ಸಾಲ ಮನ್ನಾ ಮಾಡದಿದ್ದರೆ ಹೋರಾಟ

7

ಸಾಲ ಮನ್ನಾ ಮಾಡದಿದ್ದರೆ ಹೋರಾಟ

Published:
Updated:
ಸಾಲ ಮನ್ನಾ ಮಾಡದಿದ್ದರೆ ಹೋರಾಟ

ಚಳ್ಳಕೆರೆ: ಬರಗಾಲದ ಸುಳಿಗೆ ಸಿಲುಕಿರುವ ಚಿತ್ರದುರ್ಗ ಜಿಲ್ಲೆಯ ರೈತರು ಕೃಷಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಸರ್ಕಾರ ಈ ಕೂಡಲೇ ಮನ್ನಾ ಮಾಡಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಸರ್ಕಾರ ಎಚ್ಚರಿಸಿದರು.ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಚುನಾವಣೆ ಸಮಯದಲ್ಲಿ ರೈತರು, ಜನಸಾಮಾನ್ಯರಿಂದ ಮತ ಪಡೆದ ರಾಜಕಾರಣಿಗಳು, ಅಧಿಕಾರಕ್ಕೆ ಬಂದ ಮೇಲೆ ಎಲ್ಲರನ್ನು ಕಡೆಗಣಿಸಿದ್ದಾರೆ. ಜನವಿರೋಧಿ ಆಡಳಿತ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಭುವಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.ರೈತರ ಸಾಲವನ್ನು ಮನ್ನಾ ಮಾಡಲು ನಮ್ಮನ್ನು ಆಳುವ ಸರ್ಕಾರಗಳು ಮೀನಾ-ಮೇಷ ಎಣಿಸಿದರೆ ರಾಜ್ಯ ರೈತ ಸಂಘವು ಸ್ವಯಂ ಘೋಷಣೆಯೊಂದಿಗೆ ಸಾಲ ಮನ್ನಾ ಮಾಡಿಕೊಳ್ಳಲಾಗುವುದು. ಅಧಿಕಾರಿಗಳು ಸಾಲ ಮರುಪಾವತಿಗೆ ಒತ್ತಾಯಿಸಿದರೆ ಮರುಪಾವತಿ ಮಾಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು.ಪ್ರಸಕ್ತ ವರ್ಷದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಮುಂಗಾರು ಬಿತ್ತನೆಗೆ ಅನುಕೂಲ ಆಗುವಂತೆ ಪ್ರತಿಯೊಬ್ಬ ರೈತನಿಗೆ 5 ಕ್ವಿಂಟಲ್ ಶೇಂಗಾ, 2 ಕ್ವಿಂಟಲ್ ರಸಗೊಬ್ಬರ ಕಡ್ಡಾಯವಾಗಿ ಮತ್ತು ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.ಮಳೆ ಇಲ್ಲದೇ ರೈತ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರೆ, ಇತ್ತ ರಾಜಕಾರಣಿಗಳು ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಸ್ವಾರ್ಥಕ್ಕೆ, ಸ್ವಜನ ಪಕ್ಷಪಾತಕ್ಕೆ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂಥವರು ಭಾರತದಂತಹ ಬಹು ದೊಡ್ಡ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ ಎಂದು ಗುಡುಗಿದರು.ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಟಿ. ರಾಮಚಂದ್ರರೆಡ್ಡಿ ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಬೆಳೆವಿಮೆ ನೀಡಬೇಕು ಹಾಗೂ ಬೆಳೆ ನಷ್ಟಕ್ಕಾಗಿ ಪ್ರತೀ ರೈತರಿಗೆ ್ಙ 10 ಸಾವಿರ ಪರಿಹಾರ ಧನ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.ಗ್ರಾಮೀಣ ಭಾಗದ ರೈತ ಇಂದು ಸರ್ಕಾರ ಕೊಡುತ್ತಿರುವ ವಿದ್ಯುತ್‌ನಿಂದ ನೀರಾವರಿ ಜಮೀನುಗಳಲ್ಲಿ ಬೆಳೆಗಳ ಫಸಲು ಪಡೆಯಲು ಆಗುತ್ತಿಲ್ಲ. ಅದ್ದರಿಂದ, ನಿರಂತರ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ನೆಹರೂ ವೃತ್ತದಲ್ಲಿ ರೈತರು ಮಾನವ ಸರಪಳಿ ನಿರ್ಮಿಸಿದರು. ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿದರು.ಈ ಸಂದರ್ಭದಲ್ಲಿ ಕೆ.ಜಿ. ಭೀಮಾರೆಡ್ಡಿ, ಮಹಾದೇವಪ್ಪ, ಪರಶುರಾಂ, ಚಿಕ್ಕಲಾಘಟ್ಟ ತಿಮ್ಮಣ್ಣ, ಸುರೇಶ್‌ಬಾಬು, ಬೆನಕನಹಳ್ಳಿ ಸತೀಶ, ಮಲ್ಲಿಕಾರ್ಜುನ, ನಾಗರಾಜು, ಎಚ್. ಗಿರೀಶ್ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry