ಶನಿವಾರ, ನವೆಂಬರ್ 23, 2019
18 °C
ಬ್ಯಾಂಕ್ ವಿರುದ್ಧ ರೈತರ ಆಕ್ರೋಶ

ಸಾಲ ಪಡೆದ ರೈತರ ಭಾವಚಿತ್ರ ಪ್ರದರ್ಶನ!

Published:
Updated:

ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಸಾಲ ಪಡೆದು ಮರುಪಾವತಿ ಮಾಡದಿರುವ ರೈತರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇದರಿಂದ ರೈತರಿಗೆ ಅವಮಾನವಾಗುವ ಕಾರಣ, ಕೂಡಲೇ, ಭಾವಚಿತ್ರಗಳನ್ನು ತೆಗೆದು ಹಾಕಬೇಕು ಎಂದು ರೈತರು ಆಗ್ರಹಿಸಿದರು.ನಗರದ ತೇರುಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಸೋಮವಾರ ನಡೆದ ತಾಲ್ಲೂಕು ರೈತ ಸಂಘದ ಸಭೆಯಲ್ಲಿ ಈ ಒತ್ತಾಯ ಕೇಳಿಬಂದಿತು.

ಹಲವು ಹೋರಾಟದ ನಂತರವೂ ತಾಲ್ಲೂಕಿನ ಸಮುದ್ರದಹಳ್ಳಿ ಸುತ್ತಮುತ್ತ ಸುವರ್ಣಮುಖಿ ನದಿಯಲ್ಲಿ ಅಕ್ರಮವಾಗಿ ಮರಳು ತುಂಬುವ ಕಾರ್ಯ ಮುಂದುವರಿದಿದ್ದು, ಇಲಾಖೆ ಅಧಿಕಾರಿಗಳು ಅಕ್ರಮ ತಡೆಯುವಲ್ಲಿ ವಿಫಲರಾಗಿದ್ದಾರೆ. ಈಗಾಗಲೇ 10-15 ಅಡಿವರೆಗೆ ಮರಳು ತುಂಬಿರುವ ಕಾರಣ ನದಿಯಲ್ಲಿ ನೀರು ಬತ್ತಿ ಹೋಗಿದೆ. ನದೀ ಪಾತ್ರಗಳ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.ಡಿ. 30ರಂದು ವಾಣಿವಿಲಾಸ ಜಲಾಶಯದ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನಾಲೆಗಳ ಮೂಲಕ ನೀರು ಬಿಡಲಾಗಿತ್ತು. ಈಗ ತೋಟದ ಬೆಳೆಗಳು ಒಣಗುತ್ತಿದ್ದು, ಕುಡಿಯುವ ನೀರಿಗೂ ತೊಂದರೆಯಾಗಿರುವ ಹಿನ್ನೆಲೆಯಲ್ಲಿ, ಏ. 15ರಿಂದ ಜಲಾಶಯದಿಂದ ನೀರು ಬಿಡುಗಡೆ ಮಾಡಬೇಕು. ವಾಣಿವಿಲಾಸ ಸಕ್ಕರೆ ಕಾರ್ಖಾನೆ ಮಾರಾಟ ಮಾಡಲು ಸಚಿವ ಸಂಪುಟದಲ್ಲಿ ಕೈಗೊಂಡಿರುವ ತೀರ್ಮಾನ ಕೈಬಿಡಬೇಕು.  ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ತುಳಸೀದಾಸ್, ಕೆ.ಸಿ. ಹೊರಕೇರಪ್ಪ, ಸಿ. ಸಿದ್ದರಾಮಣ್ಣ, ಎಂ.ಆರ್. ಪುಟ್ಟಸ್ವಾಮಿ, ಆಲೂರು ವೀರಣ್ಣ, ದಸ್ತಗೀರ್‌ಸಾಬ್, ಕೃಷ್ಣಾನಾಯ್ಕ, ಎಸ್.ಆರ್. ವಿಶ್ವನಾಥ್, ಗಂಗಾಧರಪ್ಪ, ವಿನೋದಮ್ಮ, ಸತೀಶ್‌ಕುಮಾರ್, ಅರುಣ್‌ಕುಮಾರ್, ಮಹಂತೇಶ್, ಪಿ.ಕೆ. ರಂಗನಾಥ್, ತಿಪ್ಪೇಸ್ವಾಮಿ, ಮುದ್ದಣ್ಣ, ನರಸಿಂಗಪ್ಪ, ಮೂರ್ತಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)