ಸೋಮವಾರ, ಜನವರಿ 20, 2020
26 °C

ಸಾಲಗಾರರ ಒತ್ತಡ: ಒಂದೇ ಕುಟುಂಬದ ಐವರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಒಂದೇ ಕುಟುಂಬದ ಐವರು ವಿಷಪ್ರಾಶನ ಮಾಡಿ, ಒಂದೇ ತೊಲೆಗೆ ನೇಣು ಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ತೆಳ್ಳನೂರು ಸಮೀಪದ ಬೊಳ್ಳೇಗೌಡನ ದೊಡ್ಡಿ ಶಿವಮಲ್ಲೇಗೌಡರ ತೋಟದ ಮನೆಯಲ್ಲಿ ಮಂಗಳವಾರ ನಡೆದಿದೆ.ಜಾವಿದ್ ಪಾಷ (48), ಪತ್ನಿ ಶಕೀಲಾಬಾನು (35), ಹೆಣ್ಣುಮಕ್ಕಳಾದ ಯಸ್ಮಿನ್‌ತಾಜ್ (22), ತಸ್ಮಿನ್ ತಾಜ್ ಅಲಿಯಾಸ್ ಮಿನ್ನಾ (17) ಹಾಗೂ ಮಗ ಮುಜಾಯಿದ್ ಪಾಷ ಅಲಿಯಾಸ್ ಶೈಭು (20) ನೇಣು ಬಿಗಿದುಕೊಂಡು ಮೃತಪಟ್ಟಿರುವ ದುರ್ದೈವಿಗಳು.ಸಾಲದ ಹಣ ಕೊಡುವಂತೆ ಕೆಲವರು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ತಮ್ಮ ತಂದೆ, ತಾಯಿ, ಸಹೋದರ, ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಾವಿದ್ ಪಾಷರ ಮತ್ತೊಬ್ಬ ಮಗ ಸುಲ್ತಾನ್ ಪಾಷ ಪೊಲೀಸರಿಗೆ ದೂರು ನೀಡಿದ್ದಾರೆ.ಮೃತರು ಬರೆದಿಟ್ಟಿದ್ದ ಪತ್ರವೊಂದನ್ನು ಸ್ಥಳದಲ್ಲಿ ಪೋಲೀಸರು ವಶಪಡಿಸಿಕೊಂಡಿದ್ದು, ಮೃತರು ತಮ್ಮ ಸಾವಿಗೆ ಬೇರೆ ಯಾರೂ ಕಾರಣರಲ್ಲ, ಸಾಲದ ಹೊರೆ ತಾಳಲಾರದೆ ತಾವೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಬರೆದುಕೊಂಡಿದ್ದಾರೆ ಎಂದು ತಿಳಿಸಿದರು.ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಕಾಡ್ಗಿಚ್ಚಿನಂತೆ ಹಬ್ಬಿ, ಸುತ್ತಮುತ್ತಲ ಗ್ರಾಮಗಳಿಂದ ಜನರು ತೋಟದ ಮನೆಯತ್ತ ಜಮಾಯಿಸಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿತ್ತು.ಸಾಂತ್ವನ: ಶಾಸಕ ಆರ್. ನರೇಂದ್ರ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ್, ಡಿವೈಎಸ್‌ಪಿ ಮಹದೇವಯ್ಯ, ವೃತ್ತ ನಿರೀಕ್ಷಕ ರವಿನಾಯಕ್ ಜೊತೆಯಲ್ಲಿ ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ತಹಶೀಲ್ದಾರ್ ಸುರೇಶ್‌ಕುಮಾರ್, ಐಜಿ ಎ.ಎಸ್.ಎನ್. ಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)