ಶುಕ್ರವಾರ, ಜೂನ್ 18, 2021
28 °C

ಸಾರ್ವಜನಿಕ ಶಿಕ್ಷಣ ಇಲಾಖೆ ವಿನೂತನ ಪ್ರಯೋಗ

ಪ್ರಜಾವಾಣಿ ವಾರ್ತೆ/ವಿಜಯ್ ಹೂಗಾರ Updated:

ಅಕ್ಷರ ಗಾತ್ರ : | |

ಹಾವೇರಿ: `ಮಕ್ಕಳಿಗೆ ಮನೆಗೆಲಸ ಮಾಡಲು ಹಚ್ಚುತ್ತಿದ್ದೀರಾ? ದಿನವೊಂದಕ್ಕೆ ಎಷ್ಟು ತಾಸು ಕೆಲಸದಲ್ಲಿ ಪಾಲ್ಗೊಳ್ಳುತ್ತಾರೆ? ಮಕ್ಕಳ ಜತೆ ಕುಳಿತುಕೊಂಡು ಟಿವಿ ನೋಡುತ್ತೀರಾ ಅಥವಾ ಅವರಿಗೆ ಎಷ್ಟು ಗಂಟೆ ಟಿವಿ ನೋಡಲು ಅವಕಾಶ ನೀಡುತ್ತೀರಾ? ಅವರು ಆಡವಾಡುವ ಸಮಯವೆಷ್ಟು ? ಓದಲು ಮುಕ್ತವಾದ ವಾತವರಣ ಮನೆಯಲ್ಲಿದೆಯಾ? ಎಷ್ಟು ಸಮಯ ಅವರು ಸ್ವಯಂ ಪ್ರೇರಣೆಯಿಂದ ಓದುತ್ತಿದ್ದಾರೆ ಎಂಬುದನ್ನು ಗಮನಿಸಿದ್ದೀರಾ..?ಶಿಕ್ಷಣ ಇಲಾಖೆ ಅಧಿಕಾರಿಗಳು ಒಂದರ ಮೇಲೊಂದು ಈ ತರಹದ ತರಾವರಿ ಪ್ರಶ್ನೆಗಳನ್ನು ಕೇಳಿರುವುದು ಬೇರಾರಿಗೂ ಅಲ್ಲ. ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕುಳಿತುಕೊಳ್ಳುವ ಜಿಲ್ಲೆಯ ವಿದ್ಯಾರ್ಥಿಗಳ ತಾಯಂದಿರಿಗೆ.ಹೌದು. ಶಿಕ್ಷಣದ ಗುಣಮಟ್ಟ ಹಾಗೂ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿನೂತನವಾಗಿ ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲಿ ನಡೆಸಿದ `ತಾಯಂದಿರ ಸಭೆ~ಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಕ್ಕಳ ಓದಿಗೆ ಪೂರಕ ವಾತಾವರಣ ಇದೆಯೋ ಇಲ್ಲವೋ, ಇಲ್ಲದಿದ್ದರೆ, ಅದನ್ನು ಹೇಗೆ ನಿರ್ಮಿಸಿಕೊಡಬೇಕೆಂಬ ಸೂಕ್ತ ಸಲಹೆ ಸೂಚನೆಗಳನ್ನು ನೀಡುವ ಉದ್ದೇಶವಿಟ್ಟುಕೊಂಡು ಪ್ರತಿಯೊಬ್ಬ ತಾಯಂದಿರಿಗೆ ಈ ರೀತಿಯ ಪ್ರಶ್ನೆಗಳ ಸುರಿಮಳೆಗೈದರು.ಪ್ರತಿಯೊಂದು ಮಗುವಿನ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಅದನ್ನು ಸುಲಲಿತವಾಗಿ ದಾಟಿದರೆ, ಆ ಮಗುವಿನ ವಿದ್ಯಾಭ್ಯಾಸ ಕೂಡಾ ಯಾವುದೇ ಅಡೆತಡೆ ಇಲ್ಲದೇ ಮುಂದೆ ಸಾಗಲಿದೆ. `ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲು ಗುರು~ ಆಗಿದ್ದರಿಂದ ಪ್ರಪ್ರಥಮ ಬಾರಿಗೆ ಜಿಲ್ಲೆಯಾದ್ಯಂತ ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಓದುವ ವಿದ್ಯಾರ್ಥಿಗಳ `ತಾಯಂದಿರ ಸಭೆ~ ಆಯೋಜಿಸಿತ್ತು.ಆಯಾ ತಾಲ್ಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಪ್ರೌಢಶಾಲೆ ವ್ಯಾಪ್ತಿಯ ತಾಯಂದಿರನ್ನು ಶಾಲೆಗೆ ಕರೆಸಿ ಅವರ ಜತೆ ಮುಕ್ತ ಚರ್ಚೆ ನಡೆಸುವುದು ಹಾಗೂ ಮಕ್ಕಳು ಯಾವ ರೀತಿ ಓದುತ್ತಾರೆ. ಅವರಿಗೆ ಮನೆಯಲ್ಲಿ ಓದಲು ಅನುಕೂಲಕರ ಪರಿಸ್ಥಿತಿಯಿದೆಯೇ ಎಂಬದನ್ನು ತಿಳಿದುಕೊಂಡು, ಅದಿಲ್ಲದಿದ್ದರೆ, ಅದನ್ನು ಹೇಗೆ ಸೃಷ್ಟಿಸಿಕೊಡಬೇಕು ಎಂಬ ಸಲಹೆ ನೀಡುವುದೇ ಈ ಸಭೆಯ ಮುಖ್ಯ ಉದ್ದೇಶ.ಬಹುತೇಕ ತಾಯಂದಿರುವ ಮನೆಯಲ್ಲಿ ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಿದ್ದಾಗ ಗದ್ದಲದಿಂದ ಮಕ್ಕಳ ಓದಿಗೆ ತೊಂದರೆಯಾಗಲಿದೆ. ತಮ್ಮ ಮಕ್ಕಳು ಬೆಳಿಗ್ಗೆ ಏಳಲು ನಿರಾಕರಿಸುತ್ತಾರೆ. ಓದಿಗಿಂತ ಟಿವಿ ಹಾಗೂ ಆಟದ ಕಡೆಯೇ ಹೆಚ್ಚು ಗಮನ ಹರಿಸುತ್ತಾರೆ ಎಂಬುದನ್ನು ಒಪ್ಪಿಕೊಂಡರು.

 

ಈ ಸಂದರ್ಭದಲ್ಲಿ ಅಧಿಕಾರಿಗಳು, ಓದಲು ಸಮಯ ನಿಗದಿ ಮಾಡಬೇಕು. ಆ ಸಮಯದಲ್ಲಿ ಮನೆವರು ಬೇರೆ ಬೇರೆ ಕೆಲಸದಲ್ಲಿ ತೊಡಗಿಕೊಂಡು ಮಕ್ಕಳಿಗೆ ಓದಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ಓದುವ ವಾತವರಣ ಇಲ್ಲದಿದ್ದಾಗ ಓದುವ ವಾತಾವರಣ ಇರುವ ಅವರ ಸ್ನೇಹಿತರ ಹಾಗೂ ಸ್ನೇಹಿತೆಯರ ಮನೆಗೆ ಕಳುಹಿಸಬೇಕು.ಬೆಳಿಗ್ಗೆ ಏಳುವ ಸಮಸ್ಯೆಯಿದ್ದರೆ, ರಾತ್ರಿ ಬೇಗ ಮಲಗಿಸಲು ಅವಕಾಶ ನೀಡಿ ಇಲ್ಲವೇ ಅವರ ಸ್ನೇಹಿತರಿಂದ ಮೊಬೈಲ್ ಇಲ್ಲವೇ ದೂರವಾಣಿ ಮೂಲಕ ಸಂಪರ್ಕ ಮಾಡುವಂತೆ ತಿಳಿಸಬೇಕು. ಸ್ನೇಹಿತರು ಓದಲು ಎದ್ದಿದ್ದಾರೆ ಎಂದರೆ ಅದರಿಂದ ಸ್ಪೂರ್ತಿಗೊಂಡು ನಿಮ್ಮ ಮಕ್ಕಳು ಏಳುತ್ತಾರೆ. ಮನೆಯವರು ಕೂಡಾ ಟಿವಿ ನೋಡುವುದನ್ನು ಕಡಿಮೆಗೊಳಿಸಿ ಎಂಬಿತ್ಯಾದಿ ಸಲಹೆಗಳನ್ನು ನೀಡಿದರಲ್ಲದೇ ಮಕ್ಕಳು ಎಷ್ಟು ಹೊತ್ತು ಓದುತ್ತಾರೆ ಎನ್ನುವುದಕ್ಕಿಂತ ಓದಿದ್ದನ್ನು ಎಷ್ಟು ತಿಳಿದುಕೊಳ್ಳುತ್ತಾರೆ ಎಂಬುದರ ಬಗ್ಗೆ ಪಾಲಕರು ಗಮನಹರಿಸಲು ವಿನಂತಿಸಿದರು.ಅತ್ಯಂತ ಯಶಸ್ವಿ: ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ತಾಯಂದಿರ ಸಭೆಗಳನ್ನು ನಡೆಸಲಾಗಿದ್ದು, ವಿನೂತನವಾಗಿ ನಡೆಸಿದ ಈ ಸಭೆಗಳಿಂದ ಮಕ್ಕಳ ಓದಿಗೆ ಸಾಕಷ್ಟು ಸಹಕಾರಿಯಾಗಿದೆ ಎಂಬ ಮಾತುಗಳು ಸಭೆಯಲ್ಲಿ ಭಾಗವಹಿಸಿದ ತಾಯಂದಿರಿಂದ ಕೇಳಿ ಬರುತ್ತಿವೆ. ಜಿಲ್ಲೆಯಲ್ಲಿ ನಡೆಸಿದ ಈ ವಿನೂತನ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ.ಇದರ ಜತೆಗೆ ಶಿಕ್ಷಕರ ಮನೆ ಮನೆ ಭೇಟಿ, ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಶಾಲಾ ಅವಧಿ ಮುನ್ನ ಹಾಗೂ ನಂತರ ವಿಶೇಷ ತರಗತಿಗಳು, ಮಕ್ಕಳ ಗುಂಪು ಚರ್ಚೆ, ಪರೀಕ್ಷೆ ಎದುರಿಸುವ ಬಗೆ ಕುರಿತು ಕಾರ್ಯಾಗಾರ, ಹಿಂದಿನ ಪ್ರಶ್ನೆ ಪತ್ರಿಗಳನ್ನು ಬಿಡಿಸುವುದು. ವಿಷಯವಾರು ಸಂಘಗಳ ಮೂಲಕ ವಿಷಯಗಳ ಬಲವರ್ದನೆ ಸೇರಿದಂತೆ ಅನೇಕ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಡ್ಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.