ಸಾಲ ಬಾಧೆ: ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ, ಮೂವರ ಸಾವು

7

ಸಾಲ ಬಾಧೆ: ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ, ಮೂವರ ಸಾವು

Published:
Updated:

ಬೆಂಗಳೂರು: ಸಾಲ ಬಾಧೆಯಿಂದ ಮನನೊಂದ ಕುಟುಂಬವೊಂದರ ಸದಸ್ಯರು ಮಕ್ಕಳಿಬ್ಬರಿಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಿ ನಂತರ ತಾವೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಲಪಾಳ್ಯದ ಕೊಕನಟ್ ಗಾರ್ಡನ್ ಸಮೀಪ ಸೋಮವಾರ ನಡೆದಿದೆ.ಘಟನೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಅಲ್ಲದೇ ಮಕ್ಕಳ ಅಜ್ಜಿ ಮತ್ತು ಮಾವ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಬನ್ನೇರುಘಟ್ಟ ನಿವಾಸಿ ವರಲಕ್ಷ್ಮಿ (30), ಅವರ ಮಕ್ಕಳಾದ ಸಿಂಚನಾ (6) ಮತ್ತು ಮೋಹನ್‌ಕುಮಾರ್ (3) ಮೃತಪಟ್ಟವರು. ವರಲಕ್ಷ್ಮಿ ಅವರ ತಾಯಿ ಪಾರ್ವತಮ್ಮ (65) ಹಾಗೂ ಅಣ್ಣ ಗೋಪಾಲಕೃಷ್ಣ (31) ಅವರು ಅಸ್ವಸ್ಥಗೊಂಡಿದ್ದಾರೆ. ಪಾರ್ವತಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ಜ್ಞಾನಭಾರತಿ ಪೊಲೀಸರು ತಿಳಿಸಿದ್ದಾರೆ.ವರಲಕ್ಷ್ಮಿ, ಪತಿ ರವಿಕುಮಾರ್ ಅವರಿಂದ ದೂರವಾಗಿ ಮಕ್ಕಳೊಂದಿಗೆ ತವರು ಮನೆಯಲ್ಲೇ ನೆಲೆಸಿದ್ದರು. ರವಿಕುಮಾರ್ ತಮಿಳುನಾಡಿನಲ್ಲಿ ವಾಸವಾಗಿದ್ದಾರೆ. ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಗೋಪಾಲಕೃಷ್ಣ ಸಾಕಷ್ಟು ನಷ್ಟ ಅನುಭವಿಸಿದ್ದರು. ಇದರಿಂದ ಬೇಸರಗೊಂಡಿದ್ದ ಅವರು ಕುಟುಂಬ ಸದಸ್ಯರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಅಂತೆಯೇ ಅವರು ಸಹೋದರಿ, ತಾಯಿ ಮತ್ತು ಸಹೋದರಿಯ ಮಕ್ಕಳ ಜತೆ ಸೋಮವಾರ ಮಧ್ಯಾಹ್ನ ಕಾರಿನಲ್ಲಿ ಕೊಕನಟ್ ಗಾರ್ಡನ್ ಬಡಾವಣೆಗೆ ಬಂದಿದ್ದಾರೆ. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ ಅವರು ತಂಪು ಪಾನೀಯದಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿದ್ದಾರೆ. ನಂತರ ಆ ಮೂರು ಮಂದಿಯೂ ಕುಡಿದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ವರಲಕ್ಷ್ಮಿ ಮತ್ತು ಮಕ್ಕಳು ಕಾರಿನಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.`ಫೈನಾನ್ಸ್ ವ್ಯವಹಾರದಲ್ಲಿ ಸುಮಾರು 40 ಲಕ್ಷ ರೂಪಾಯಿ ನಷ್ಟವಾಗಿತ್ತು. ಇದರಿಂದ ಸಾಕಷ್ಟು ಸಾಲ ಮಾಡಿದ್ದೆ. ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಕುಟುಂಬ ಸದಸ್ಯರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ~ ಎಂದು ಗೋಪಾಲಕೃಷ್ಣ ಪತ್ರ ಬರೆದಿಟ್ಟಿದ್ದಾರೆ. ಅಲ್ಲದೇ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸ್ನೇಹಿತ ತಿಮ್ಮಶೆಟ್ಟಿ ಎಂಬುವರ ಮೊಬೈಲ್‌ಗೆ ಮಧ್ಯಾಹ್ನ ಕರೆ ಮಾಡಿ ಕುಟುಂಬ ಸದಸ್ಯರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಇದರಿಂದ ಆತಂಕಗೊಂಡ ತಿಮ್ಮಶೆಟ್ಟಿ ಅವರು ಕೊಕನಟ್ ಗಾರ್ಡನ್ ಬಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಘಟನೆ ಸಂಬಂಧ ಕೊಲೆ, ಆತ್ಮಹತ್ಯೆ ಮತ್ತು ಆತ್ಮಹತ್ಯೆ ಯತ್ನ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry