ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ

7

ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ

Published:
Updated:

ಕುಂದಾಪುರ: ಕುಂದಾಪುರ ಪರಿಸರದಲ್ಲಿ ಹಾದು ಹೋಗುವ ಪ್ರಸ್ತಾವಿತ ರಾಷ್ಟ್ರೀಯ ಹೆದ್ದಾರಿ 17 ರ ಚತುಷ್ಪಥ ರಸ್ತೆಯ ಕಾಮಗಾರಿಯಲ್ಲಿ ಅನುಷ್ಠಾನಗೊಳ್ಳಲು ಉದ್ದೇಶಿಸಿರುವ ಎಂಬ್ಯಾಕ್‌ಮೆಂಟ್ ರಚನೆಯ ಬದಲು ಪರ್ಯಾಯ ರಚನೆ ಕೈಗೊಳ್ಳಲು ಸಾರ್ವಜನಿಕರಿಂದ ಬಂದ ಅಭಿಪ್ರಾಯ ಗಣನೆಗೆ ತೆಗೆದುಕೊಂಡು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕೇಂದ್ರದ ಭೂಸಾರಿಗೆ ಸಹಾಯಕ ಸಚಿವ ಜಿತಿನ್ ಪ್ರಸಾದ್ ಹೇಳಿದರು.ಭಾನುವಾರ ರಾತ್ರಿ ಪಟ್ಟಣದ ಶಾಸ್ತ್ರಿ ಸರ್ಕಲ್ ಬಳಿಯ ಬಂಟರ ಯಾನೆ ನಾಡವರ ಸಂಘದ ಸಂಕೀರ್ಣಕ್ಕೆ ಭೇಟಿ ನೀಡಿ, ಚತುಷ್ಪಥ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಬಳಿಕ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.ಸಚಿವರೊಂದಿಗೆ ಯೋಜನೆ ಕುರಿತು ವಿಸ್ತ್ರತ ಚರ್ಚೆ ನಡೆಸಿದ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಉದ್ಯಮಿ ಅಭಿನಂದನ್ ಶೆಟ್ಟಿ ಪಟ್ಟಣ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಎಂಬ್ಯಾಕ್‌ಮೆಂಟ್ ರಚನೆಯಿಂದಾಗಿ ಜಿಲ್ಲೆಯ ಏಕೈಕ ಕಂದಾಯ ಉಪವಿಭಾಗ ಹಾಗೂ ಪುರಸಭಾ ಕೇಂದ್ರ ಹೊಂದಿರುವ ಕುಂದಾಪುರದ ಸೌಂದರ್ಯ ಕೆಡುವುದರ ಜತೆಯಲ್ಲಿ ಪಟ್ಟಣ ಇಬ್ಬಾಗವಾಗಲಿದೆ. ಬೆಳೆಯುತ್ತಿರುವ ಪಟ್ಟಣದ ಅಭಿವೃದ್ದಿಗೆ ಹಿನ್ನಡೆಯಾಗುತ್ತದೆ. ತಡೆಗೋಡೆ ರಚನೆಯಿಂದಾಗಿ ಜನರ ಸುಗಮ ಸಂಚಾರಕ್ಕೂ ತಡೆಯುಂಟಾಗುತ್ತದೆ. ಪ್ರಸ್ತಾವಿತ ಎಂಬ್ಯಾಕ್ ರಚನೆ ಕೈಬಿಟ್ಟು ಮೇಲ್ಸೇತುವೆ ರಚನೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಿ ಮಾತನಾಡಿದ ಸಚಿವ ಪ್ರಸಾದ್, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಸಲಹೆಯ ಮೇರೆಗೆ ಯೋಜನೆ ಕುರಿತು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಸ್ವತ: ಸ್ಥಳ ಪರಿಶೀಲನೆ ನಡೆಸಲು ಆಗಮಿಸಿದ್ದೇನೆ. ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳುವ ಸಂದರ್ಭದಲ್ಲಿಯೂ ವಿಭಿನ್ನವಾದ ಅಭಿಪ್ರಾಯಗಳಿರುತ್ತವೆ. ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತದೆ. ಪ್ರತಿಯೊಂದು ಯೋಜನೆಯ ಸಾಧಕ-ಬಾಧಕ ಗಣನೆಗೆ ತೆಗೆದುಕೊಳ್ಳಲಾಗುವುದು. ಕುಂದಾಪುರದಲ್ಲಿ ಪ್ರಸ್ತಾಪಿಸಲಾದ ಯೋಜನೆಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಗಣನೆಗೆ ತೆಗೆದುಕೊಂಡು ಸಮಷ್ಠಿ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು ಎಂದು ಭರವಸೆ ನೀಡಿದರು.ಕಾಂಗ್ರೆಸ್ ಮುಖಂಡ ಎಂ.ಎ ಗಫೂರ್, ಹೆದ್ದಾರಿ ಹೋರಾಟ ಸಮಿತಿಯ ಕೆಂಚನೂರು ಸೋಮಶೇಖರ ಶೆಟ್ಟಿ, ಬಂಟರ ಯಾನೆ ನಾಡವರ ಸಂಘದ ಸಂಪಿಗೇಡಿ ಸಂಜೀವ ಶೆಟ್ಟಿ, ಸುಧಾಕರ ಶೆಟ್ಟಿ ಬಾಂಡ್ಯಾ, ಆವರ್ಸೆ ಸುಧಾಕರ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ವಿಕಾಸ್ ಹೆಗ್ಡೆ, ರವೀಂದ್ರ ಕಾವೇರಿ, ಡಾ.ಪ್ರೇಮಾನಂದ, ಸುರೇಶ್ ಮಲ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry