ಸಾಲ ಮುಟ್ಟಿಸಲು ಹೋದವರು...

7

ಸಾಲ ಮುಟ್ಟಿಸಲು ಹೋದವರು...

Published:
Updated:

ಹುಣಸಗಿ: ಕಳೆದ ಎರಡು ವರ್ಷಗಳ ಹಿಂದೆ ಚಳ್ಳಕೆರೆ ಬಳಿ ಸಂಭವಿಸಿ ಭೀಕರ ಅಪಘಾತ ಮರೆಯುವ ಮುನ್ನವೇ ಮತ್ತೊಂದು ಅಪಘಾತದಲ್ಲಿ ಜಿಲ್ಲೆಯ ಮೂವರು ಸಾವನ್ನಪ್ಪಿದ್ದು, 15 ಜನರು ತೀವ್ರ ಗಾಯಗೊಂಡಿದ್ದಾರೆ.ವಾಹನದಲ್ಲಿ ಇದ್ದವರೆಲ್ಲರೂ ಸಂಬಂಧಿಕರೇ ಆಗಿದ್ದು, ಬಡತನದಲ್ಲಿದ್ದ ಎಲ್ಲರೂ ಕೂಲಿ ಅರಸಿ ರಾಜಧಾನಿ ಬೆಂಗಳೂರಿಗೆ ತೆರಳಿದ್ದರು. ಮದುವೆಯಾಗಿ ಮೂರು ತಿಂಗಳಾಗಿದ್ದ ಕಡದರಾಳದ ಯಲ್ಲಾಲಿಂಗ, ಅಕ್ಕನ ಹೆರಿಗೆಗೆಂದು ತಾಂಡಾಕ್ಕೆ ಆಗಮಿಸುತ್ತಿದ್ದ ಅನಸೂಬಾಯಿ, ಜುಮಾಲಪುರ ತಾಂಡಾದ ವಿನೋದ ಮೃತಪಟ್ಟವರು.“ಮದುವೆಯಾಗಿ ಮೂರು ತಿಂಗಳಾತು. ಮದ್ವಿ ಸಾಲ ತೀರಿಸಲಾಕ್ ಅಂತ ಬೆಂಗಳೂರಿಗೆ ದುಡಕೊಂಡ ಬರಮ ಅಂತ ಹೋಗಿದ್ದ. ಇದ ಮೊದಲ ಸಲ ಊರಿಗೆ ಬರಕತ್ತಿದ್ದ. ಆದರೆ ಈಗ ಬರಲಾದ ಜಾಗಕ್ಕೆ ಹೋಗಾನರೀ ಸಾಹೇಬರ” ಎಂದು ಕಡದರಾಳ ಗ್ರಾಮದ ಚಿನ್ನಮ್ಮ ಮತ್ತು ಹಣಮಂತಿ ರೋದಿಸುತ್ತಿರುವುದನ್ನು ನೋಡಿದರೆ ಅಲ್ಲಿದ್ದವರ ಕರುಳು ಹಿಂಡಿವಂತಿತ್ತು.ಭಾನುವಾರ ಚಳ್ಳಕೆರೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಸುರಪುರ ತಾಲ್ಲೂಕಿನ ಕಡದರಾಳ, ಬೈಲಾಪುರ ತಾಂಡಾ ಮತ್ತು ಜುಮಾಲಪುರ ತಾಂಡಾದಲ್ಲಿ ಮೂವರು ಮೃತಪಟ್ಟಿದ್ದು, ಈ ಎಲ್ಲ ಗ್ರಾಮಗಳಲ್ಲಿ ದುಃಖ ಮಡುಗಟ್ಟಿತ್ತು. ಕುಟುಂಬದ ರೋದನ ಮುಗಿಲುಮಟ್ಟಿತ್ತು.ಕಡದರಾಳ ಗ್ರಾಮದ ಯಲ್ಲಾಲಿಂಗ ಮುದ್ದಪ್ಪ ಮೇಟಿ (18). ಇತನಿಗೆ ಕಳೆದ ಮೂರು ತಿಂಗಳ ಹಿಂದೆ ಅವನ ಅಕ್ಕ ಹಣಮಂತಿಯವರ ಮಗಳೊಂದಿಗೆ ಮದುವೆಯಾಗಿತ್ತು. ಆದರೆ ಮದುವೆಗೆ ಮಾಡಲಾಗಿದ್ದ ಸಾಲ ಮುಟ್ಟಿಸಲೆಂದು ಇತನ ಅಣ್ಣ ನಿಂಗಣ್ಣ ಮತ್ತು ಕುಟುಂಬದವರೊಂದಿಗೆ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಭಾನುವಾರ ನಡೆದ ಅಪಘಾತದಲ್ಲಿ ಕುಟುಂಬದ ಐದು ಜನರಿದ್ದು, ಎಲ್ಲರಿಗೂ ಗಂಭೀರವಾಗಿ ಗಾಯವಾಗಿದೆ. ಮುತ್ತು ಎಂಬುವನ ಸ್ಥಿತಿ ಚಿಂತಾಜನಕವಾಗಿದ್ದು, ವಿಜಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ.ಆದರೆ ಆಸ್ಪತ್ರೆಗೆ ತೋರಿಸಲು ಹಣಕಾಸಿನ ತೊಂದರೆ ಇದೆ ಎಂದು ಚಿನ್ನಮ್ಮ ಅಳುತ್ತಲೇ ಹೇಳುತ್ತಿದ್ದರು.

ಬೈಲಾಪುರ ತಾಂಡಾದ ಕುಟುಂಬದ ಕಥೆ ಇನ್ನಷ್ಟು ಗಂಭೀರವಾಗಿದೆ. ಕೂಲಿ ಕೆಲಸ ಮಾಡುತ್ತಾ ದೇವಪ್ಪ ನಾಯಕ ಚವ್ವಾಣ ಎಂಬುವರು ಜೀವನ ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಯಲಹಂಕ ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದರು.

 

ಕಳೆದ ಒಂದು ವಾರದ ಹಿಂದೆ ಅಕ್ಕ ರೇಣುಕಾಬಾಯಿಯ ಹೆರಿಗೆ ಆಗಿದ್ದರಿಂದ ಮತ್ತು ಲಂಬಾಣಿ ಸಮಾಜದ ಸಸಿ ಹಬ್ಬ ಸಮೀಪಿಸಿದ್ದರಿಂದ ಹಬ್ಬಕ್ಕೆಂದು ತಾಂಡಾಕ್ಕೆ ಬರುತ್ತಿದ್ದ ಅನಸೂಬಾಯಿ ಚವ್ಹಾಣ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದೇ ತಾಂಡಾದ ಸಕ್ರಾನಾಯಕ ಅವರ ಹೆಂಡತಿ ಶಾರದಾ ಮತ್ತು ಮಕ್ಕಳಾದ ಸುನೀತಾ, ಸುರೇಶ, ಸಕ್ರಾನಾಯಕನ ಅಕ್ಕ ಕಸ್ತೂರಿಬಾಯಿ, ಮೋಹನ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದೇ ಅಪಘಾತದಲ್ಲಿ ಮೃತನಾದ ಜುಮಾಲಪೂರ ತಾಂಡಾದ ವಿನೋದ (22) ಈತನ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ಕುಟುಂಬಕ್ಕೆ ಈತನೆ ಆಧಾರವಾಗಿದ್ದ. ಈತನೇ ವಾಹನ ಚಲಾಯಿಸುತ್ತಿದ್ದ. ತುತ್ತಿನ ಚೀಲ ತುಂಬಲು ಕೂಲಿ ಅರಸಿ ಹೋದವರು ಜೀವನದ ಯಾತ್ರೆಯೇ ಮುಗಿಸಿದ್ದಾರೆ. ಅವರನ್ನೇ ಅವಲಂಬಿಸಿದ್ದ ಕುಟುಂಬದ ಜನರು ಇದೀಗ ನಿರ್ಗತಿಕರಾಗಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry