ಸಾಲು ಮರಗಳಿಗೆ ಕೊಡಲಿ: ಪ್ರಕರಣ ದಾಖಲು

ಶನಿವಾರ, ಮೇ 25, 2019
25 °C

ಸಾಲು ಮರಗಳಿಗೆ ಕೊಡಲಿ: ಪ್ರಕರಣ ದಾಖಲು

Published:
Updated:

ತಿಪಟೂರು: ತಾಲ್ಲೂಕಿನ ಗೌಡನಕಟ್ಟೆ ಗ್ರಾಮದ ದಾರಿ ಪಕ್ಕ ನಿರಂತರ ಜ್ಯೋತಿಗೆ ಅವೈಜ್ಞಾನಿಕವಾಗಿ ಕಂಬ ನೆಟ್ಟು ತಂತಿ ಎಳೆಯಲು 24 ಮರಗಳ ತಲೆ ಸವರಿದ್ದರ ವಿರುದ್ಧ ಅಲ್ಲಿನ ರೈತ ಸಂಘದವರು ಸಿಡಿದೆದ್ದು ಪರಿಸರಪ್ರೇಮ ಮೆರೆದಿದ್ದಾರೆ.ಗೌಡನಕಟ್ಟೆ ಗ್ರಾಮದ ದಾರಿ ಇಕ್ಕೆಲದಲ್ಲಿ 15 ವರ್ಷಗಳ ಹಿಂದೆ ಅರಣ್ಯ ಇಲಾಖೆಯವರು ನೆಟ್ಟಿದ್ದ ಆಲ, ಅರಳಿ, ನೇರಳೆ ಇತ್ಯಾದಿ ಜಾತಿಯ ನೂರಾರು ಸಾಲು ಮರಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು.ನಿರಂತರ ಜ್ಯೊತಿ ಯೋಜನೆಯಡಿ ಬಿದರೆಗುಡಿ ಸಮೀಪದಿಂದ ಗೌಡನಕಟ್ಟೆವರೆಗೆ ಪ್ರತ್ಯೇಕ ವಿದ್ಯುತ್ ಮಾರ್ಗ ಅಳವಡಿಸಲು ಈಚೆಗೆ ಕಾಮಗಾರಿ ಕೈಗೊಳ್ಳಲಾಗಿತ್ತು.ಎರಡು ತಿಂಗಳ ಹಿಂದೆ ಆ ಮರಗಳ ತಲೆ ಮೇಲೆ ತಂತಿ ಹಾದು ಹೋಗುವಂತೆ ಕಂಬ ನೆಡಲಾಗಿತ್ತು. ಇದರಿಂದ ಮರಗಳು ಸರ್ವನಾಶವಾಗುವ ಸೂಚನೆ ಅರಿತ ಗೌಡನಕಟ್ಟೆ ಮತ್ತು ಸುತ್ತಲಿನ ರೈತ ಸಂಘದವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.ಆದರೆ ಮೂರು ದಿನಗಳ ಹಿಂದೆ ತಂತಿ ಎಳೆಯಲು ಬಂದ ಕಾರ್ಮಿಕರು ಒಂದು ಮರವನ್ನು ಬುಡ ಸಮೇತ ಕಡಿದು 23 ಮರಗಳ ಎಲ್ಲ ಕೊಂಬೆ ಕಡಿದು ಹಾಕಿದರು. ಇದರಿಂದ ರೊಚ್ಚಿಗೆದ್ದ ರೈತ ಸಂಘದವರು ಮರ ಕಡಿಯುವುದನ್ನು ಮುಂದುವರೆಸದಂತೆ ತಡೆದರು. ಅರಣ್ಯ ಇಲಾಖೆಗೆ ದೂರು ನೀಡಿದರು.ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮರ ಕಡಿಯುವುದನ್ನು ಕೈಬಿಟ್ಟು ವಿದ್ಯುತ್ ಕಂಬದ ಮಾರ್ಗ ಬದಲಿಸುವಂತೆ ಸೂಚಿಸಿದ್ದಾರೆ. ಅಷ್ಟಲ್ಲದೆ ಗುತ್ತಿಗೆದಾರ ಚಿದಾನಂದ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.ಪತ್ರಕರ್ತರ ಜತೆ ಮಾತನಾಡಿದ ಆರ್‌ಎಫ್‌ಒ ಸತ್ಯನಾರಾಯಣ, ಮರಗಳ ಸಾಲಿನಲ್ಲಿ ಎರಡು ತಿಂಗಳ ಹಿಂದೆ ಕಂಬ ನೆಟ್ಟಾಗಲೇ ಬೆಸ್ಕಾಂಗೆ ಪತ್ರ ಬರೆದು ಮಾರ್ಗ ಬದಲಿಸುವಂತೆ ಸೂಚಿಸಲಾಗಿತ್ತು. ಆದರೆ ಇದನ್ನು ಆ ಅಧಿಕಾರಿಗಳು ನಿರ್ಲಕ್ಷಿಸಿ ಅದೇ ಮಾರ್ಗದಲ್ಲಿ ಕಂಬ ಮತ್ತು ತಂತಿ ಅಳವಡಿಸಲು ಗುತ್ತಿಗೆದಾರರಿಗೆ ಸಮ್ಮತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆ ಮತ್ತು ಗುತ್ತಿಗೆದಾರ ಚಿದಾನಂದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.ಗೌಡನಕಟ್ಟೆ ರೈತ ಸಂಘದ ಕಿರಣ್, ಚೇತನ್, ಶಶಿಭೂಷಣ್, ಗೌತಮ್, ಪರಮಶಿವಯ್ಯ, ದಿವಾಕರ್ ಮತ್ತಿತರರು ತಮ್ಮೂರಿನ ದಾರಿಯ ಸಾಲುಮರ ಉಳಿಸಲು ಹೋರಾಡಿ ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ. ಮರಗಳನ್ನು ಕೊಂದು ನಿರಂತರ ಜ್ಯೋತಿ ಅಳವಡಿಸುವುದಾದರೆ ಆ ಸೌಲಭ್ಯವೇ ತಮಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry