ಸೋಮವಾರ, ಜೂನ್ 14, 2021
25 °C

ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಹಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ:  ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಕಟ್ಟಡ, ಶಾಲಾ– ಕಾಲೇಜಿನ ಗೋಡೆಗಳು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಉಲ್ಲಂಘಿಸಿ ಭಿತ್ತಿಪತ್ರ ಅಂಟಿಸುವ ಹಾವಳಿ ಉಲ್ಬಣ ಗೊಂಡಿದ್ದು, ನಗರ ಸ್ಥಳೀಯ ಆಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.ಒಮ್ಮೆ ನಗರದ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿದರೆ ಖಾಸಗಿ ವ್ಯಕ್ತಿಗಳು, ಸಂಘ–ಸಂಸ್ಥೆಗಳು ಮನಸೋ ಇಚ್ಛೆಯಾಗಿ ತಮ್ಮ ಬಗ್ಗೆ ಪ್ರಚಾರ ಸಾರುವ ಭಿತ್ತಿಪತ್ರ, ಬ್ಯಾನರ್‌, ಕರಪತ್ರಗಳನ್ನು ಗೋಡೆಗಳು, ನಾಮಫಲಕಗಳಿಗೆ ಅಂಟಿಸಿ ವಿರೂಪ ಗೊಳಿಸುತ್ತಿರುವುದು ಕಂಡುಬರುತ್ತದೆ.ಸರ್ಕಾರ ಹಾಗೂ ಪೌರಾಡಳಿತ ನಿರ್ದೇಶನಾಲಯದ ಆದೇಶನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರ ಅಂಟಿಸುವಂತಿಲ್ಲ. ಜತೆಗೆ, ಸರ್ಕಾರಿ ಕಟ್ಟಡ, ಗೋಡೆಗಳ ಮೇಲೆ ಯಾವುದೇ ಬರಹ ಬರೆಯುವಂತಿಲ್ಲ. ಆದರೆ, ಈ ನಿಯಮವನ್ನು ಜಿಲ್ಲಾ ಕೇಂದ್ರದಲ್ಲಿ ಎಗ್ಗಿಲ್ಲದೆ ಉಲ್ಲಂಘಿಸಲಾಗುತ್ತಿದೆ.ಇದಕ್ಕೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಗೋಡೆಗಳು ಸಾಕ್ಷಿಯಾಗಿವೆ. ಗೋಡೆಯ ಮೇಲೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಬರೆದಿದ್ದ ಬರಹಗಳ ಮೇಲೆಯೇ ಸಿನಿಮಾ ಪೋಸ್ಟರ್‌ ಸೇರಿದಂತೆ ಹಲವು ಭಿತ್ತಿಪತ್ರ ಅಂಟಿಸಲಾಗಿದೆ. ಅಶ್ಲೀಲ ಸಿನಿಮಾ ಚಿತ್ರಗಳು ಕೂಡ ಗೋಡೆಯಲ್ಲಿ ರಾರಾಜಿಸುತ್ತಿವೆ.ಆದರೆ, ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ಕ್ರಮಕೈಗೊಂಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಪೋಸ್ಟರ್‌ ಅಂಟಿಸಲು ನಿಷೇಧ ಹೇರಲಾಗಿದೆ. ನಿಯಮ ಉಲ್ಲಂಘಿಸಿದರೆ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವೂ ಇದೆ. ಆದರೆ, ಆದೇಶ ಪಾಲನೆಯಾಗುತ್ತಿಲ್ಲ ಎಂಬುದು ನಾಗರಿಕರ ಆರೋಪ.ಮತ್ತೊಂದೆಡೆ ಬಡಾವಣೆಗಳಲ್ಲಿ ಅಳವಡಿಸಿರುವ ನಾಮಫಲಕಗಳನ್ನು ಕೂಡ ವಿರೂಪಗೊಳಿಸಲಾಗುತ್ತಿದೆ. ಮುಖ್ಯರಸ್ತೆ, ಅಡ್ಡರಸ್ತೆ ತೋರಿಸುವ ಸಣ್ಣ ನಾಮಫಲಕಗಳಿಗೂ ಕರಪತ್ರ ಅಂಟಿಸಲಾಗಿದೆ. ಪರ ಊರುಗಳಿಂದ ಬರುವ ಅತಿಥಿಗಳು ವಿಳಾಸಕ್ಕೆ ಹುಡುಕಾಟ ನಡೆಸುವಂತಾಗಿದೆ.‘ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಸಿನಿಮಾ ಪೋಸ್ಟರ್‌ ಸೇರಿದಂತೆ ಬಡಾವಣೆಗಳ ನಾಮಫಲಕಗಳಿಗೆ ವಿವಿಧ ಜಾಹೀರಾತು ಪತ್ರಗಳನ್ನು ಅಂಟಿಸುವುದರಿಂದ ಜನರು ತೊಂದರೆ ಅನುಭವಿಸುತ್ತಾರೆ. ಈ ಬಗ್ಗೆ ನಗರಸಭೆ ಆಡಳಿತ ಗಮನಹರಿಸಬೇಕಿದೆ. ಈ ಹಾವಳಿ ತಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿ ಸುತ್ತಾರೆ ಹಿರಿಯ ನಾಗರಿಕ ಶಿವಬಸಪ್ಪ.ಜತೆಗೆ, ಎಲ್ಲ ಬಡಾವಣೆಗಳಿಗೆ ಸೂಕ್ತ ನಾಮಫಲಕ ಅಳವಡಿಸಬೇಕು. ಮುಖ್ಯರಸ್ತೆಗಳಿಗೆ ಸಾಂಸ್ಕೃತಿಕ ನಾಯಕರ ಹೆಸರನ್ನು ನಾಮಕರಣ ಮಾಡಬೇಕು. ಈ ನಿಟ್ಟಿನಲ್ಲಿ ನಗರಸಭೆ ಆಡಳಿತ ಕೂಡಲೇ ಕ್ರಮವಹಿಸಬೇಕು ಎಂಬುದು ಅವರ ಆಗ್ರಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.