ಸಾರ್ವಜನಿಕವಾಗಿ ಕಾಣಿಸಿಕೊಂಡ ಪೋಪ್

7

ಸಾರ್ವಜನಿಕವಾಗಿ ಕಾಣಿಸಿಕೊಂಡ ಪೋಪ್

Published:
Updated:
ಸಾರ್ವಜನಿಕವಾಗಿ ಕಾಣಿಸಿಕೊಂಡ ಪೋಪ್

ವ್ಯಾಟಿಕನ್ (ಎಎಫ್‌ಪಿ): ಕ್ರೈಸ್ತರ ಪರಮೋಚ್ಚ ಧರ್ಮಗುರು 16ನೇ ಪೋಪ್ ಬೆನೆಡಿಕ್ಟ್, ಪದತ್ಯಾಗ ಮಾಡುವುದಾಗಿ ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ಇಲ್ಲಿನ  ಸೇಂಟ್ ಪೀಟರ್ಸ್‌ ಚೌಕದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.ಧರ್ಮಗುರುವನ್ನು ಬೀಳ್ಕೊಡುವ ಸಲುವಾಗಿ ಇಲ್ಲಿನ ಸೇಂಟ್ ಪೀಟರ್ಸ್‌ ಬೆಸಿಲಿಕಾದಲ್ಲಿ ನೆರೆದಿದ್ದ ಸಾವಿರಾರು ಕ್ರೈಸ್ತ ಬಾಂಧವರೊಂದಿಗೆ ಪೋಪ್ ಅವರು, ಬುಧವಾರ ಮಧ್ಯಾಹ್ನ 2 ಗಂಟೆಗೆ `ಬೂದಿ ಬುಧವಾರ' ಆಚರಿಸಿದರು. ಕ್ರೈಸ್ತ ಧರ್ಮದ ಅತ್ಯುನ್ನತ ಹುದ್ದೆಯಲ್ಲಿರುವ ಅವರು ಇದೇ ಕೊನೆಯ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.2005ರಲ್ಲಿ 16ನೇ ಪೋಪ್ ಸ್ಥಾನಕ್ಕೇರಿದ್ದ ಬೆನೆಡಿಕ್ಟ್ ಅವರು, ವೃದ್ಧಾಪ್ಯದ ಕಾರಣದಿಂದಾಗಿ ಪದತ್ಯಾಗ ಮಾಡುವುದಾಗಿ ಸೋಮವಾರ ಕಾರ್ಡಿನಲ್‌ಗಳ ಸಭೆಯಲ್ಲಿ ತಿಳಿಸಿದ್ದರು.

ಪೋಪ್ ಆಯ್ಕೆಗೆ ಭಾರತದ ಐವರು

ತ್ರಿಶೂರ್ (ಪಿಟಿಐ): ನೂತನ ಪೋಪ್ ಆಯ್ಕೆ ಸಂಬಂಧ ವ್ಯಾಟಿಕನ್‌ನಲ್ಲಿ ಮಾರ್ಚ್ 24ರಿಂದ ಆರಂಭವಾಗಲಿರುವ ನಿರ್ಣಾಯಕ ಸಭೆಯಲ್ಲಿ ಭಾರತದ ಐದು ಮಂದಿ ಕಾರ್ಡಿನಲ್‌ಗಳು ಭಾಗವಹಿಸಲಿದ್ದಾರೆ.

ಆರ್ಚ್ ಬಿಷಪ್‌ಗಳಾದ ಟೆಲೆಸ್ ಪೋರ್ ಟೋಪ್ಪೊ (ಪಟ್ನಾ ಆರ್ಚ್‌ಬಿಷಪ್), ಓಸ್ವಾಲ್ಡ್ ಗ್ರೇಷಿಯಸ್ (ಮುಂಬೈ ಆರ್ಚ್‌ಬಿಷಪ್), ಮಾರ್ ಜಾರ್ಜ್ ಆಲಂಚೇರಿ (ಸೀರೋ ಮಲಬಾರ್), ಮಾರ್ ಬೆಸೇಲಿಯೊಸ್ ಕ್ಲಿಮೀಸ್ (ಸೀರೋ ಮಲಂಕರ) ಮತ್ತು ಐವಾನ್ ಡಯಾಸ್ (ಮುಂಬೈ ಮಾಜಿ ಆರ್ಚ್‌ಬಿಷಪ್) ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇರಳ ಕ್ಯಾಥಲಿಕ್ ಬಿಷಪ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ  ಸ್ಟೀಫನ್ ಆಲತ್ತರ ತಿಳಿಸಿದ್ದಾರೆ.ವಿಶ್ವ ಕ್ಯಾಥಲಿಕ್ ಚರ್ಚ್‌ನ 206 ಕಾರ್ಡಿನಲ್‌ಗಳ ಪೈಕಿ, 117 ಮಂದಿ ಮಾತ್ರ ಪೋಪ್ ಆಯ್ಕೆ ವೇಳೆ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಈ ಪೈಕಿ ಭಾರತದಿಂದ ತೆರಳುತ್ತಿರುವ ಎಲ್ಲಾ ಐವರೂ ಮತದಾನದ ಅರ್ಹತೆ ಪಡೆದಿದ್ದಾರೆ. ಚರ್ಚ್‌ನ ಎರಡು ಸಹಸ್ರ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ  ಭಾರತದಿಂದ ಒಟ್ಟು ಐವರು ಕಾರ್ಡಿನಲ್‌ಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry