ಶನಿವಾರ, ಏಪ್ರಿಲ್ 17, 2021
27 °C

ಸಾಲ ಕುಂಠಿತಕ್ಕೆ ಕಳವಳ: ರೈತರ ಸಹಕಾರಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮುಂಗಡ ಠೇವಣಿ ಅನುಪಾತವು (ಸಿ.ಡಿ.ರೇಶಿಯೊ) ಕುಂಠಿತವಾಗಿ ಇರುವುದಕ್ಕೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದ್ದು, ಸಾಲ ಪರಿಷ್ಕರಣೆ ಮಾಡುವಾಗ ರೈತರು ಸಹಕರಿಸಿದರೆ ಅವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಸಾಧ್ಯವಾಗಬಹುದು ಎಂದು ತಿಳಿಸಿದೆ.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಬ್ಯಾಂಕ್‌ಗಳ 2012-13ನೇ ಸಾಲಿನ ಪ್ರಥಮ ತ್ರೈಮಾಸಿಕ ವ್ಯವಹಾರ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ಅಂಶಗಳು ಪ್ರಮುಖವಾಗಿ ಪ್ರಸ್ತಾಪಗೊಂಡವು. ಸಿ.ಡಿ.ಅನುಪಾತ ಶೇ 60ರಷ್ಟು ಇರಬೇಕು ಎಂದು ಆರ್‌ಬಿಐ ತಾಕೀತು ಮಾಡಿದೆ. ಸದ್ಯ ಜಿಲ್ಲೆಯಲ್ಲಿ ಸರಾಸರಿ ಶೇ 51ರಷ್ಟು ಮಾತ್ರ ಇದೆ. ಇದನ್ನು ಸುಧಾರಿಸುವತ್ತ ಹೆಚ್ಚಿನ ಪ್ರಯತ್ನ ನಡೆಸಬೇಕು ಎಂದು ಬೆಂಗಳೂರಿನಿಂದ ಬಂದ ಆರ್‌ಬಿಐ ಪ್ರತಿನಿಧಿ ವಿಜಯಕುಮಾರ್ ತಿಳಿಸಿದರು.ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸಿಂಡಿಕೇಟ್ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಜೆ.ಎಸ್.ಶೆಣೈ ಮಾತನಾಡಿ, ಆರ್‌ಬಿಐ ಸಾಲದ ವಿಚಾರದಲ್ಲಿ ಪರಿಷ್ಕರಣೆ ಮಾಡಿದಾಗ ರೈತರು ಪರಿಷ್ಕೃತ ದಾಖಲೆಗಳಿಗೆ ಸಹಿ ಹಾಕಬೇಕಾಗುತ್ತದೆ. ಆದರೆ ಕೆಲವೊಂದು ರೈತರು ಇದಕ್ಕೆ ಸಹಕರಿಸುತ್ತಿಲ್ಲ ಮತ್ತು ಉಳಿದ ರೈತರಿಗೂ ಸಹಿ ಹಾಕದಂತೆ ಸಲಹೆ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ಕೆಲವೊಂದು ಸೌಲಭ್ಯಗಳು ದೊರಕದೆ ಹೋಗುವ ಸಾಧ್ಯತೆ ಇದೆ ಎಂದರು.ಬ್ಯಾಂಕಿಂಗ್ ಪ್ರಗತಿ: ಆರ್ಥಿಕ ಹಿಂಜರಿತ ಇದ್ದರೂ ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಹಾರ ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಈ ಜೂನ್ ಅಂತ್ಯಕ್ಕೆ ಶೇ 27ರಷ್ಟು ವೃದ್ಧಿಯಾಗಿದೆ. ಬ್ಯಾಂಕಿಂಗ್ ವ್ಯವಹಾರ 34,645 ಕೋಟಿ ರೂಪಾಯಿ ಮೀರಿದೆ. ಇದರಲ್ಲಿ ಠೇವಣಿ 22,874 ಕೋಟಿ ಮತ್ತು ಸಾಲ 11,771 ಕೋಟಿ ರೂಪಾಯಿ ಎಂದು ಅವರು ಮಾಹಿತಿ ನೀಡಿದರು.ಠೇವಣಿ ಸಂಗ್ರಹದಲ್ಲಿ ಗ್ರಾಮೀಣ ಶಾಖೆಗಳ ಕೊಡುಗೆ ಶೇ 41ಕ್ಕೆ ಹೆಚ್ಚಿದ್ದು, ನಗರ ಪ್ರದೇಶಗಳ ಕೊಡುಗೆ ಶೇ 28ಕ್ಕೆ ಕುಸಿದಿದೆ. ರಾಜ್ಯದಲ್ಲಿ ಜಿಲ್ಲೆಯ ಬ್ಯಾಂಕಿಂಗ್ ವ್ಯವಹಾರದ ಪ್ರಮಾಣ ಕಳೆದ ವರ್ಷ ಜೂನ್‌ನಲ್ಲಿ ಶೇ 4.45ರಷ್ಟಿದ್ದರೆ, ಈ ವರ್ಷ ಜೂನ್ ವೇಳೆಗೆ 4.93ಕ್ಕೆ ಹೆಚ್ಚಿದೆ ಎಂದರು.ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಹೇಮಂತ ಭಿಡೆ ಮಾತನಾಡಿ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ಗಳು 1,225 ಕೋಟಿ ರೂಪಾಯಿ ಸಾಲ ನೀಡಬೇಕಿತ್ತು, ಆದರೆ ನೀಡಿರುವುದು 1,053 ಕೋಟಿ ರೂಪಾಯಿ ಮಾತ್ರ ಎಂದರು. ನೇಕಾರರ ಅನುಕೂಲಕ್ಕಾಗಿ ವೀವರ್ಸ್ ಕ್ರೆಡಿಟ್ ಕಾರ್ಡ್ ಯೋಜನೆ ಜಾರಿಯಾಗಿದ್ದರೂ ಸಾಲ ನೀಡಿಕೆಯಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ಆರ್‌ಬಿಐ ಆದೇಶದಂತೆ ಬ್ಯಾಂಕ್ ರಹಿತ ಜಿಲ್ಲೆಯ 368 ಗ್ರಾಮಗಳಿಗೆ ಬ್ಯಾಂಕಿಂಗ್ ಸೇವೆ ವಿಸ್ತರಿಸುವ ಕಾರ್ಯ ನಡೆಯುತ್ತಿದೆ. 2000ಕ್ಕಿಂತ ಅಧಿಕ ಜನಸಂಖ್ಯೆ ಇರುವ ಎಲ್ಲಾ 170 ಗ್ರಾಮಗಳಿಗೆ ವ್ಯವಹಾರ ಪ್ರತಿನಿಧಿಗಳ ಮೂಲಕ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. 2015ರ ಮಾರ್ಚ್ 31ರೊಳಗೆ 1000 ಸಾವಿರಕ್ಕಿಂತಲೂ ಕಡಿಮೆ ಇರುವ ಗ್ರಾಮಗಳ ಸಹಿತ ಎಲ್ಲಾ ಗ್ರಾಮಗಳಿಗೆ ವ್ಯವಹಾರ ಪ್ರತಿನಿಧಿಗಳ ಮೂಲಕ ಬ್ಯಾಂಕಿಂಗ್ ಸಂಪರ್ಕ ಕಲ್ಪಿಸಲಾಗುವುದು ಎಂದರು.ಜಿ.ಪಂ.ಸಿಇಒ ಕೆ.ಎನ್.ವಿಜಯಪ್ರಕಾಶ್ ಮಾತನಾಡಿ, ವಾಜಪೇಯಿ ವಸತಿ ಯೋಜನೆಗೆ ಸಂಬಂಧಿಸಿದಂತೆ ಅರ್ಜಿಗಳು 15 ದಿನದೊಳಗೆ ವಿಲೇವಾರಿ ಆಗುವಂತೆ ನೋಡಿಕೊಳ್ಳಬೇಕು ಎಂದು ಬ್ಯಾಂಕ್‌ಗಳನ್ನು ಕೇಳಿಕೊಂಡರು. ಆಡು ಸಾಕಣೆಯಲ್ಲಿ ಜಿಲ್ಲೆ ಮುಂಚೂಣಿಗೆ ಬರುವ ನಿಟ್ಟಿನಲ್ಲಿ ಅನುಭವಿಗಳು ಆಸಕ್ತ ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದರು.ಆಡು ಸಾಕಣೆ: ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಹಟ್ಟಿ ಪದ್ಧತಿಯಲ್ಲಿ ಆಡು ಸಾಕಣೆಗೆ ಬ್ಯಾಂಕ್‌ಗಳು ದೊಡ್ಡ ಪ್ರಮಾಣದಲ್ಲಿ ಸಾಲ ಸೌಲಭ್ಯ ಒದಗಿಸಿದ್ದು, ಹೀಗೆ ಆಡು ಸಾಕಣೆಗೆ ಮುಂದಾದ ಮೂವರು ಕೃಷಿಕರಾದ ಕೇಪುವಿನ ಮುಮ್ತಾಜ್ ಹುಸೇನ್, ಅಜ್ಜಿಬೆಟ್ಟುವಿನ ಶಿವಕುಮಾರ್ ಪೈಲೂರು ಮತ್ತು ಬಜತ್ತೂರಿನ ಕೇಶವ ಗೌಡ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಈ ತಿಂಗಳ ಕೊನೆಯಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಹೇಮಂತ ಭಿಡೆ ಅವರನ್ನು ಸಹ ಸನ್ಮಾನಿಸಲಾಯಿತು. ನಬಾರ್ಡ್ ಎಜಿಎಂ ಪ್ರಸಾದ್ ರಾವ್, ಜಿ.ಪಂ.ನ ಮುಖ್ಯ ಯೋಜನಾ ನಿರ್ದೇಶಕಿ ಎನ್.ಕೆ.ಸೀತಮ್ಮ, ಹಲವು ಬ್ಯಾಂಕ್‌ಗಳು ಪ್ರಮುಖರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.