ಗುರುವಾರ , ಆಗಸ್ಟ್ 22, 2019
26 °C

ಸಾಲದ ಬಾಧೆ: ರೈತ ಆತ್ಮಹತ್ಯೆ

Published:
Updated:

ವಿಜಾಪುರ: ಇಂಡಿ ತಾಲ್ಲೂಕು ಹೊರ್ತಿ ಗ್ರಾಮದ ರೇವಪ್ಪ ಶರಣಪ್ಪ ಮೇತ್ರಿ (38) ಎಂಬ ರೈತ ಸಾಲದ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಈತ ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಬ್ಯಾಂಕ್ ಹಾಗೂ ಖಾಸಗಿಯವರಲ್ಲಿ ರೂ.2 ಲಕ್ಷ ಸಾಲ ಮಾಡಿದ್ದ. ಮಳೆ ಸರಿಯಾಗಿ ಬಾರದ ಕಾರಣ ನೊಂದುಕೊಂಡು ತನ್ನ ಜಮೀನಿನ ಮನೆಯ ಎದುರಿನ  ಮಾವಿನ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಪತ್ನಿ ಜ್ಯೋತಿ ದೂರು ನೀಡಿದ್ದಾರೆ. ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಾವು: ಇಂಡಿ ಹತ್ತಿರ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಇಂಡಿಯ ಹಾಜಿಮಲಂಗ್ ಹಸನಸಾಬ್ ಮಾರಕಪ್ಪನಳ್ಳಿ (28) ಎಂಬ ಯುವಕ ವಿಜಾಪುರ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂಜಗಿ ಗ್ರಾಮದ ರವಿ ಯಲ್ಲಪ್ಪ ಗೌಡರ ಗಾಯಗೊಂಡಿದ್ದು, ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಂಧನ: ಸಿಂದಗಿ ತಾಲ್ಲೂಕು ದೇವರ ಹಿಪ್ಪರಗಿ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ ಯುನೂಸ್ ದಾವಲಸಾಬ್ ಮುಲ್ಲಾ (35) ಹಾಗೂ ಇತರ ಐವರನ್ನು ಬಂಧಿಸಿ, ರೂ 27,180 ನಗದು, ಮೂರು ಬೈಕ್, ಆರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವರ ಹಿಪ್ಪರಗಿ ಪಿಎಸ್‌ಐ ಎಚ್.ಎಂ. ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶಾಲೆಯಲ್ಲಿ ಕಳ್ಳತನ: ಬಸವನ ಬಾಗೇವಾಡಿ ತಾಲ್ಲೂಕಿನ ಕನ್ನಾಳ ಗ್ರಾಮದ ಕೆಬಿಎಚ್‌ಪಿ ಶಾಲೆಯ ಕೋಣೆ ಮುರಿದು ರೂ 13,000 ಮೌಲ್ಯದ ಬಿಸಿಯೂಟದ ಸಾಮಗ್ರಿ ಹಾಗೂ ಸಲ್ಲೊಡಗಿ ಗ್ರಾಮದ ಕೆಬಿಎಚ್‌ಪಿ ಶಾಲೆಯಲ್ಲಿ ರೂ 5,000 ಮೌಲ್ಯದ ತೊಗರಿ ಬೇಳೆ, ಅಕ್ಕಿ ಕಳ್ಳತನ ಮಾಡಲಾಗಿದೆ. ಬಸವನ ಬಾಗೇವಾಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.ಆತ್ಮಹತ್ಯೆ: ಇಂಡಿ ತಾಲ್ಲೂಕು ಚಿಕ್ಕಬೇವನೂರ ಗ್ರಾಮದಲ್ಲಿ ರಾವುತಪ್ಪ ಮಲ್ಲಪ್ಪ ದೊಡ್ಡಮನಿ (58) ಎಂಬಾತ ಅಮಲಿನಲ್ಲಿ ಮನೆಯಲ್ಲಿಯ ಫ್ಯಾನ್ ಹುಕ್ಕಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)