ಸಾಲದ ಋಣ ರೈತನಿಗೆ, ಹಣ ಮಧ್ಯವರ್ತಿಯ ಪತ್ನಿಗೆ!

7

ಸಾಲದ ಋಣ ರೈತನಿಗೆ, ಹಣ ಮಧ್ಯವರ್ತಿಯ ಪತ್ನಿಗೆ!

Published:
Updated:

ಮೈಸೂರು: ಬ್ಯಾಂಕ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ರೈತನ ಖಾತೆಗೆ ‘ಸಾಲ’ದ ಋಣವನ್ನು ಮಾತ್ರ ಜಮಾ ಮಾಡಿ, ಹಣವನ್ನು ಸಾಲ ಕೊಡಿಸಿದ ಮಧ್ಯವರ್ತಿಯ ಪತ್ನಿಗೆ ನೀಡಿದರೆ ಹೇಗೆ?ಹೌದು. ಆಶ್ಚರ್ಯವಾದರೂ ಇದು ನಿಜ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ, ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ರೈತನಿಗೆ ಸಾಲ ಮಂಜೂರು ಮಾಡಿ ಹಣ ನೀಡದೆ ವಂಚನೆ ಮಾಡಿದೆ. ಅಲ್ಲದೆ, ಆತನ ಖಾತೆಯಲ್ಲಿರುವ ಹಣವನ್ನು ಸಾಲ ಕೊಡಿಸಿದ ಮಧ್ಯವರ್ತಿಯ ಪತ್ನಿಯ ಖಾತೆಗೆ ಜಮಾ ಮಾಡಿದೆ.ಎಚ್.ಡಿ.ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದ ರೈತ ಶಿವರಾಜು ವಂಚನೆ ಒಳಗಾದವರು. ಅವರು ಕ್ಯಾತನಹಳ್ಳಿಯ ಕಾವೇರಿ ಕಲ್ಪತರು ಬ್ಯಾಂಕಿನಲ್ಲಿ 2010ರ ಜುಲೈ 23ರಂದು ರೂ.1.72ಲಕ್ಷ ಸಾಲ ಪಡೆದುಕೊಂಡಿದ್ದರು. ಸಾಲ ಮಂಜೂರಿ ಮಾಡಿದ ತಕ್ಷಣ ರೈತನ ಖಾತೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಹಣ ಜಮಾ ಮಾಡಿದ್ದರು.ಆದರೆ, ಬ್ಯಾಂಕಿನ ಕ್ಷೇತ್ರ ಅಧಿಕಾರಿ ಜಯರಾಜ್ ಎಂಬವರು, ಮುಖ್ಯ ವ್ಯವಸ್ಥಾಪಕರು ರಜೆಯಲ್ಲಿದ್ದಾಗ ಪ್ರಭಾರಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭ ಬಳಸಿಕೊಂಡು ಸಾಲ ಮಂಜೂರಾತಿ ಮಾಡುವಾಗ ಶಿವರಾಜ್ ಅವರಿಂದ ಖಾಲಿ ಚೆಕ್‌ಗೆ ಸಹಿ ಹಾಕಿಸಿಕೊಂಡಿದ್ದರು. ಆ ಚೆಕ್ ಅನ್ನು ಬಳಸಿಕೊಂಡು ರೂ.1.69 ಲಕ್ಷ ಹಣವನ್ನು ಖಾತೆ ಸಂಖ್ಯೆ 312, 316ಕ್ಕೆ 2010ರ ಜುಲೈ 27ರಂದು ಜಮಾ ಮಾಡಿದ್ದಾರೆ. ಅಲ್ಲದೆ ರೈತನಿಗೆ ಸಾಲ ಮಂಜೂರಾದ ಐದು ತಿಂಗಳ ನಂತರ ಪಾಸ್‌ಬುಕ್ ವಿತರಣೆ ಮಾಡಿದ್ದಾರೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರೈತ ಶಿವರಾಜು, ‘ದೊಡ್ಡಅರಸೇಗೌಡ ಎಂಬವರು ನನಗೆ ಸಾಲ ಕೊಡಿಸುವುದಾಗಿ ಹೇಳಿ ಮಧ್ಯಸ್ಥಿಕೆ ವಹಿಸಿದ್ದರು. 6.31 ಎಕರೆ ಜಮೀನಿನ ದಾಖಲಾತಿಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಮಂಜೂರಿ ಮಾಡಿಸಿದ್ದರು. ನಾನು ಕೇಳಿದಾಗಲೆಲ್ಲ ಇಂದು ಬಾ, ನಾಳೆ ಬಾ, ಹಣ ಕೊಡಿಸುತ್ತೇನೆ ಎಂದು ಹೇಳುತ್ತಿದ್ದರು. ಆದರೆ, ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ’ ಎಂದು ತಿಳಿಸಿದರು.‘ಈ ಕುರಿತು ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಿಗೆ 2010ರ ಡಿಸೆಂಬರ್ 25ರಂದು ದೂರು ಸಲ್ಲಿಸಲಾಯಿತು. ನಂತರದ ಬೆಳವಣಿಗೆಯಲ್ಲಿ 2011ರ ಜನವರಿ 4ರಂದು ನನ್ನ ಖಾತೆಗೆ ಜಯರಾಜ್ ಅವರು ರೂ.1.18 ಲಕ್ಷ ಹಣವನ್ನು ಜಮಾ ಮಾಡಿದ್ದಾರೆ. ಆದರೆ, ಉಳಿದ ರೂ.51 ಹಣವನ್ನು ಸಾಲದ ಮಂಜೂರಾತಿ ಖರ್ಚಿಗಾಗಿ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೇ, ಖಾತೆಯಲ್ಲಿರುವ ಹಣವನ್ನು ಪಾವತಿ ಮಾಡಲು ನಿರಾಕರಿಸಿ, ಉಳಿದ ರೂ.51 ಸಾವಿರ ಹಣ ಮತ್ತು ಬಡ್ಡಿಯನ್ನು ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry