹಾಗೂ ಮಾರುಕಟ್ಟೆ ಭಾಗವನ್ನು ನೆಲಸಮಗೊಳಿಸಿ ಪುನರ್ ನಿರ್ಮಾಣ ಮಾಡಲು ಬಿಡಿಎ ಮುಂದಾಗಿದೆ. ಸುಮಾರು 110 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಈ ಕಾಮಗಾರಿಯನ್ನು ನಾಗಾರ್ಜುನ ಕನ್ಸ್‌ಟ್ರಕ್ಷನ್ ಕಂಪೆನಿ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಿದೆ.`ಜಯನಗರ ವಾಣಿಜ್ಯ ಸಂಕೀರ್ಣವನ್ನು ಪುನರ್ ನಿರ್ಮಿಸುವ ಸಂಬಂಧ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇನ್ನಷ್ಟೇ ಗುತ್ತಿಗೆ ಕಂಪೆನಿಗೆ ಕಾಮಗಾರಿಯ ಆದೇಶ ಪತ್ರ ನೀಡಬೇಕಾಗಿದೆ~ ಎಂದು ಬಿಡಿಎ ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಘವನ್ `ಪ್ರಜಾವಾಣಿ~ಗೆ ತಿಳಿಸಿದರು.ನಾಗರಿಕ ಸೇವಾ ಸಂಸ್ಥೆಗಳ ಸಂಶಯ:`ಬಿಡಿಎ ಈ ವಾಣಿಜ್ಯ ಸಂಕೀರ್ಣದ ಕೆಲ ಭಾಗಗಳನ್ನು ನೆಲಸಮಗೊಳಿಸಿ ಪುನರ್ ನಿರ್ಮಿಸುವ ಸಂದರ್ಭದಲ್ಲಿ ಅದರ ಆಸ್ತಿ ದಾಖಲೆಗಳನ್ನು `ಹುಡ್ಕೊ~ ಸಂಸ್ಥೆಗೆ ಠೇವಣಿಯಿಟ್ಟು ಸಾಲ ಪಡೆಯಲು ಸಾಧ್ಯವಾಗಲಿದೆಯೇ?~ ಎಂಬುದು ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುಕುಂದ್ ಅವರ ಪ್ರಶ್ನೆ.`ಬೆಂಗಳೂರಿನ ನಾಗರಿಕರು ಆಸ್ತಿ ತೆರಿಗೆ, ವಾಣಿಜ್ಯ ತೆರಿಗೆ ಹಾಗೂ ವ್ಯಾಟ್ ಅನ್ನು ಸರ್ಕಾರಕ್ಕೆ ಪಾವತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ `ಹುಡ್ಕೊ~ ಸಂಸ್ಥೆಗೆ ಗ್ಯಾರಂಟಿ ನೀಡುವ ಮೂಲಕ ಜಯನಗರ ವಾಣಿಜ್ಯ ಸಂಕೀರ್ಣವನ್ನು ಅಡಮಾನವಿಡುವುದನ್ನು ತಪ್ಪಿಸಬಹುದಲ್ಲವೇ?~ ಎಂದು ಅವರು ಪ್ರಶ್ನಿಸುತ್ತಾರೆ.`ಈಗಾಗಲೇ ಈ ಯೋಜನೆ ಎಂಟು ವರ್ಷ ವಿಳಂಬವಾಗಿರುವುದರಿಂದ ಪುಟ್ಟಣ್ಣ ಚಿತ್ರಮಂದಿರದಿಂದ ಪಾಲಿಕೆಗೆ ಬರುತ್ತಿದ್ದ ಬಾಡಿಗೆಯೂ ಕೈತಪ್ಪಿದೆ. ಹೀಗಾಗಿ, ಈ ಯೋಜನೆ ಇನ್ನೆಷ್ಟು ವರ್ಷ ವಿಳಂಬವಾಗಲಿದೆ ಎಂಬುದನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಸ್ಪಷ್ಟಪಡಿಸಬೇಕು~ ಎಂದು ಅವರು ಒತ್ತಾಯಿಸಿದ್ದಾರೆ.ಸಾಲ ಪಡೆಯಲು ಅಡ್ಡಿಯಾಗದು: ಈ ನಡುವೆ, ಜಯನಗರ ವಾಣಿಜ್ಯ ಸಂಕೀರ್ಣದ ಆಸ್ತಿ ದಾಖಲೆಗಳನ್ನು ಠೇವಣಿಯಿಟ್ಟು `ಹುಡ್ಕೊ~ ಸಂಸ್ಥೆಯಿಂದ ಸಾಲ ಪಡೆಯುವುದಕ್ಕೆ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್ (ಮಾರುಕಟ್ಟೆ) ಎಂ.ಎಲ್. ಮುನಿಕೃಷ್ಣಪ್ಪ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು.`ಕೇವಲ ಜನತಾ ಬಜಾರ್, ಮಾರುಕಟ್ಟೆ ಹಾಗೂ ಪುಟ್ಟಣ್ಣ ಚಿತ್ರಮಂದಿರದ ಭಾಗಗಳನ್ನಷ್ಟೇ ನೆಲಸಮಗೊಳಿಸಲಾಗುತ್ತಿದೆ. ವಾಣಿಜ್ಯ ಸಂಕೀರ್ಣದ ಗೋಪುರದ ಭಾಗವನ್ನು ಯಥಾಸ್ಥಿತಿ ಹಾಗೆಯೇ ಉಳಿಸಿಕೊಳ್ಳಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗಬಹುದು.

ನಾವು ಹೊಸದಾಗಿ ಎಂಟು ಅಂತಸ್ತುಗಳ ಕಟ್ಟಡ ನಿರ್ಮಿಸಲಿರುವುದರಿಂದ ಆಸ್ತಿಯ ಮೌಲ್ಯ ಇನ್ನಷ್ಟು ಹೆಚ್ಚಲಿದೆ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry