ಸಾರ್ವಜನಿಕರಿಂದ ಮಾಹಿತಿ ಸಂಗ್ರಹಣೆ

7

ಸಾರ್ವಜನಿಕರಿಂದ ಮಾಹಿತಿ ಸಂಗ್ರಹಣೆ

Published:
Updated:

ಜಮಖಂಡಿ:  ಶಾಸಕ ಶ್ರೀಕಾಂತ ಕುಲಕರ್ಣಿ ಅವರ ಮನೆಯ ಮಾಹಿತಿ ಪಡೆಯುವ ಮೂಲಕ ಜಮಖಂಡಿ ನಗರದ ಹಾಗೂ ತಾಲ್ಲೂಕಿನ ಹುನ್ನೂರ ಗ್ರಾಮದ ಮನೆಯೊಂದರಲ್ಲಿ ಮಾಹಿತಿ ಸಂಗ್ರಹಿಸುವ ಮೂಲಕ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಜನಗಣತಿ ಕಾರ್ಯಕ್ಕೆ ಬುಧವಾರ ಚಾಲನೆ ದೊರಕಿತು.ತಹಸೀಲ್ದಾರ ಸಿದ್ದು ಹುಲ್ಲೋಳಿ (ಜಮಖಂಡಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶ), ಪೌರಾಯುಕ್ತ ಎಸ್.ಎಸ್. ಜಯಧರ (ಜಮಖಂಡಿ ನಗರ), ಪೌರಾಯುಕ್ತ ಚಿಕ್ಕಣ್ಣ (ರಬಕವಿ-ಬನಹಟ್ಟಿ ನಗರ) ಹಾಗೂ ಮುಖ್ಯಾಧಿಕಾರಿ ಗೋಪಾಲ ಕಾಸೆ (ತೇರದಾಳ ಪಟ್ಟಣ) ಜನಗಣತಿ ಕಾರ್ಯದ ಮೇಲುಸ್ತುವಾರಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಜನಗಣತಿಯಲ್ಲಿ ಹೆಣ್ಣು-ಗಂಡುಗಳ ಜೊತೆಗೆ ಇದೇ ಮೊದಲ ಬಾರಿಗೆ ಮಂಗಳಮುಖಿಗಳ  ಕುರಿತು ಪ್ರತ್ಯೇಕ ಮಾಹಿತಿ ಹಾಗೂ ಕಿವುಡರು, ಮೂಕರು, ಬುದ್ಧಿಮಾಂದ್ಯರು ಸೇರಿದಂತೆ ಎಲ್ಲಾ ತರಹದ ಅಂಗವಿಕಲರ ಕುರಿತು ‘ಅಂಗವಿಕಲರು’ ಎಂದು ಮಾಹಿತಿ ಸಂಗ್ರಹಿಸಲಾಗುವುದು ಎಂದು ಪೌರಾಯುಕ್ತ ಎಸ್.ಎಸ್.ಜಯಧರ ಹೇಳಿದರು.ಈ ತಿಂಗಳ 9 ರಿಂದ 28 ರ ವರೆಗೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಅಗತ್ಯ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪಡೆಯುವರು. ಫೆ.28 ರ ಸಂಜೆ 5 ಗಂಟೆಯಿಂದ ಮಧ್ಯರಾತ್ರಿ 12 ರ ವರೆಗೆ ಬಸ್ ನಿಲ್ದಾಣ, ಟೆಂಟ್‌ಗಳಲ್ಲಿ ಇರುವ ವಸತಿ ರಹಿತರ ಮಾಹಿತಿ ಸಂಗ್ರಹಿಸಲಾಗುವುದು.ಜನಗಣತಿ ನಡೆಯುವ ಅವಧಿಯಲ್ಲಿ ಸಭೆ ಸಮಾರಂಭಗಳನ್ನು ಸಂಪೂರ್ಣ ರದ್ದುಗೊಳಿಸಲಾಗುವುದು. ಒಂದು ಮಗು ಕೂಡ ಜನಗಣತಿ ಕಾರ್ಯದಿಂದ ವಂಚಿತರಾಗದಂತೆ ಕಾಳಜಿ ವಹಿಸಲಾಗುವುದು. ಗಣತಿದಾರರಿಗೆ ಯಾರೂ ತಪ್ಪು ಮಾಹಿತಿ ನೀಡಬಾರದು ಎಂದು ತಹಸೀಲ್ದಾರ ಸಿದ್ದು ಹುಲ್ಲೋಳಿ ಹೇಳಿದರು.ತಾಲ್ಲೂಕಿನ ಗ್ರಾಮಾಂತರ ಪ್ರದೇಶಕ್ಕಾಗಿ 492 ವಿಭಾಗಗಳನ್ನು ರಚಿಸಲಾಗಿದೆ. 63 ಮಂದಿ ಸುಪರವೈಸರ್‌ಗಳನ್ನು ನೇಮಕ ಮಾಡಲಾಗಿದೆ. ಒಟ್ಟು 515 ಸಿಬ್ಬಂದಿಗಳು ಕಾರ್ಯ ನಿರ್ವಹಿಸುವರು ಎಂದು ತಹಸೀಲ್ದಾರರು ವಿವರಿಸಿದರು. ಜನಗಣತಿ ಮಾಸ್ಟರ್ ಟ್ರೇನರ್ಸ್‌ಗಳಾದ ಬಿಎಲ್‌ಡಿಇಎ ಕಾಲೇಜಿನ ಉಪನ್ಯಾಸಕ ವಿನಾಯಕ ಕುಲಕರ್ಣಿ, ನಗರದ ಸರಕಾರಿ ಪಿ.ಬಿ.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಆರ್.ನಾಯಿಕೊಡೆ ಹಾಜರ ಇದ್ದರು.ಮನವಿ:
ಜನಗಣತಿಗಾಗಿ ಮನೆ ಮನೆಗೆ ಬರುವ ಗಣತಿದಾರರಿಗೆ ತಾಲ್ಲೂಕಿನ ಅಂಗವಿಕಲರು ‘ವಿಕಲ ಚೇತನರು’ ಎಂದು ಮಾಹಿತಿ ಪೂರೈಸಲು ತಾಲ್ಲೂಕು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ.ಭೂಮಾರ ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry