ಬುಧವಾರ, ಮೇ 12, 2021
18 °C

ಸಾರ್ವಜನಿಕರಿಗೆ ಲಭ್ಯವಾಗದ ಸಂತೆಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮರಿ: ದ್ವೀಪದ ಜನರ ಸಂತೆ ವ್ಯಾಪಾರಕ್ಕೆ ಅನುಕೂಲವಾಗುವಂತೆ ತುಮರಿ ಪಟ್ಟಣದಲ್ಲಿ ್ಙ 9 ಲಕ್ಷ ವೆಚ್ಚದಲ್ಲಿ  ಎಪಿಎಂಸಿ ಅನುದಾನದಲ್ಲಿ ನಿರ್ಮಾಣವಾದ ಸುಸಜ್ಜಿತ ಸಂತೆ ಮಳಿಗೆ ಸ್ಥಳೀಯ ತುಮರಿ ಗ್ರಾಮ ಪಂಚಾಯ್ತಿ ಬೇಜವಾಬ್ಧಾರಿಯಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ.ಮಳಿಗೆ ನಿರ್ಮಾಣವಾಗಿ ವರ್ಷವೇ ಕಳೆದಿದ್ದರೂ ಸಂಪೂರ್ಣ ಅನುದಾನ ಗುತ್ತಿಗೆದಾರರಿಗೆ ಸಂದಾಯವಾಗದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಳಿಗೆಯನ್ನು ಗ್ರಾಮ ಪಂಚಾಯ್ತಿಗೆ ಹಸ್ತಾಂತರಿಸಲು ಸಾಧ್ಯವಾಗದ ಬಗ್ಗೆ ಎಪಿಎಂಸಿ ಹಿರಿಯ ಅಧಿಕಾರಿಗಳು ವರ್ಷದ ಹಿಂದೆ ಅಸಮ್ಮತಿ ಸೂಚಿಸಿದ್ದರು.ಆದರೆ, ಈಚೆಯ ತಿಂಗಳಲ್ಲಿ ಕೆಲವು ಷರತ್ತುಗಳ ಮುಖಾಂತರ ಮಳಿಗೆಗಳನ್ನು ಹಸ್ತಾಂತರಿಸಲು ಗ್ರಾಮ ಪಂಚಾಯ್ತಿಗೆ ಸೂಚಿಸಿದ್ದಾಗ್ಯೂ ತುಮರಿ ಗ್ರಾಮ ಪಂಚಾಯ್ತಿ ಇಚ್ಛಾಶಕ್ತಿಯನ್ನು ತೋರದೇ ಸುಮ್ಮನೆ ಉಳಿದಿರುವುದೆ ಮಳಿಗೆ ಸೇವೆಗೆ ಅಲಭ್ಯವಾಗುವುದಕ್ಕೆ ಕಾರಣ ಎಂದು ಆರೋಪಿಸುತ್ತಾರೆ ಹೋಬಳಿಯ ನಾಗರಿಕರು.ಲಿಂಗನಮಕ್ಕಿ ಮುಳುಗಡೆಯ ಜತೆಗೆ, ಕರೂರು ಹೋಬಳಿ ದ್ವೀಪ ಪ್ರದೇಶದಲ್ಲಿ ವಾರದ ಸಂತೆ ಕೊನೆಗೊಂಡಿತ್ತು. ಸಂತೆಯ ಸಾಮಾನು ಖರೀದಿಸಲು ತಾಲ್ಲೂಕು ಕೇಂದ್ರವಾದ ಸಾಗರ ಪಟ್ಟಣವನ್ನು ಅವಲಂಬಿಸಿದ್ದರು. ಐದು ವರ್ಷದ ಹಿಂದೆ ತುಮರಿಯನ್ನು ಕೇಂದ್ರಿಕೃತವಾಗಿ ಶುಕ್ರವಾರ ಸಂತೆ ಆರಂಭಗೊಂಡಿತ್ತು.ಸಂತೆಗೆ ಸ್ಥಳಾವಕಾಶದ ಪ್ರಶ್ನೆ ಎದುರಾದಾಗ ಗ್ರಾಮ ಪಂಚಾಯ್ತಿ ಪಕ್ಕದ ಖಾಲಿ ಜಾಗದಲ್ಲಿ ಸಂತೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆದರೆ ಅಂದು ತಾತ್ಕಾಲಿಕವಾಗಿ ಸೂಚಿಸಿದ್ದ ಇಕ್ಕಟ್ಟಾದ ಸ್ಥಳದಲ್ಲೇ ಇಂದಿಗೂ ಸಂತೆ ಮುಂದುವರಿದಿದೆ.ಈಗಿನ ಇಕ್ಕಾಟದ ಪ್ರದೇಶದಲ್ಲಿ ಬೇರೆ ಬೇರೆ ಮಳಿಗೆಗೆಳನ್ನು ರೂಪಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಇದರ ಜತೆ, ಸೂಕ್ತ ಬೇಲಿ ವ್ಯವಸ್ಥೆ ಇಲ್ಲದ ಕಾರಣ ಬೀಡಾಡಿ ದನಗಳನ್ನು ಕಾಯ್ದುಕೊಳ್ಳುವುದೇ ವ್ಯಾಪಾರಿಗಳಿಗೆ ದೊಡ್ಡ ಕೆಲಸವಾಗುತ್ತದೆ.ಆದರೆ, ತುಮರಿ ಗ್ರಾಮ ಪಂಚಾಯ್ತಿ ನೆಲ ಬಾಡಿಗೆಯನ್ನು ವಸೂಲಿ ಮಾಡುತ್ತಿದೆ. ಆದರೆ, ಎಪಿಎಂಸಿ ಮಳಿಗೆಯಲ್ಲಿ ಅವಕಾಶ ನೀಡಿ ಎಂದು ವ್ಯಾಪಾರಿಗಳು ಬೇಡಿಕೆ ಇಟ್ಟರೂ ಪ್ರಯೋಜನ ಕಂಡಿಲ್ಲ.ನೂತನವಾಗಿ ನಿರ್ಮಾಣವಾದ ಸಂತೆ ಸುಸಜ್ಜಿತವಾಗಿದ್ದು, ಸುತ್ತಲೂ ಕಲ್ಲು ಬೇಲಿಯನ್ನು ನಿರ್ಮಿಸಲಾಗಿದೆ. ಸಮರ್ಪಕ ನೀರಿನ ವ್ಯವಸ್ಥೆ ಮಾಡಿ ಸಂತೆಯ ಸ್ಥಳವನ್ನು ಬದಲಾಯಿಸಬೇಕಾದ ಗ್ರಾಮ ಪಂಚಾಯ್ತಿ ಮೀನಮೇಷ ಎಣಿಸುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯ ಗ್ರಾಮಸ್ಥರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.